ತಿರುಮಲ ಮೆಟ್ಟಿಲೇರಿದ 116 ವರ್ಷದ ವೃದ್ಧೆಗೆ ವಿಐಪಿ ದರ್ಶನ  
ದೇಶ

116ನೇ ವಯಸ್ಸಿನಲ್ಲೂ ಕಾಲ್ನಡಿಗೆಯಲ್ಲಿ ತಿರುಪತಿ ಮೆಟ್ಟಿಲೇರಿದ ವೃದ್ಧೆಗೆ ವಿಐಪಿ ದರ್ಶನ: ಟಿಟಿಡಿ ಆದೇಶ

ಪ್ರಮುಖ ಮುಖ್ಯಾಂಶಗಳು

  • 116 ವರ್ಷ ವಯಸ್ಸಿನಲ್ಲೂ ತಿರುಪತಿ ಬೆಟ್ಟ ಹತ್ತಿದ ವೃದ್ಧೆಗೆ ವಿಐಪಿ ದರ್ಶನ
  • ತಿರುಮಲನ ದರ್ಶನ ಪಡೆಯಲು ಕಾಲ್ನಡಿಗೆಯಲ್ಲೇ ಮೆಟ್ಟಿಲೇರಿದ ವೃದ್ಧೆಗೆ ಗಣ್ಯರು ಮೆಚ್ಚುಗೆ
  • ಸೋಮವಾರ ವಿಐಪಿ ದರ್ಶನಕ್ಕೆ ಟಿಟಿಡಿ ಚೇರ್ಮನ್​​​ ಆದೇಶ
ಆಂಧ್ರಪ್ರದೇಶ: ತಿರುಪತಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ಏರಿದ 116 ವರ್ಷದ ವೃದ್ಧೆ ನವನೀತಮ್ಮ ಅವರ ಉತ್ಸಾಹ ಮತ್ತು ಭಕ್ತಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಸಂತಸ ವ್ಯಕ್ತಪಡಿಸಿದ್ದು, ಸೋಮವಾರ ವಿಐಪಿ ದರ್ಶನಕ್ಕೆ ಅನುಮತಿ ಮಾಡಿಕೊಟ್ಟಿದ್ದಾರೆ.
ಶನಿವಾರ (ಜು.04) ಅಲಿಪಿರಿ ಪಾದಚಾರಿ ಮಾರ್ಗದ ಮೂಲಕ ವೃದ್ಧೆಯು ತಮ್ಮ ಕುಟುಂಬಸ್ಥರ ಸಹಾಯದೊಂದಿಗೆ ಬೆಟ್ಟವನ್ನು ಏರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ವಯಸ್ಸಿನಲ್ಲಿ ವಯೋಸಹಜ ಸಮಸ್ಯೆ, ಆಯಾಸ, ಮಂಡಿ ನೋವಿನಿಂದ ಬಳಲುವ ವೃದ್ಧರ ಪೈಕಿ, ತನಗೆ ಇನ್ನೂ ವಯಸ್ಸಾಗಿಲ್ಲ ಎನ್ನುವಂತೆ ಎಲ್ಲರಿಗೂ ಸ್ಪೂರ್ತಿದಾಯಕವಾದ ಮಹಿಳೆಗೆ ರಾಜಕೀಯ ನಾಯಕರು, ನೆಟ್ಟಿಗರು ಭಾರಿ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ ವೃದ್ಧೆ ಮತ್ತು ಆಕೆಯ ಕುಟುಂಬ ಸದಸ್ಯರಿಗೆ ಸೋಮವಾರ ಬೆಳಗ್ಗೆ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಟಿಟಿಡಿ ಅಧಿಕೃತವಾಗಿ ತಿಳಿಸಿದೆ.
ಈ ವಿಡಿಯೋ ಮೊದಲು ವೈರಲ್ ಆದಾಗ, ವೃದ್ಧೆಯ ಸಂಪೂರ್ಣ ವಿವರಗಳು ಟಿಟಿಡಿಗೆ ಲಭ್ಯವಾಗಿರಲಿಲ್ಲ. ಬಳಿಕ ಈಕೆ ಕರ್ನಾಟಕ ಮೂಲದವರು ಎಂದು ಹೇಳಲಾಯಿತು. ಆದ್ರೆ, ಮಾಹಿತಿ ಕಲೆಹಾಕಿದ ನಂತರ ಪ್ರತಿಕ್ರಿಯಿಸಿದ ಟಿಟಿಡಿ ಅಧ್ಯಕ್ಷರು, ಇವರು ತಮಿಳುನಾಡಿನ ನವನೀತಮ್ಮ ಎಂದು ಗುರುತಿಸಿದರು. ಪ್ರಸ್ತುತ ತಿರುಪತಿಯ ಜೀವಕೋಣದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ನಮ್ಮ ಅಧಿಕಾರಿಗಳು ದೃಢಪಡಿಸಿದ್ದಾರೆ ಎಂದರು,(ಏಜೆನ್ಸೀಸ್).