ವಡೋದರ: ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 93 ರನ್‌ಗಳ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಗುರಿಯನ್ನು ಬೆನ್ನಟ್ಟಿ ನಾಲ್ಕು ವಿಕೆಟ್‌ಗಳಿಂದ ಜಯಗಳಿಸಿದೆ.
ಬಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 301 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು ಕೂಡ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿಕೊಳ್ಳದೆ 26 ರನ್‌ಗೆ ವಿಕೆಟ್ ಒಪ್ಪಿಸಿದರು. ಹಿಟ್ಮ್ಯಾನ್ ಔಟಾದ ನಂತರ ಕ್ರಿಸ್ಗೆ ಬಂದ ಕೊಹ್ಲಿ, ನಾಯಕ ಶುಭಮಾನ್ ಗಿಲ್ ಜೊತೆಗೂಡಿ 118 ರನ್‌ಗಳ ಅದ್ಭುತ ಜೊತೆಯಾಟ ನಡೆಸಿದರು.
ಗಿಲ್ ವಿಕೆಟ್ ಬಳಿಕ ಶ್ರೇಯಸ್ ಅಯ್ಯರ್ ಎಚ್ಚರಿಕೆಯಾಟವಾಡಿ 49 ರನ್ ಗಳಿಸುವ ಮೂಲಕ ಅದ್ಭುತ ಕಮ್ ಬ್ಯಾಕ್ ಮಾಡಿದರು. ಕೊನೆಯಲ್ಲಿ ಹರ್ಷಿತ್ ರಾಣಾ 29, ಕೆಎಲ್ ರಾಹುಲ್ ಅಜೇಯ 29 ರನ್ ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು.
ನ್ಯೂಜಿಲೆಂಡ್ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಕಿವೀಸ್ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಮೈದಾನದಾದ್ಯಂತ ರನ್ ಮಳೆ ಹರಿಸಿದರು. ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ 84, ಆರಂಭಿಕರಾದ ಡೆವೊನ್ ಕಾನ್ವೇ ಮತ್ತು ಹೆನ್ರಿ ನಿಕೋಲ್ಸ್ ಕ್ರಮವಾಗಿ 56 ಮತ್ತು 62 ರನ್ ಗಳಿಸಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಮಯೋಚಿತ ಆಟದಿಂದಾಗಿ ನ್ಯೂಜಿಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 300 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಹರ್ಷಿತ್ ರಾಣಾ, ಕನ್ನಡಿಗ ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಕಬಳಿಸಿದರು(ಏಜೆನ್ಸೀಸ್).