ಬೆಂಗಳೂರು: ಪ್ರೀತಿಸುವುದು ಎಷ್ಟು ಸುಲಭವೋ, ಆ ಪ್ರೀತಿಯನ್ನು ಮದುವೆಯ ಮಂಟಪದವರೆಗೆ ತಲುಪಿಸುವುದು ಅಷ್ಟೇ ಕಷ್ಟ ಎಂಬ ಮಾತಿದೆ. ಅದರಲ್ಲೂ ಭಾರತದಲ್ಲಿ ಪೋಷಕರನ್ನು ಒಪ್ಪಿಸಿ ಪ್ರೇಮ ವಿವಾಹ (Love Marriage) ಮಾಡಿಕೊಳ್ಳುವುದು ದೊಡ್ಡ ಸಾಹಸವೇ ಸರಿ. ಮನೆಯವರನ್ನು ಒಪ್ಪಿಸಲು ಕೆಲವರು ಗೋಗರೆದರೆ, ಇನ್ನು ಕೆಲವರು ಮನೆ ಬಿಟ್ಟು ಓಡಿಹೋಗುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ತನ್ನ ಪ್ರೇಮ ವಿವಾಹಕ್ಕಾಗಿ ಬಾಲಿವುಡ್‌ನ ಆಲ್‌ಟೈಮ್ ಬ್ಲಾಕ್‌ಬಸ್ಟರ್ 'ಶೋಲೆ' ಸಿನಿಮಾದ ಧರ್ಮೇಂದ್ರ (ವೀರೂ) ಶೈಲಿಯನ್ನು ಮರುಸೃಷ್ಟಿಸಿ, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾಳೆ.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದ್ದು, ಅದರಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಕ್ಕೆ ಪೋಷಕರು ಒಪ್ಪಿಗೆ ನೀಡಿಲ್ಲ ಎಂಬ ಕಾರಣಕ್ಕೆ ಎತ್ತರದ ನೀರಿನ ಟ್ಯಾಂಕ್ (Water Tank) ಏರಿ ಭಾರಿ ಹೈಡ್ರಾಮಾ ಮಾಡಿದ್ದಾಳೆ.
'ಲವ್ ಮ್ಯಾರೇಜ್'ಗಾಗಿ ಜಿದ್ದಿಗೆ ಬಿದ್ದ ಯುವತಿ
ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯು ಬೃಹತ್ ನೀರಿನ ಟ್ಯಾಂಕ್‌ನ ತುದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಸ್ಥಳೀಯರು ಆಕೆಯನ್ನು ಕೆಳಗೆ ಇಳಿಯುವಂತೆ ಎಷ್ಟು ಮನವಿ ಮಾಡಿದರೂ ಆಕೆ ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ. "ನನ್ನ ಪ್ರೀತಿಯನ್ನು ಒಪ್ಪಿಕೊಂಡರೆ ಮಾತ್ರ ನಾನು ಕೆಳಗೆ ಇಳಿಯುತ್ತೇನೆ" ಎಂದು ಭೀಷ್ಮ ಶಪಥ ಮಾಡಿ ಕುಳಿತಿದ್ದಾಳೆ. ಕೆಳಗಿದ್ದ ಸ್ಥಳೀಯರು ಈ ಇಡೀ ಹೈಡ್ರಾಮಾವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ನೆಟಿಜನ್ಗಳ ಆಕ್ರೋಶ ಮತ್ತು ಕಾಮೆಂಟ್‌ಗಳ ಮಹಾಪೂರ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರೇಂಜಿಗೆ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ಕೇವಲ ತಮಾಷೆಯಾಗಿ ನೋಡಿ, "ಇದು ಕಲಿಯುಗಪ್ಪಾ.. ಲವ್ ಮ್ಯಾರೇಜ್‌ಗಾಗಿ ಈ ರೇಂಜ್ ಐಡಿಯಾನಾ!" ಎಂದು ತಮಾಷೆ ಮಾಡುತ್ತಿದ್ದಾರೆ. ಆದರೆ, ಮತ್ತೆ ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, "ಇದು ನಗುವ ವಿಷಯವಲ್ಲ, ಅತ್ಯಂತ ಅಪಾಯಕಾರಿ ನಡೆ. ಇಂತಹ ಹುಚ್ಚು ಸಾಹಸಗಳು ಪ್ರಾಣಕ್ಕೇ ಕುತ್ತು ತರಬಹುದು" ಎಂದು ಎಚ್ಚರಿಸಿದ್ದಾರೆ. ಯುವ ಪೀಳಿಗೆಯ ಮೇಲೆ ಸಿನಿಮಾಗಳ ಪ್ರಭಾವ ಯಾವ ಮಟ್ಟಿಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).