Lashkar commander | ಉಗ್ರ ಸಂಘಟನೆಯ ಟಾಪ್ ಕಮಾಂಡರ್ ನಿವಾಸದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪೋಷಕರು 
ದೇಶ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ನಿವಾಸದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪೋಷಕರು | Lashkar commander

ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಟಾಪ್ ಕಮಾಂಡರ್ (Lashkar commander) ಆಬಿದ್ ರಮ್ಜಾನ್ ಶೇಖ್ ಪೋಷಕರು ಶೋಪಿಯಾನ್ನಲ್ಲಿರುವ ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ, ಅದನ್ನು ಪ್ರದರ್ಶಿಸಿರುವುದು ಕಂಡುಬಂದಿದೆ.

ಆಬಿದ್ ಶೇಖ್ ಪ್ರಸ್ತುತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಹೇಳಲಾಗುತ್ತಿದ್ದು, ಕಣಿವೆ ಪ್ರದೇಶದಲ್ಲಿ ನಡೆದ ಹಲವಾರು ಭಯೋತ್ಪಾದನಾ ಕೃತ್ಯಗಳಲ್ಲಿ ಈತನ ಪ್ರಮುಖ ಪಾತ್ರವಿದೆ. ಹೀಗಾಗಿ ಈತ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳ ಹಿಟ್ ಲಿಸ್ಟ್‌ನಲ್ಲಿದ್ದಾನೆ (ಮೋಸ್ಟ್ ವಾಂಟೆಡ್). ಕಾಶ್ಮೀರದಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ನಡೆದ ದಾಳಿಗಳಿಗೆ ಈತನೇ ಆದೇಶ ನೀಡಿದ್ದ ಎನ್ನಲಾಗಿದೆ. ಇಂತಹ ಹಿನ್ನೆಲೆಯಿರುವಾಗ, ಶೇಖ್ ತಂದೆ ಮತ್ತು ತಾಯಿ ಇಬ್ಬರೂ ಸೇರಿ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಸನ್ನಿವೇಶವು ಎಲ್ಲರ ಗಮನಸೆಳೆದಿದೆ.
ಈ ಬೆಳವಣಿಗೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಮತ್ತೊಂದು ಘಟನೆಯನ್ನು ನೆನಪಿಸುತ್ತದೆ. ಅಂದು ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯ ತಂದೆ ಮುಜಾಫರ್ ವಾನಿ ರಾಷ್ಟ್ರಧ್ವಜವನ್ನು ಹಾರಿಸಿದ್ದರು. ಶಿಕ್ಷಕರಾಗಿದ್ದ ಹಾಗೂ ಅಂದಿನ ಸರ್ಕಾರಿ ಶಾಲೆಯ ಪ್ರಾಂಶುಪಾಲರಾಗಿದ್ದ ಮುಜಾಫರ್ ವಾನಿ ಶಾಲೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ, ಇತರ ಶಿಕ್ಷಕರೊಂದಿಗೆ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ್ದರು. ಬುರ್ಹಾನ್ ವಾನಿ ಕಾಶ್ಮೀರ ಕಣಿವೆಯ ಯುವಕರಲ್ಲಿ ಉಗ್ರವಾದದ ಪ್ರಮುಖ ಮುಖಗಳಲ್ಲಿ ಒಬ್ಬನಾಗಿದ್ದ. ಆತನ 20ರ ಹರೆಯದಲ್ಲೇ ಎನ್‌ಕೌಂಟರ್‌ನಲ್ಲಿ ಇತರ ಇಬ್ಬರು ಉಗ್ರರೊಂದಿಗೆ ಹತ್ಯೆಯಾಗಿದ್ದು, ಇದು ಕಣಿವೆಯಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು.

ಈ ನಡುವೆ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಂತಿಯುತವಾಗಿ ಆಚರಿಸಲಾಯಿತು. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, 2019ರ ಆಗಸ್ಟ್‌ನಲ್ಲಿ ರದ್ದುಗೊಳಿಸಲಾದ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಹಾಗೂ ಇತರ ಸಾಂವಿಧಾನಿಕ ಗ್ಯಾರಂಟಿಗಳನ್ನು ಮರುಸ್ಥಾಪಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಶನಿವಾರ ಲೋಕ ಭವನದಲ್ಲಿ ರಾಷ್ಟ್ರಧ್ವಜ ಹಾರಿಸಿ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುವ ಮತ್ತು ಹಿಂದುಳಿದವರಿಗೆ ಅನುಕಂಪವನ್ನು ತೋರುವ ಒಳಗೊಳ್ಳುವ ಸಮಾಜವನ್ನು ಬೆಳೆಸಲು ನಾಗರಿಕರು ಒಗ್ಗೂಡಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು