ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಘುನಾಥಗಂಜ್ನಲ್ಲಿ ಶುಕ್ರವಾರ(ಮಾ. 27) ರಾಮನವಮಿಯ ಆಚರಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಬೇಡಿ ಎಂದಿರುವ ಸಿಎಂ ಮಮತಾ ಬ್ಯಾನರ್ಜಿ(CM Mamata Banerjee), ಚುನಾವಣೆಗೂ ಮುನ್ನ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಚು.ಆಯೋಗವೇ ಕಾರಣ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬರ್ಧಮಾನ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ಪುನರ್ರಚನೆ ನಂತರ ನೇಮಕಗೊಂಡ ಅಧಿಕಾರಿಗಳೇ ಅಶಾಂತಿಯನ್ನು ಪ್ರಚೋದಿಸಲು ಕಾರಣ, ನನ್ನನ್ನು ದೂಷಿಸಬೇಡಿ. ನನ್ನ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಬಿಜೆಪಿಯೊಂದಿಗೆ ಹೊಂದಿಕೊಂಡ ಜನರನ್ನು ಇಲ್ಲಿಗೆ ಕಳುಹಿಸಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂಸಾಚಾರವನ್ನು ಖಂಡಿಸಿದ ಅವರು, ಅಂಗಡಿಗಳನ್ನು ಧ್ವಂಸ ಮಾಡಲಾಯಿತು ಮತ್ತು ಗಲಭೆಗಳನ್ನು ಪ್ರಚೋದಿಸಲಾಯಿತು. ಅದನ್ನು ಮಾಡಲು ಅವರಿಗೆ ಯಾರು ಹಕ್ಕು ನೀಡಿದರು? ಇದೆಲ್ಲದಕ್ಕೂ ಹೊಣೆಗಾರರಾಗುತ್ತಾರೆ. ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ರಘುನಾಥ್‌ಗಂಜ್‌ನಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಹಲವಾರು ಸ್ಥಳಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡ ದುಷ್ಕರ್ಮಿಗಳು ವಿಧ್ವಂಸಕ ಕೃತ್ಯ, ಲೂಟಿ ಮತ್ತು ಬೆಂಕಿ ಹಚ್ಚುವ ಹಂತಕ್ಕೆ ತಲುಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಡಿಐಜಿ ಅಜಿತ್ ಸಿಂಗ್ ಯಾದವ್, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಸ್ಥಳದಲ್ಲಿ ಕೇಂದ್ರ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಆರೋಪಿಗಳನ್ನು ಬಂಧಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಭಾಗಿಯಾಗಿರುವ ಯಾವುದೇ ಆರೋಪಿಗಳನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ಏ. 23 ಮತ್ತು 289ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ (ಏಜೆನ್ಸೀಸ್).