ಮಣಿಪುರದಲ್ಲಿ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಪಡೆಗಳು.  
ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಮೈತೇಯಿ ಸಮುದಾಯದ ವ್ಯಕ್ತಿಯ ಅಪಹರಣ, ಗುಂಡಿಕ್ಕಿ ಹತ್ಯೆ | Manipur Violence

ಇಂಫಾಲ್​: ಕಳೆದ ಕೆಲವು ತಿಂಗಳುಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ(ManipurViolence) ಪರಿಸ್ಥಿತಿ ಮತ್ತೆ ವಿಕೋಪಕ್ಕೆ ಹೋಗಿದೆ. ಕುಕಿ ಸಮುದಾಯದ ಪ್ರಾಬಲ್ಯವಿರುವ ಚುರಾಚಂದ್‌ಪುರ ಜಿಲ್ಲೆಯಲ್ಲಿ ಮೈತೇಯಿ ಸಮುದಾಯದ ವ್ಯಕ್ತಿಯೊಬ್ಬರನ್ನು ಶಂಕಿತ ಕುಕಿ ಉಗ್ರರು ಅಪಹರಿಸಿ, ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ರಾಜ್ಯದಲ್ಲಿ ಮತ್ತೆ ಜನಾಂಗೀಯ ಸಂಘರ್ಷದ ಕಿಚ್ಚು ಹಚ್ಚುವ ಭೀತಿ ಮೂಡಿಸಿದೆ.

ನಡೆದಿದ್ದೇನು..? ಕಾರ್ಯಾಚರಣೆಯ ಭೀಕರತೆ

ಪೊಲೀಸ್ ಮೂಲಗಳ ಪ್ರಕಾರ, ಮೃತ ವ್ಯಕ್ತಿಯನ್ನು ಮಾಯಂಗ್ಲಾಂಬಂ ರಿಷಿಕಾಂತ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಚುರಾಚಂದ್‌ಪುರದ ತುಯ್ಬಾಂಗ್ ಪ್ರದೇಶದ ತಮ್ಮ ಮನೆಯಲ್ಲಿದ್ದಾಗ ಬುಧವಾರ ರಾತ್ರಿ ಶಂಕಿತ ಕುಕಿ ಉಗ್ರರು ಇವರನ್ನು ಅಪಹರಿಸಿದ್ದರು. ಗುರುವಾರ ಬೆಳಿಗ್ಗೆ ಜಿಲ್ಲೆಯ ನಟಜಾಂಗ್ ಗ್ರಾಮದ ಸಮೀಪ ರಿಷಿಕಾಂತ ಅವರ ಶವ ಪತ್ತೆಯಾಗಿದೆ. ಅವರನ್ನು ಅತ್ಯಂತ ಸಮೀಪದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಯುಎನ್‌ಕೆಎ (UKNA) ಉಗ್ರರ ಮೇಲೆ ಶಂಕೆ

ಈ ಕೃತ್ಯದ ಹಿಂದೆ ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿ (UKNA) ಉಗ್ರ ಸಂಘಟನೆಯ ಕೈವಾಡವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕಿಸಿದ್ದಾರೆ. ಅಲ್ಲದೆ, ಈ ಸಂಘಟನೆಯು ಸರ್ಕಾರದೊಂದಿಗಿನ ಕಾರ್ಯಾಚರಣೆ ಸ್ಥಗಿತ (SoO) ಒಪ್ಪಂದಕ್ಕೆ ಸಹಿ ಹಾಕದ ತಂಡವಾಗಿದೆ. ಈ ಹತ್ಯೆಯು ಕೇವಲ ದ್ವೇಷದ ಸಂಕೇತವಲ್ಲದೆ, ಶಾಂತಿ ಪ್ರಕ್ರಿಯೆಗೆ ಹಿನ್ನಡೆ ಉಂಟುಮಾಡುವ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯಾದ್ಯಂತ ಬಿಗುವಿನ ವಾತಾವರಣ

ಹತ್ಯೆಯ ಸುದ್ದಿ ಹರಡುತ್ತಿದ್ದಂತೆ ಇಂಫಾಲ್ ಕಣಿವೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಮೈತೇಯಿ ಸಮುದಾಯದ ಜನರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ಯಾರಾ ಮಿಲಿಟರಿ ಪಡೆಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಚುರಾಚಂದ್‌ಪುರ ಮತ್ತು ಇಂಫಾಲ್ ನಡುವಿನ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸರ್ಕಾರದ ಪ್ರತಿಕ್ರಿಯೆ

ಮಣಿಪುರ ಸರ್ಕಾರವು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತನಿಖೆಗೆ ಆದೇಶಿಸಿದೆ. ಇದು ಶಾಂತಿಯನ್ನು ಕದಡುವ ಪ್ರಯತ್ನವಾಗಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಗೃಹ ಇಲಾಖೆಯ ಪ್ರಕಟಣೆ ತಿಳಿಸಿದೆ. ಆದರೂ, ಜನಸಾಮಾನ್ಯರಲ್ಲಿ ಭೀತಿ ಮನೆಮಾಡಿದ್ದು, ಶಾಂತಿ ಕಾಪಾಡುವುದು ಸವಾಲಾಗಿ ಪರಿಣಮಿಸಿದೆ,(ಏಜೆನ್ಸೀಸ್).