ಗೂಗಲ್ ಮ್ಯಾಪ್​ನ ಈ ಸಣ್ಣ ಸೆಟ್ಟಿಂಗ್ ಬದಲಿಸಿ ಟೋಲ್ ಹಾಗೂ ಇಂಧನ ಖರ್ಚಿಗೆ ಬ್ರೇಕ್ ಹಾಕಿ..! Google Maps 
ದೇಶ

ಗೂಗಲ್ ಮ್ಯಾಪ್​ನ ಈ ಸಣ್ಣ ಸೆಟ್ಟಿಂಗ್ ಬದಲಿಸಿ ಟೋಲ್ ಹಾಗೂ ಇಂಧನ ಖರ್ಚಿಗೆ ಬ್ರೇಕ್ ಹಾಕಿ..! Google Maps

ಪ್ರಮುಖ ಮುಖ್ಯಾಂಶಗಳು

  • ಪ್ರಯಾಣದ ಖರ್ಚು ಕಡಿಮೆ ಮಾಡಲು ಮ್ಯಾಪ್ಸ್‌ನಲ್ಲಿ ಈ ಫೀಚರ್‌ಗಳನ್ನು ಆನ್ ಮಾಡಿ
  • ಜೇಬಿನ ಕಾಸು ಉಳಿಸಬೇಕೆ? ಹಾಗಾದರೆ ಗೂಗಲ್ ಮ್ಯಾಪ್ಸ್‌ನ ಈ ಸೆಟ್ರಿಂಗ್ಸ್ ನಿಮಗೆ ಮಸ್ಟ್
  • ಟೋಲ್ ಶುಲ್ಕ ಹಾಗೂ ಪೆಟ್ರೋಲ್ ಹಣ ಉಳಿಸಲು ಗೂಗಲ್ ಮ್ಯಾಪ್ಸ್‌ನ ಈ ಟ್ರಿಕ್ ಬಳಸಿ
Google Maps : ಇಂದಿನ ಡಿಜಿಟಲ್​ ಯುಗದಲ್ಲಿ ಸಾವಿರಾರು ಆ್ಯಪ್​ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಕೆಲವೊಂದು ಆ್ಯಪ್​ಗಳು ಕಡ್ಡಾಯವಾಗಿ ಎಲ್ಲರ ಮೊಬೈಲ್​ನಲ್ಲೂ ಇದ್ದೇ ಇರುತ್ತದೆ. ಅವುಗಳಲ್ಲಿ ಒಂದು ಗೂಗಲ್​ ಮ್ಯಾಪ್​. ಪ್ರಯಾಣಿಕರ ಅತ್ಯಾವಶ್ಯಕ ಡಿಜಿಟಲ್ ಮಾರ್ಗದರ್ಶಿಯಾಗಿರುವ ಈ ಗೂಗಲ್ ಮ್ಯಾಪ್​ ಕೇವಲ ದಾರಿ ತೋರಿಸುವುದಕ್ಕೆ ಮಾತ್ರವಲ್ಲದೆ, ಇದರಲ್ಲಿರುವ ಕೆಲವು ರಹಸ್ಯ ಸೆಟ್ಟಿಂಗ್‌ಗಳನ್ನು ಬದಲಾಯಿಸಿಕೊಳ್ಳುವುದರ ಮೂಲಕ ನೀವು ಇಂಧನ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬಹುದು, ಟೋಲ್ ಶುಲ್ಕವನ್ನು ಉಳಿಸಬಹುದು ಹಾಗೂ ಅತಿಯಾದ ವೇಗದ ದಂಡದಿಂದಲೂ ಸುಲಭವಾಗಿ ಪಾರಾಗಬಹುದು.

ಇಕೋ-ಫ್ರೆಂಡ್ಲಿ ರೂಟ್

ಇಂದಿನ ಇಂಧನ ಬೆಲೆಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಪೆಟ್ರೋಲ್​ ಹಾಗೂ ಡೀಸೆಲ್​ ಬೆಲೆ ಕೇಳಿದರೆ ಸಾಕು ಒಂದು ಕ್ಷಣ ಚಿಂತೆಗೆ ಜಾರುವಂತಿದೆ. ಇಂಧನ ದರ ಗಗನಕ್ಕೇರಿರುವ ಈ ಕಾಲದಲ್ಲಿ, ಗೂಗಲ್ ಮ್ಯಾಪ್ಸ್‌ನಲ್ಲಿರುವ 'ಇಕೋ-ಫ್ರೆಂಡ್ಲಿ ರೂಟ್' (Eco-friendly route) ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳುವುದರಿಂದ ಕಡಿಮೆ ಇಂಧನ ಬಳಕೆಯಾಗುವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದನ್ನು ಮಾಡಲು ಮೊದಲು ಅಪ್ಲಿಕೇಶನ್ ತೆರೆದು ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ, ನಂತರ ಸೆಟ್ಟಿಂಗ್‌ಗಳಲ್ಲಿ ನ್ಯಾವಿಗೇಷನ್ ಆಯ್ಕೆಗಳನ್ನು ತೆರೆದು 'Prefer fuel-efficient routes' ಆಯ್ಕೆಯನ್ನು ಆನ್ ಮಾಡಿ.

