Virat Kohli Prank (ಚಿತ್ರ ಇನ್ಸ್ಟಾಗ್ರಾಮ್)
ಲಕ್ನೋ: ಭಾರತೀಯ ಕ್ರಿಕೆಟ್ ಲೋಕದ ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಹೋಲಿಕೆಯಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಸಿದ್ಧಿ ಪಡೆದಿರುವ ಕಂಟೆಂಟ್ ಕ್ರಿಯೇಟರ್ (Virat Kohli Prank) ಕಾರ್ತಿಕ್ ಶರ್ಮಾ ಸದ್ಯ ಸುದ್ದಿಯಲ್ಲಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಲುಲು ಮಾಲ್‌ನಲ್ಲಿ ಕಾರ್ತಿಕ್ ನಡೆಸಿದ ಸಣ್ಣದೊಂದು ತಮಾಷೆಯು ಭಾರಿ ಜನಸ್ತೋಮವನ್ನು ಸೆಳೆದಿದ್ದು, ಇದೀಗ ಆನ್‌ಲೈನ್‌ನಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.
ಘಟನೆ ಏನು?
ಇತ್ತೀಚಿನ ಈ ತಮಾಷೆಯ ವೀಡಿಯೊದಲ್ಲಿ, ಶರ್ಮಾ ಕಪ್ಪು ಬಣ್ಣದ ಐಷಾರಾಮಿ ಬಿಎಂಡಬ್ಯೂ ಕಾರಿನಲ್ಲಿ ಲಕ್ನೋದ ಲುಲು ಮಾಲ್ ಮುಂಭಾಗ ಬಂದು ಇಳಿಯುವ ಮೂಲಕ ಅತ್ಯಂತ ಅದ್ಧೂರಿ ಎಂಟ್ರಿ ಕೊಟ್ಟರು. ಅವರ ಜೊತೆಗೆ ಕೋಟು-ಸೂಟು ಧರಿಸಿ, ಕಪ್ಪು ಕನ್ನಡಕ ಧರಿಸಿದ್ದ ನಾಲ್ವರು ಬಲಿಷ್ಠ ಪುರುಷರು ಅಪ್ಪಟ ಬಾಡಿಗಾರ್ಡ್‌ಗಳಂತೆ ಕಾರಿನಿಂದ ಇಳಿದು ಶರ್ಮಾಗೆ ಬಿಗಿ ಭದ್ರತೆ ನೀಡಿದರು.
ಶರ್ಮಾ ಮಾಲ್ ಒಳಗೆ ಹೆಜ್ಜೆ ಇಡುತ್ತಿದ್ದಂತೆಯೇ ಅಲ್ಲಿದ್ದ ಖರೀದಿದಾರರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಸ್ವಲ್ಪ ಸಮಯದಲ್ಲಿ ಜನಸಮೂಹ ಹೆಚ್ಚಾಯಿತು. ಈ ಉತ್ಸಾಹ ಎಷ್ಟು ತೀವ್ರವಾಯಿತು ಎಂದರೆ ಮಾಲ್‌ನ ಭದ್ರತಾ ಸಿಬ್ಬಂದಿಯ ಗಮನ ಸೆಳೆಯಿತು. ಅವರಲ್ಲಿ ಕೆಲವರು ಶರ್ಮಾ ಅವರನ್ನು ಬೆಂಗಾವಲು ಮಾಡುತ್ತಾ ಜನಸಂದಣಿಯನ್ನು ನಿಯಂತ್ರಿಸುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಕಾರ್ತಿಕ್ ಹೇಳಿದ್ದೇನು?
ನಂತರ, ಇದು ಕೇವಲ ಮನರಂಜನೆಯ ಉದ್ದೇಶಕ್ಕಾಗಿ ಮಾಡಿದ ಪ್ರಾಂಕ್ ವೀಡಿಯೊ ಅಷ್ಟೇ. ನಾನು ವಿರಾಟ್ ಕೊಹ್ಲಿ ಅವರಂತೆ ಕಾಣುವ ಒಬ್ಬ ಕಂಟೆಂಟ್ ಕ್ರಿಯೇಟರ್ ಮತ್ತು ಅವರ ಒಬ್ಬ ಜೀವಾಳದ ಅಭಿಮಾನಿ, ಅಸಲಿ ವಿರಾಟ್ ಕೊಹ್ಲಿ ನಾನಲ್ಲ. ಈ ವೀಡಿಯೊವನ್ನು ಸಂಪೂರ್ಣ ಉಸ್ತುವಾರಿಯಲ್ಲೇ ಚಿತ್ರೀಕರಿಸಲಾಗಿದೆ ಮತ್ತು ಯಾರನ್ನೂ ಯಾವುದೇ ಅಪಾಯಕ್ಕೆ ಸಿಲುಕಿಸಿಲ್ಲ ಎಂದು ಶರ್ಮಾ ಬರೆದುಕೊಂಡಿದ್ದಾರೆ.
ಆದರೆ, ಈ ಸ್ಪಷ್ಟನೆಯ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧದ ಆಕ್ರೋಶ ತಣ್ಣಗಾಗಿಲ್ಲ. ಹಲವರು ಅವರ ಕೊಹ್ಲಿ ಹೋಲಿಕೆಯನ್ನು ಶ್ಲಾಘಿಸಿದರೆ, ಬಹುತೇಕ ನೆಟ್ಟಿಗರು ಈ ಸ್ಟಂಟ್ ಮಿತಿ ಮೀರಿದ್ದಾಗಿತ್ತು ಎಂದು ವಾದಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಅಭಿಮಾನಿಗಳ ಭಾವನೆಗಳೊಂದಿಗೆ ಆಟ
ಆದಾಗ್ಯೂ, ಸಾರ್ವಜನಿಕ ಸ್ಥಳದಲ್ಲಿ ಇಂತಹ ಪ್ರಾಂಕ್ ಮಾಡುವುದರಿಂದ ಅನಗತ್ಯವಾಗಿ ಗೊಂದಲ, ಆತಂಕ ಮತ್ತು ವಿಪರೀತ ಜನದಟ್ಟಣೆ ಸೃಷ್ಟಿಯಾಗುತ್ತದೆ. ಇದು ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಮಾಲ್‌ನ ನಿಯಮಿತ ಭದ್ರತಾ ಸಿಬ್ಬಂದಿಯನ್ನು ಅವರ ಕರ್ತವ್ಯದಿಂದ ಬೇರೆಡೆಗೆ ಸೆಳೆಯುವುದರಿಂದ, ಒಂದು ವೇಳೆ ನಿಜವಾದ ತುರ್ತು ಪರಿಸ್ಥಿತಿ ಎದುರಾಗಿದ್ದರೆ ಯಾರು ಹೊಣೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ನೆಚ್ಚಿನ ಕ್ರಿಕೆಟಿಗನನ್ನು ನೋಡಬೇಕೆಂಬ ಅಭಿಮಾನಿಗಳ ಮುಗ್ಧ ಭಾವನೆಗಳನ್ನು ಮತ್ತು ಉತ್ಸಾಹವನ್ನು ಈ ಕ್ರಿಯೇಟರ್ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ (ಏಜೆನ್ಸೀಸ್).