Vishakha Rathod (ಚಿತ್ರ X) 
ದೇಶ

ಗಂಡನ ಬಂಧನದ ಬೆನ್ನಲ್ಲೇ ಹೆಂಡತಿಯೂ ಲಾಕ್!... 88 ಕೋಟಿ ರೂ ವಂಚಿಸಿದ್ದ ವಿಶಾಖಾ ರಾಠೋಡ್ ಯುಎಇಯಿಂದ ಗಡಿಪಾರು ! Vishakha Rathod

ಪುಣೆ: ಮಲ್ಟಿ ಕ್ರೋಡ್ ಆರ್ಥಿಕ ವಂಚನೆ ಪ್ರಕರಣದಲ್ಲಿ ದೇಶ ತೊರೆದು ತಲೆಮರೆಸಿಕೊಂಡಿದ್ದ ಆರೋಪಿ ವಿಶಾಖಾ ರಾಠೋಡ್‌ (

Vishakha Rathod) 

ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಿಂದ ಯಶಸ್ವಿಯಾಗಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಕೇಂದ್ರ ತನಿಖಾ ದಳ (ಸಿಬಿಐ), ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಗೃಹ ಸಚಿವಾಲಯದ ಜಂಟಿ ಕಾರ್ಯಾಚರಣೆಯ ಫಲವಾಗಿ ಈ ಪ್ರಮುಖ ಬೆಳವಣಿಗೆ ಸಾಧ್ಯವಾಗಿದೆ. 

ಇಂಟರ್‌ಪೋಲ್‌ನ ರೆಡ್ ನೋಟಿಸ್‌ ಎದುರಿಸುತ್ತಿದ್ದ ವಿಶಾಖಾ ಅವರನ್ನು ಆಗಸ್ಟ್ 3, 2026 ರಂದು ಭಾರತಕ್ಕೆ ಕರೆತರಲಾಗಿದ್ದು, ಮಹಾರಾಷ್ಟ್ರ ಪೊಲೀಸರ ತಂಡವು ಪುಣೆಯಲ್ಲಿ ವಶ ಪಡೆದುಕೊಂಡಿದ್ದಾರೆ. 
ಈ ಅಕ್ರಮದ ಮಾಸ್ಟರ್ ಮೈಂಡ್ ಎನಿಸಿಕೊಂಡಿರುವ ಅವಿನಾಶ್ ರಾಠೋಡ್ ಅವರ ಪತ್ನಿಯೇ ಈ ವಿಶಾಖಾ ರಾಠೋಡ್.‌ ದಂಪತಿ ಸೇರಿ ಸುಮಾರು 88 ಕೋಟಿ ರೂ. ವಂಚನೆ ಎಸಗಿರುವ ಆರೋಪವಿದೆ. ಮಾಸಿಕ ನಿಗದಿತ ಲಾಭಾಂಶ ನೀಡುವ ಭರವಸೆ ನೀಡಿ ಅನೇಕ ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ, ನಕಲಿ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದರು. ನಂತರ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡು, ವಿವಿಧ ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಸಿಬಿಐ ಅಧಿಕಾರಿಗಳು ಇಂಟರ್‌ಪೋಲ್ ಮೂಲಕ ವಿಶಾಖಾ ವಿರುದ್ಧ ರೆಡ್ ನೋಟಿಸ್ ಹೊರಡಿಸಿದ್ದರು. ಭಾರತದ ಇಂಟರ್‌ಪೋಲ್ ನೋಡಲ್ ಸಂಸ್ಥೆಯಾಗಿರುವ ಸಿಬಿಐ, ಯುಎಇ ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿತ್ತು. ದೇಶ ಬಿಟ್ಟು ಓಡಿಹೋದ ಆರ್ಥಿಕ ಅಪರಾಧಿಗಳನ್ನು ಪತ್ತೆಹಚ್ಚಿ, ಕಾನೂನಿನ ಚೌಕಟ್ಟಿಗೆ ತರಲು ಭಾರತ ಸರ್ಕಾರ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ನಡುವೆ ಇರುವ ಪರಿಣಾಮಕಾರಿ ಸಮನ್ವಯಕ್ಕೆ ಈ ಕಾರ್ಯಾಚರಣೆ ಸಾಕ್ಷಿಯಾಗಿದೆ.

ಯುಎಇಯಲ್ಲಿ ಬಂಧನ: ಅವಿನಾಶ್ ರಾಠೋಡ್ ಸಿಕ್ಕಿಬಿದ್ದಿದ್ದು ಹೇಗೆ?

ಇದಕ್ಕೂ ಮುನ್ನ, 2026ರ ಜೂನ್ 4 ರಂದು ವಿಶಾಖಾ ಮತ್ತು ಅವರ ಪತಿ ಅವಿನಾಶ್ ರಾಠೋಡ್ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಇದರ ಆಧಾರದ ಮೇಲೆ ಯುಎಇ ಅಧಿಕಾರಿಗಳು ಮೊದಲು ಅವಿನಾಶ್ ಅವರನ್ನು ಬಂಧಿಸಿದ್ದರು. 2026 ಜುಲೈ 23, ರಂದು ಅವಿನಾಶ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಪುಣೆ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು (EOW) ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯವು ಅವರನ್ನು 10 ದಿನಗಳ ಪೊಲೀಸ್ ವಶಕ್ಕೆ ನೀಡಿ ವಿಚಾರಣೆ ನಡೆಸಿತ್ತು.
ಸಿಬಿಐ 'ಭಾರತ್‌ಪೋಲ್' ವ್ಯವಸ್ಥೆಯ ಮೂಲಕ ದೇಶದ ವಿವಿಧ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಾರಿಯಾದ ಅಪರಾಧಿಗಳನ್ನು ಪತ್ತೆಹಚ್ಚುವ ಕಾರ್ಯ ನಿರ್ವಹಿಸುತ್ತಿದೆ. 
ಇತ್ತೀಚೆಗೆ ಸಂಸತ್ತಿಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಭಾರತೀಯ ಕಾನೂನಿನಿಂದ ತಪ್ಪಿಸಿಕೊಂಡು ವಿದೇಶಕ್ಕೆ ಓಡಿಹೋಗಿದ್ದ ಒಟ್ಟು 274 ತಲೆಮರೆಸಿಕೊಂಡಿದ್ದ ಅಪರಾಧಿಗಳನ್ನು 2019 ರಿಂದ ಜುಲೈ 2026 ರ ಅವಧಿಯಲ್ಲಿ 36 ದೇಶಗಳಿಂದ ಯಶಸ್ವಿಯಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ.
ಪ್ರಸ್ತುತ ಮಹಾರಾಷ್ಟ್ರ ಪೊಲೀಸರ ವಶದಲ್ಲಿರುವ ವಿಶಾಖಾ ರಾಠೋಡ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ವಂಚನೆಗೊಳಗಾದ ಹೂಡಿಕೆದಾರರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ (ಏಜೆನ್ಸೀಸ್​).