ಅವಾಯ್ಡ್​ ಟೋಲ್ಸ್​

ದೂರದ ಪ್ರಯಾಣಗಳಲ್ಲಿ ಟೋಲ್ ಗೇಟ್‌ಗಳ ಮೂಲಕ ಸಾಕಷ್ಟು ಹಣ ಖರ್ಚಾಗುತ್ತದೆ. ಇದನ್ನು ಉಳಿಸಲು ಗೂಗಲ್ ಮ್ಯಾಪ್ಸ್‌ನಲ್ಲಿರುವ 'Avoid tolls' ಫೀಚರ್ ಬಹಳ ಉಪಯುಕ್ತವಾಗಿದ್ದು, ರೂಟ್ ಆಯ್ಕೆಗಳಲ್ಲಿ ಈ ಫೀಚರ್ ಅನ್ನು ಆನ್ ಮಾಡಿದರೆ ಟೋಲ್ ಇಲ್ಲದ ಪರ್ಯಾಯ ಮಾರ್ಗಗಳನ್ನು ಮ್ಯಾಪ್ಸ್ ಸ್ವಯಂಚಾಲಿತವಾಗಿ ತೋರಿಸುತ್ತದೆ.

ಸ್ಪೀಡ್​ ಮೀಟರ್​ ಅಥವಾ ಸ್ಪೀಡ್​ ಲಿಮಿಟ್ಸ್​

ಹೈವೇಗಳಲ್ಲಿ ಚಾಲನೆ ಮಾಡುವಾಗ ವೇಮಮಿತಿ ಮೀರಿದರೆ ದೊಡ್ಡ ಮೊತ್ತದ ದಂಡ ಬೀಳುತ್ತದೆ. ಇದನ್ನು ತಪ್ಪಿಸಲು ನ್ಯಾವಿಗೇಷನ್ ಸೆಟ್ಟಿಂಗ್‌ಗಳಲ್ಲಿ 'Speedometer' ಮತ್ತು 'Speed Limits' ಆನ್ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ ನೀವು ಸಾಗುವ ರಸ್ತೆಯ ವೇಗದ ಮಿತಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ, ಜೊತೆಗೆ ವೇಗ ಮೀರಿದಾಗ ಸ್ಪೀಡೋಮೀಟರ್ ಬಣ್ಣ ಬದಲಾಯಿಸಿ ಎಚ್ಚರಿಕೆ ನೀಡುತ್ತದೆ.
ಕೇವಲ ಸ್ಥಳವನ್ನು ಹುಡುಕುವುದು ಮಾತ್ರವಲ್ಲದೆ, ಈ ಸಣ್ಣ ಸೆಟ್ಟಿಂಗ್‌ಗಳನ್ನು ಬಳಸುವುದರಿಂದ ನಿಮ್ಮ ಪ್ರಯಾಣವು ಸುರಕ್ಷಿತವಾಗುವುದರ ಜೊತೆಗೆ ಹಣವೂ ಉಳಿತಾಯವಾಗುತ್ತದೆ. ಆದ್ದರಿಂದ ನಿಮ್ಮ ಮುಂದಿನ ಪ್ರವಾಸದ ಮೊದಲು ಈ ಸೆಟ್ಟಿಂಗ್‌ಗಳನ್ನು ಆನ್ ಮಾಡಲು ಮರೆಯದಿರಿ!
ಗಮನಿಸಿ: ಇಂಧನ ಉಳಿತಾಯ ಮತ್ತು ಪರ್ಯಾಯ ಮಾರ್ಗಗಳು ವಿವಿಧ ಪ್ರದೇಶಗಳು ಹಾಗೂ ರಸ್ತೆಯ ಪ್ರಕಾರಗಳಿಗೆ ತಕ್ಕಂತೆ ಬದಲಾಗುತ್ತವೆ. ಪ್ರಯಾಣಿಸುವ ಮೊದಲು ಸ್ಥಳೀಯ ರಸ್ತೆಯ ಪರಿಸ್ಥಿತಿಯನ್ನು ಸಹ ಪರಿಶೀಲಿಸಬಹುದು, (ಏಜೆನ್ಸೀಸ್​).