Viral Video 
ದೇಶ

Viral Video: ಚರಂಡಿಗೆ ಬಿದ್ದ ಎಳನೀರು ಆಯ್ದುಕೊಳ್ಳಲು ಪೈಪೋಟಿಗೆ ಬಿದ್ದ ಸಾರ್ವಜನಿಕರು!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋವೊಂದು(Viral Video) ಜನರ ಮನಸ್ಥಿತಿಯನ್ನು ಕಂಡು ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ಅಪಘಾತಕ್ಕೀಡಾದ ಲಾರಿ ಚಾಲಕನಿಗೆ ನೆರವಾಗುವ ಬದಲು, ಜನರು ಚರಂಡಿಗೆ ಇಳಿದು ಎಳನೀರು ಲೂಟಿ ಮಾಡಿರುವ ಘಟನೆ ನಡೆದಿದೆ.
ನೂರಾರು ಎಳನೀರು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೊಳಚೆ ನೀರಿನ ಚರಂಡಿಗೆ ಉರುಳಿ ಬಿದ್ದಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಎಳನೀರುಗಳು ಗಲೀಜು ನೀರಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ಅಲ್ಲಿಗೆ ಓಡಿ ಬಂದ ಜನರು ಗಾಯಗೊಂಡ ಚಾಲಕನ ಸ್ಥಿತಿ ಏನಾಗಿದೆ ಎಂದು ವಿಚಾರಿಸುವ ಬದಲು, ಚರಂಡಿಗೆ ಇಳಿದು ಎಳನೀರುಗಳನ್ನು ಆಯ್ದುಕೊಳ್ಳಲು ಪೈಪೋಟಿಗೆ ಬಿದ್ದಿದ್ದಾರೆ.
ಮಾನವೀಯತೆ ಮರೆತ ಜನ!
ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಜನರು ತಮ್ಮ ಬೈಕ್ ಮತ್ತು ಕಾರುಗಳನ್ನು ರಸ್ತೆ ಬದಿ ನಿಲ್ಲಿಸಿ, ಗಲೀಜು ಚರಂಡಿ ಎಂಬ ಹಂಗಿಲ್ಲದೆ ಒಳಕ್ಕೆ ಇಳಿದಿದ್ದಾರೆ. ಕೈಗೆ ಸಿಕ್ಕಷ್ಟು ಎಳನೀರುಗಳನ್ನು ಹಿಡಿದು ತಮ್ಮ ಬ್ಯಾಗ್ ಅಥವಾ ವಾಹನಗಳಲ್ಲಿ ತುಂಬಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಇನ್ನೂ ಕೆಲವು ಮಂದಿ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ ನಿಂತಿದ್ದಾರೆಯೇ ಹೊರತು, ಅಪಘಾತಕ್ಕೀಡಾದ ಚಾಲಕನಿಗೆ ಸಹಾಯ ಮಾಡಲು ಯಾರೂ ಮುಂದಾಗಿಲ್ಲ.

ನೆಟ್ಟಿಗರ ಆಕ್ರೋಶ!

ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. "ಹಸಿದವನಿಗೆ ಅನ್ನ ಕೊಡುವುದು ಧರ್ಮ, ಆದರೆ ಅಪಘಾತವಾದಾಗ ಸಹಾಯ ಮಾಡುವ ಬದಲು ಲೂಟಿ ಮಾಡುವುದು ಅಧರ್ಮ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ನಮ್ಮ ಸಮಾಜ ಎತ್ತ ಸಾಗುತ್ತಿದೆ? ಎಳನೀರು ಕೊಂಡುಕೊಳ್ಳಲು ಹಣವಿಲ್ಲದಷ್ಟು ಬಡವರೇ ಇವರು?" ಎಂದು ಹಲವರು ಪ್ರಶ್ನಿಸಿದ್ದಾರೆ.
ಸಣ್ಣದೊಂದು ಅಪಘಾತ ಸಂಭವಿಸಿದಾಗ ಜೀವ ಉಳಿಸುವುದು ಮೊದಲ ಆದ್ಯತೆಯಾಗಬೇಕು. ಆದರೆ ಈ ಘಟನೆಯಲ್ಲಿ ಜನರ ಸ್ವಾರ್ಥ ಎದ್ದು ಕಾಣುತ್ತಿದ್ದು, ನೈತಿಕತೆಯ ಅಧಃಪತನಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ,(ಏಜೆನ್ಸೀಸ್​).