15,000 ಜನರ ಸಾಮೂಹಿಕ ಹತ್ಯೆಯೇ ಟಾರ್ಗೆಟ್...ಪೊಲೀಸರ ಮುಂದೆ ಭಯಾನಕ ಸತ್ಯ ಒಪ್ಪಿಕೊಂಡ ಫಯಾಜ್! Toxic Pills
- ಮೊಹರಂ ಮೆರವಣಿಗೆಯಲ್ಲಿ ವಿಷದ ಮಾತ್ರೆಗಳನ್ನು ವಿತರಣೆ ಮಾಡಿದ ಪ್ರಕರಣ
- ಪೊಲೀಸ್ ವಿಚಾರಣೆ ವೇಳೆ ಭಯಾನಕ ಸತ್ಯವನ್ನು ಒಪ್ಪಿಕೊಂಡ ಆರೋಪಿ ಫಯಾಜ್ ಪ್ರೇಮ್‌ಜಿ
- 15,000 ಜನರನ್ನು ಮುಗಿಸಲು ರೆಡಿಯಾಗಿದ್ದ 14,900 ವಿಷದ ಮಾತ್ರೆಗಳು ಜಪ್ತಿ!
- ಮೂವರು ಮಹಿಳೆಯರ ಸಮಯಪ್ರಜ್ಞೆಯಿಂದ ಬದುಕುಳಿದವು ಸಾವಿರಾರು ಜೀವಗಳು
ಮುಂಬೈ: ಇಲ್ಲಿನ ಬೈಕುಲ್ಲಾ ಪ್ರದೇಶದಲ್ಲಿ ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ವಿಷದ ಮಾತ್ರೆಗಳನ್ನು ( Toxic Pills ) ವಿತರಿಸಿ ಸಾಮೂಹಿಕ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿತರಿಸಿದ ಮಾತ್ರೆಗಳನ್ನು ಸೇವಿಸಿದ ಸುಮಾರು 11 ಜನರು ದೈಹಿಕ ಅಸ್ವಸ್ಥತೆಗೆ ಒಳಗಾದ ನಂತರ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಫಯಾಜ್ ಪ್ರೇಮ್‌ಜಿ, ರೇ ರಸ್ತೆಯಲ್ಲಿರುವ ರಹಮತಾಬಾದ್ ಸ್ಮಶಾನದ ಬಳಿ ನಡೆದ ಆಶುರಾ ಮೆರವಣಿಗೆಯ ಸಂದರ್ಭದಲ್ಲಿ ಈ ವಿಷದ ಮಾತ್ರೆಗಳನ್ನು ವಿತರಿಸಿದ್ದನು. ಅಲ್ಲಿ ನೆರೆದಿದ್ದ ಜನಸಂದಣಿಯ ದುರುಪಯೋಗ ಪಡೆದುಕೊಂಡ ಆತ, ಅವು ನೋವು ನಿವಾರಕ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳೆಂದು ಜನರನ್ನು ನಂಬಿಸಿ ಕೆಲ ಜನರಿಗೆ ಮಾತ್ರೆಗಳನ್ನು ಹಂಚಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತನಿಖೆಯ ವೇಳೆ, ಆರೋಪಿ ಹಂಚಿದ ಕ್ಯಾಪ್ಸುಲ್‌ಗಳಲ್ಲಿ 'ಜಿಂಕ್ ಫಾಸ್ಫೈಡ್' ಎಂಬ ಅತ್ಯಂತ ವಿನಾಶಕಾರಿ ವಿಷಕಾರಿ ಅಂಶ ಇರುವುದು ದೃಢಪಟ್ಟಿದೆ. ಇದು ಸಾಮಾನ್ಯವಾಗಿ ಇಲಿ ಪಾಷಾಣ ಹಾಗೂ ಕೀಟನಾಶಕಗಳಲ್ಲಿ ಬಳಸುವ ಅತ್ಯಂತ ಅಪಾಯಕಾರಿ ರಾಸಾಯನಿಕವಾಗಿದೆ. ವಿಚಾರಣೆಯ ಸಂದರ್ಭದಲ್ಲಿ, ಮೆರವಣಿಗೆಯಲ್ಲಿದ್ದ ಕನಿಷ್ಠ 15,000 ಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡುವುದೇ ತನ್ನ ಗುರಿಯಾಗಿತ್ತು ಎಂದು ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಈ ಸಂಚನ್ನು ಮುಂಚಿತವಾಗಿಯೇ ಪತ್ತೆಹಚ್ಚಿದ ಮೂವರು ಮಹಿಳಾ ಸ್ವಯಂಸೇವಕರ ಸಮಯಪ್ರಜ್ಞೆಯಿಂದ ಹತ್ತಾರು ಸಾವಿರ ಜನರ ಪ್ರಾಣ ಉಳಿದಿದೆ. ಫಯಾಜ್ ಪ್ರೇಮ್‌ಜಿ ಅನುಮಾನಾಸ್ಪದವಾಗಿ ಮಾತ್ರೆಗಳನ್ನು ಹಂಚುತ್ತಿರುವುದನ್ನು ಗಮನಿಸಿದ ಈ ಮಹಿಳೆಯರು, ತಕ್ಷಣವೇ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆ ಕ್ಯಾಪ್ಸುಲ್‌ಗಳನ್ನು ತೆರೆದು ಪರಿಶೀಲಿಸಿದಾಗ ಅದರೊಳಗೆ ಅನುಮಾನಾಸ್ಪದ ಪುಡಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ, ಮೆರವಣಿಗೆಯಲ್ಲಿದ್ದ ಯಾರೂ ಸಹ ಈ ಮಾತ್ರೆಗಳನ್ನು ಸೇವಿಸಬಾರದು ಎಂದು ಧ್ವನಿವರ್ಧಕದ ಮೂಲಕ ತಕ್ಷಣವೇ ಪ್ರಕಟಣೆ ಹೊರಡಿಸಿ ಜನರನ್ನು ಎಚ್ಚರಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಪೊಲೀಸರು ಆರೋಪಿಯಿಂದ 14,900 ವಿಷದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಇದಕ್ಕೂ ಮುನ್ನವೇ ಆತ ಭಾರಿ ಪ್ರಮಾಣದ ಮಾತ್ರೆಗಳನ್ನು ಜನರಿಗೆ ವಿತರಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರ ಜೊತೆಗೆ, ಆರೋಪಿಯು ಬರೋಬ್ಬರಿ 30,000 ಖಾಲಿ ಕ್ಯಾಪ್ಸುಲ್‌ಗಳು ಮತ್ತು 50 ಕೆಜಿ ಫಾಸ್ಫರಸ್ ಖರೀದಿಗೆ ಆರ್ಡರ್ ಮಾಡಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇನ್ನು ಆತ ನೀಡಿದ ಮಾತ್ರೆಗಳನ್ನು ಸೇವಿಸಿ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 11 ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದೆಡೆ, ಬಂಧಿತ ಆರೋಪಿಗೆ ವಿದೇಶಿ ನಂಟಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈತ ಈ ಹಿಂದೆ ಇರಾನ್ ಮತ್ತು ಇರಾಕ್ ದೇಶಗಳಿಗೆ ಭೇಟಿ ನೀಡಿರುವುದು ಪತ್ತೆಯಾಗಿದ್ದು, ಈ ಭೀಕರ ಸಾಮೂಹಿಕ ಹತ್ಯೆಯ ಸಂಚಿನ ಹಿಂದೆ ಯಾವುದಾದರೂ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆಯೇ ಎಂಬ ಕೋನದಲ್ಲಿ ಪೊಲೀಸರು ಇದೀಗ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಜಿಂಕ್ ಫಾಸ್ಫೈಡ್ ಎಷ್ಟು ಅಪಾಯಕಾರಿ?
ಜಿಂಕ್ ಫಾಸ್ಫೈಡ್ ಎಂಬುದು ಅತ್ಯಂತ ಪ್ರಾಣಾಪಾಯ ಉಂಟುಮಾಡುವ ವಿಷಕಾರಿ ರಾಸಾಯನಿಕವಾಗಿದೆ. ಇದು ದೇಹದೊಳಗೆ ಸೇರಿದ ತಕ್ಷಣ ಜಠರದಲ್ಲಿರುವ ಆಮ್ಲದೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗಿ, ಅತ್ಯಂತ ಮಾರಕವಾದ 'ಫಾಸ್ಫಿನ್' ಅನಿಲವನ್ನು ಬಿಡುಗಡೆ ಮಾಡುತ್ತದೆ. ಈ ಅನಿಲವು ಮಾನವ ದೇಹದ ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಮತ್ತು ಮೆದುಳಿನ ಮೇಲೆ ನೇರವಾಗಿ ದಾಳಿ ನಡೆಸಿ ಅವು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುವಂತೆ ಮಾಡುತ್ತದೆ. ಎಲ್ಲಕ್ಕಿಂತ ಆತಂಕಕಾರಿ ವಿಷಯವೆಂದರೆ, ಈ ಭೀಕರ ವಿಷಕ್ಕೆ ಯಾವುದೇ ನಿರ್ದಿಷ್ಟ ಪ್ರತಿವಿಷ ಲಭ್ಯವಿಲ್ಲ, ಹಾಗಾಗಿ, ಇದು ದೇಹ ಸೇರಿದ ತಕ್ಷಣ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಹಾಗೂ ವೆಂಟಿಲೇಟರ್ ಬೆಂಬಲವನ್ನು ನೀಡುವ ಮೂಲಕ ಮಾತ್ರವೇ ಪ್ರಾಣ ಉಳಿಸಲು ಸಾಧ್ಯವಿರುವ ಏಕೈಕ ಮಾರ್ಗವಾಗಿದೆ, (ಏಜೆನ್ಸೀಸ್).