ಇಂಫಾಲ್: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದೆ. ಘಟನೆಯನ್ನು ವಿರೋಧಿಸಿ ಸ್ಥಳೀಯರು ಸೋಮವಾರ(ಅ. 19) ಇಬ್ಬರ ಶವಗಳನ್ನು ಇಂಫಾಲದಲ್ಲಿರುವ ಮುಖ್ಯಮಂತ್ರಿ ನಿವಾಸದ ಹೊರಗಿಟ್ಟು ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ದುಷ್ಕರ್ಮಿಗಳು ಭಾನುವಾರ ರಾತ್ರಿ ಇಬ್ಬರನ್ನು ಕೊಲೆಗೈದರೆ, ಸೋಮವಾರ ಬೆಳಿಗ್ಗೆ ಮೈತೈ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳನ್ನು ಹತ್ಯೆ ಮಾಡಿದ್ದಾರೆ. ಮೈತೈ ಬಹುಸಂಖ್ಯಾತ ಇಂಫಾಲ್ ಪೂರ್ವ ಜಿಲ್ಲೆ ಮತ್ತು ಕುಕಿ ಬಹುಸಂಖ್ಯಾತ ಕಾಂಗ್ಪೋಕ್ಪಿ ಜಿಲ್ಲೆಗಳ ಗಡಿಯ ಸಮೀಪ ಈ ಉಗ್ರರ ದಾಳಿ ನಡೆದಿದೆ. ನಾಲ್ವರು ಗಾಯಗೊಂಡಿದ್ದಾರೆ.
ಸಿಎಂ ಮನೆ ಮುಂದೆ ಶವಗಳನ್ನಿಟ್ಟು ಪ್ರತಿಭಟನೆಯನ್ನು ಪೊಲೀಸರು ತಡೆದಿದ್ದು, ಅಶ್ರುವಾಯು ಶೆಲ್ಗಳನ್ನು ಸಿಡಿಸುವ ಮೂಲಕ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ತಮ್ಮ ನಿವಾಸದಲ್ಲಿದ್ದರೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ವರದಿಗಳ ಪ್ರಕಾರ, 16 ಮಂದಿ ಕಟ್ಟಿಗೆ ಸಂಗ್ರಹಿಸಲು ಬೆಟ್ಟದ ಕಡೆಗೆ ಹೋಗಿದ್ದಾಗ ಉಗ್ರರು ಅವರ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಮೃತಪಟ್ಟವರು ಮತ್ತು ಗಾಯಗೊಂಡವರಲ್ಲದೆ, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).