Virushka 
ದೇಶ

ಅಲಿಬಾಗ್‌ನಲ್ಲಿ 'ವಿರುಷ್ಕಾ' ಸಾಮ್ರಾಜ್ಯ ವಿಸ್ತರಣೆ: 37.86 ಕೋಟಿ ರೂ. ಮೌಲ್ಯದ ಭೂಮಿ ಖರೀದಿ! | Virushka

ಮುಂಬೈ: ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ(Virushka) ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮುಂಬೈ ಸಮೀಪದ ಕರಾವಳಿ ಪಟ್ಟಣವಾದ ಅಲಿಬಾಗ್‌ನ ಜಿರಾದ್ ಗ್ರಾಮದಲ್ಲಿ ಸುಮಾರು 21,010 ಚದರ ಮೀಟರ್ (ಸುಮಾರು 5.2 ಎಕರೆ) ವಿಸ್ತೀರ್ಣದ ಬೃಹತ್ ಭೂಮಿಯನ್ನು ಕೊಹ್ಲಿ ದಂಪತಿ ಜಂಟಿಯಾಗಿ ಖರೀದಿಸಿದ್ದಾರೆ.
ರಿಯಲ್ ಎಸ್ಟೇಟ್ ಡೇಟಾ ವಿಶ್ಲೇಷಣಾ ಸಂಸ್ಥೆ 'ಕ್ರೀ ಮ್ಯಾಟ್ರಿಕ್ಸ್' (CRE Matrix) ನೀಡಿರುವ ಮಾಹಿತಿಯ ಪ್ರಕಾರ, ಈ ಆಸ್ತಿಯ ಒಟ್ಟು ಮೌಲ್ಯ 37.86 ಕೋಟಿ ರೂಪಾಯಿ. ಈ ವ್ಯವಹಾರಕ್ಕೆ ಸಂಬಂಧಿಸಿದ ಮಾರಾಟ ಪತ್ರವು ಜನವರಿ 13ರಂದು ನೋಂದಣಿಯಾಗಿದ್ದು, ದಂಪತಿ ಕೇವಲ ಮುದ್ರಾಂಕ ಶುಲ್ಕಕ್ಕಾಗಿಯೇ (Stamp Duty) 2.27 ಕೋಟಿ ರೂಪಾಯಿ ಪಾವತಿಸಿದ್ದಾರೆ. ಅಲ್ಲದೆ, 30,000 ರೂ. ನೋಂದಣಿ ಶುಲ್ಕವನ್ನೂ ಭರಿಸಲಾಗಿದೆ. ವಿರಾಟ್ ಕೊಹ್ಲಿ ಅವರ ಪರವಾಗಿ ಅವರ ಸಹೋದರ ವಿಕಾಸ್ ಕೊಹ್ಲಿ ಅವರು ಈ ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಅಲಿಬಾಗ್ ಮೇಲೇಕೆ ದಂಪತಿಯ ಒಲವು..?

ಇದು ಅಲಿಬಾಗ್‌ನಲ್ಲಿ ಕೊಹ್ಲಿ ದಂಪತಿ ಮಾಡುತ್ತಿರುವ ಎರಡನೇ ದೊಡ್ಡ ಹೂಡಿಕೆಯಾಗಿದೆ. ಕಳೆದ 2022 ರಲ್ಲಿ ಇದೇ ಭಾಗದಲ್ಲಿ ಅವರು ಸುಮಾರು 8 ಎಕರೆ ಭೂಮಿಯನ್ನು 19.24 ಕೋಟಿ ರೂ.ಗೆ ಖರೀದಿಸಿ, ಅಲ್ಲಿ ಐಷಾರಾಮಿ ಫಾರ್ಮ್‌ಹೌಸ್ ನಿರ್ಮಿಸಿದ್ದಾರೆ. ಈಗ ಅದರ ಪಕ್ಕದಲ್ಲೇ ಮತ್ತಷ್ಟು ಭೂಮಿಯನ್ನು ಸೇರಿಸುವ ಮೂಲಕ ತಮ್ಮ ಆಸ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಅಲಿಬಾಗ್ ಪಟ್ಟಣವು ಮುಂಬೈಗೆ ಹತ್ತಿರವಿದ್ದರೂ ನಗರದ ಗದ್ದಲದಿಂದ ದೂರವಿರುವುದರಿಂದ, ಸೆಲೆಬ್ರಿಟಿಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಗಣ್ಯರ ನೆರೆಹೊರೆ

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಮತ್ತು ರೋ-ರೋ ಫೆರಿ ಸೇವೆಗಳಿಂದಾಗಿ ಅಲಿಬಾಗ್‌ಗೆ ಸಂಪರ್ಕ ಸುಲಭವಾಗಿದೆ. ಹೀಗಾಗಿ ವಿರಾಟ್-ಅನುಷ್ಕಾ ಮಾತ್ರವಲ್ಲದೆ, ಶಾರುಖ್ ಖಾನ್, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ದಂಪತಿ ಮತ್ತು ಸುಹಾನಾ ಖಾನ್ ಕೂಡ ಇಲ್ಲಿ ಆಸ್ತಿ ಹೊಂದಿದ್ದಾರೆ. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ವಿರುಷ್ಕಾ ದಂಪತಿ, ಭಾರತಕ್ಕೆ ಬಂದಾಗ ಕುಟುಂಬದೊಂದಿಗೆ ಏಕಾಂತವಾಗಿ ಕಾಲ ಕಳೆಯಲು ಈ ಸುಂದರ ತಾಣವನ್ನು ಆರಿಸಿಕೊಂಡಿದ್ದಾರೆ,(ಏಜೆನ್ಸೀಸ್​).