- ಕೇರಳದಲ್ಲಿ ಹೊಸ ಚಿತ್ರದ ಶೂಟಿಂಗ್ಗೆ ಬಂದಾಗಲೇ ದಿಢೀರ್ ಮದುವೆಯಾದ ಕುಂಭಮೇಳದ ವೈರಲ್ ಹುಡುಗಿ
- ಹೆತ್ತವರ ವಿರೋಧದ ನಡುವೆಯೂ 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಪ್ರಿಯಕರನ ಜೊತೆಗೆ ದಾಂಪತ್ಯ
- ಫರ್ಮಾನ್ ಖಾನ್ರನ್ನು ಪ್ರೀತಿಸಿದ್ದು ನಾನೇ, ಮದುವೆಗೆ ಒಪ್ಪಿಸಿದ್ದೂ ನಾನೇ ಎಂದ ಮೊನಾಲಿಸಾ
ಕೇರಳ: ಮಹಾಕುಂಭಮೇಳದಿಂದ ವೈರಲ್ ಆಗಿ ಸ್ಟಾರ್ ಆದ ಮೊನಾಲಿಸಾ ಇಂದು ಚಿತ್ರನಟಿಯಾಗಿ ಮಿಂಚುತ್ತಿದ್ದಾರೆ. ಮೊದಲ ಸಿನಿಮಾ ಹಿಂದಿಯಲ್ಲಿ ಮಾಡಿದ ಈ ಯುವತಿ, ಈಗ ಮಲಯಾಳಂ ಚಿತ್ರರಂಗದಿಂದ ಬಂದ ಆಫರ್ಗೆ ಅಸ್ತು ಎಂದಿದ್ದಾಳೆ. ಪ್ರಸ್ತುತ, ಈ ಚಿತ್ರದ ಶೂಟಿಂಗ್ ತಿರುವನಂತಪುರಂ ಪೂವರ್ನಲ್ಲಿ ನಡೆಯುತ್ತಿದ್ದು, ನಟನೆಗೆಂದು ಬಂದವಳು ದಿಢೀರ್ ಎಂಬಂತೆ ಮದುವೆ ಕೂಡ ಮಾಡಿಕೊಂಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗಿದೆ.
ಲವ್ ಜಿಹಾದ್ ಆರೋಪ
ಇದು ದೊಡ್ಡ ಸುದ್ದಿಯಾಗಿ ಹರಡಿದ್ದು ಕೇವಲ ಮದುವೆ ವಿಚಾರಕ್ಕಲ್ಲ. ಬದಲಿಗೆ ಆಕೆ ಪ್ರೀತಿಸಿ, ಮದುವೆಯಾದ ಯುವಕ. ಕಳೆದ ಆರು ತಿಂಗಳಿನಿಂದ ಪರಸ್ಪರ ಪ್ರೀತಿಗೆ ಬಿದ್ದ ಮೊನಾಲಿಸಾ, ತಂದೆಯ ಬಲವಂತದ ಮದುವೆಗೆ ಒಪ್ಪದ ಹಿನ್ನೆಲೆ ಹೊಸ ಚಿತ್ರದ ಚಿತ್ರೀಕರಣಕ್ಕೆ ಬಂದಾಗಲೇ ಪೊಲೀಸರ ಸರ್ಪಗಾವಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ದೇವಸ್ಥಾನದಲ್ಲಿ ಫರ್ಮಾನ್ ಕೈಹಿಡಿದ ಮೊನಾಲಿಸಾ ಜೋಡಿಗೆ ಸದ್ಯ ಸಾಕಷ್ಟು ಟ್ರೋಲ್, ಅಸಭ್ಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಹಲವರು ಇದು ಲವ್ ಜಿಹಾದ್ ಎಂದು ಮೊನಾಲಿಸಾಗೆ ಕುಟುಕಿದ್ದಾರೆ. ಈ ಮಾತುಗಳಿಗೆ ಕಡೆಗೂ ವೈರಲ್ ಬೆಡಗಿ ಪ್ರತಿಕ್ರಿಯಿಸಿದ್ದಾರೆ.
ಮೊನಾಲಿಸಾ ಸ್ಪಷ್ಟನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ವಿವಾಹ ಹಿಂದೂ ಸಂಪ್ರದಾಯದಂತೆ ನಡೆದಿದೆ. ಆರಂಭದಲ್ಲಿ ದಿಢೀರ್ ಮದುವೆಗೆ ಫರ್ಮಾನ್ ಒಪ್ಪಿರಲಿಲ್ಲ. ನಾನು ಒತ್ತಾಯಿಸಿದ ಬಳಿಕ ಅಸ್ತು ಎಂದರು. ಲವ್ ಜಿಹಾದ್ ಆರೋಪಗಳನ್ನು ತಳ್ಳಿಹಾಕುವೆ. ಪ್ರಿಯಕರನಿಗೆ ಮೊದಲು ಪ್ರೀತಿಯ ನಿವೇದನೆ ಮಾಡಿದ್ದೇ ನಾನು ಎಂದು ಮೊನಾಲಿಸಾ ಹೇಳಿದ್ದಾರೆ.
ಫರ್ಮಾನ್ ಪ್ರತಿಕ್ರಿಯೆ
ನನಗೆ ಫರ್ಮಾನ್ ಅವರು ತುಂಬಾ ಇಷ್ಟ. ಇದು ಲವ್ ಜಿಹಾದ್ ಅಲ್ಲವೇ ಅಲ್ಲ. ಹೆತ್ತವರು ನನ್ನ ಮದುವೆಯನ್ನು ಬೇರೆಯವರೊಂದಿಗೆ ಮಾಡಲು ತೀರ್ಮಾನಿಸಿದ್ದರು. ಅದು ನನ್ನ ತಾಯಿಯ ತಂಗಿ ಅಂದರೆ, ಚಿಕ್ಕಮ್ಮನ ಮಗನ ಜೊತೆ. ಈ ಮದುವೆ ನನಗೆ ಕಿಂಚಿತ್ತು ಇಷ್ಟವಿರಲಿಲ್ಲ. ಹೀಗಾಗಿ, ತಿರಸ್ಕರಿಸಿದೆ ಎಂದರು. ಇನ್ನು ಫರ್ಮಾನ್ ಮಾತನಾಡಿ, ನನಗೆ ಎಲ್ಲ ಧರ್ಮವೂ ಒಂದೇ. ನಾನು ಎಲ್ಲವನ್ನೂ ಗೌರವಿಸುತ್ತೇನೆ. ಅದೇ ನನ್ನ ಧರ್ಮ. ನನ್ನ ಸಂಗಾತಿಯ ಆಸೆಯಂತೆ ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದೇವೆ ಎಂದಿದ್ದಾರೆ,(ಏಜೆನ್ಸೀಸ್).