ರಾಜ್ಯಸಭೆಯ ವಿರೋಧ ಪಕ್ಷದ ಉಪನಾಯಕ ಮತ್ತು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ
ನವದೆಹಲಿ: ನಾಳೆಯಿಂದ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ(winter session) ಆಡಳಿತಾರೂಢ ಬಿಜೆಪಿಯು ಭಾರತದ ಚುನಾವಣಾ ಆಯೋಗದೊಂದಿಗೆ ಮತ ಕಳ್ಳತನದ ವಿಷಯವನ್ನು ಪ್ರತಿಪಕ್ಷಗಳು ಎತ್ತಲಿವೆ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಭಾನುವಾರ (ನವೆಂಬರ್,30) ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಿವಾರಿ, ಪ್ರಜಾಪ್ರಭುತ್ವವನ್ನು ಕೊಲೆ ಮಾಡಿ ಕೇವಲ ಮತ ದರೋಡೆ ನಡೆಸಲಾಗುತ್ತಿರುವಾಗ, ಇದು ಒಂದು ಸಮಸ್ಯೆಯಾಗುತ್ತದೆ ಎಂದಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿದಾಗ , ಅದು ಒಂದು ಸಮಸ್ಯೆಯಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿ ಹದಗೆಟ್ಟಿದೆ. ಈ ಎಲ್ಲಾ ವಿಷಯಗಳನ್ನು ಎತ್ತಲಾಗುವುದು. ಚಳಿಗಾಲದ ಅಧಿವೇಶನ ಸೋಮವಾರ (ಡಿ.1) ಪ್ರಾರಂಭವಾಗಿ ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ.
ವಿಪಕ್ಷಗಳು ಸಹಕರಿಸಲಿ
ಚಳಿಗಾಲದ ಅಧಿವೇಶನದಲ್ಲಿ ಸುಗಮ ಕಲಾಪಕ್ಕಾಗಿ ಕೇಂದ್ರ ಸರ್ಕಾರ ವಿರೋಧ ಪಕ್ಷಗಳೊಂದಿಗೆ ತೊಡಗಿಸಿಕೊಳ್ಳಲು ಬದ್ಧವಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದಾರೆ. ಸಂಸತ್ತು ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ, ಅದು ರಾಷ್ಟ್ರಕ್ಕೆ ಸೇರಿದ್ದು, ಆದ್ದರಿಂದ ವಿರೋಧ ಪಕ್ಷಗಳ ನಾಯಕರು ಎಲ್ಲ ರೀತಿಯಲ್ಲೂ ಸಹಕರಿಸುವಂತೆ ಮನವಿ ಮಾಡಿದರು.
ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ರಿಜಿಜು, ನಾವು ವಿರೋಧ ಪಕ್ಷದ ಮಾತುಗಳನ್ನು ಸಕಾರಾತ್ಮಕ ಮನೋಭಾವದಿಂದ ಕೇಳಲು ಸಿದ್ಧರಿದ್ದೇವೆ. ಸಂಸತ್ತು ಇಡೀ ದೇಶಕ್ಕೆ ಸೇರಿದ್ದು, ಪ್ರತಿಯೊಂದು ವಿಷಯವನ್ನು ಇಲ್ಲಿ ಚರ್ಚಿಸಲು ಅವಕಾಶವಿದೆ, ಆದರೆ ಅದಕ್ಕೆ ಒಂದು ನಿರ್ದಿಷ್ಟ ಕಾರ್ಯವಿಧಾನವಿದೆ, ಅದರ ಪ್ರಕಾರವೇ ಎಲ್ಲ ನಡೆಯಲಿ ಎಂದು ಹೇಳಿದರು. ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನವು ಡಿಸೆಂಬರ್ 19 ರಂದು ಮುಕ್ತಾಯಗೊಳ್ಳಲಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಸಂಕ್ಷಿಪ್ತ ಚಳಿಗಾಲದ ಅಧಿವೇಶನಗಳಲ್ಲಿ ಒಂದಾಗಿದೆ,(ಏಜೆನ್ಸೀಸ್).