ಘಟನೆಯ ಸ್ಥಳ 
ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ; ಕುಕಿ-ನಾಗಾಗಳ ನಡುವೆ ಘರ್ಷಣೆ; ಗುಂಡಿನ ದಾಳಿ, ಮನೆಗಳಿಗೆ ಬೆಂಕಿ | Manipur

ಇಂಫಾಲ್: ಮಣಿಪುರದಲ್ಲಿ(Manipur) ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಾಗಾ ಬಹುಸಂಖ್ಯಾತ ಉಖ್ರುಲ್ ಜಿಲ್ಲೆಯ ಲಿಟನ್ ಪ್ರದೇಶದಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಇಂದು(ಫೆ. 10) ಬೆಳಗ್ಗೆ ಗುಂಡಿನ ದಾಳಿ ನಡೆದಿದ್ದು, ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಭಾನುವಾರ ಮತ್ತು ಸೋಮವಾರದ ನಡುವೆ ಎರಡೂ ಸಮುದಾಯಗಳ 27ರಿಂದ 28 ಮನೆಗಳು ಸುಟ್ಟುಹೋಗಿವೆ. ಇಂದು ಬೆಳಗ್ಗೆ 10ಕ್ಕೂ ಹೆಚ್ಚು ಮನೆಗಳು ಬೆಂಕಿಗಾಹುತಿಯಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ರಾಜ್ಯಾದ್ಯಂತ ಬಿಎನ್‌ಎಸ್‌ಎಸ್‌ನ ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಸ್ಥಳದಲ್ಲಿ ಸೇನೆ ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರ ಹೊರತಾಗಿಯೂ ಹಲವೆಡೆ ಹಿಂಸಾಚಾರ ನಡೆದಿದೆ. ಶನಿವಾರ ರಾತ್ರಿ ಲಿಟಾನ್‌ನಲ್ಲಿ ಕುಕಿ-ಝೋ ವ್ಯಕ್ತಿಗಳ ಗುಂಪೊಂದು ತಂಗ್ಖುಲ್ ನಾಗಾ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ನಂತರ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗಿದೆ.
ಭಾನುವಾರ ನಾಗಾ ಗ್ರಾಮಸ್ಥರು, ಕುಕಿ ಗ್ರಾಮದ ಮುಖ್ಯಸ್ಥರನ್ನು ಸಂಪರ್ಕಿಸಿ ಹಲ್ಲೆ ಮಾಡಿದ ಆರೋಪಿಗಳನ್ನು ತಮ್ಮ ಮುಂದೆ ಒಪ್ಪಿಸುವಂತೆ ಒತ್ತಾಯಿಸಿದ ಬಳಿಕ ಘರ್ಷಣೆ ಆರಂಭವಾಗಿದೆ. ಸಂಜೆ ಕಲ್ಲು ತೂರಾಟ ನಡೆದಿದೆ. ರಾತ್ರಿ ಪರಸ್ಪರ ಸಮುದಾಯದ ಜನರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಸೇರಿ ಹಲವರು ಗಾಯಗೊಂಡಿದ್ದಾರೆ.
ಘರ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋಗಳಲ್ಲಿ ಗುಂಡೇಟಿನ ಶಬ್ದಗಳು ಕೇಳುತ್ತಿವೆ. ಇನ್ನೂ ಸಂಘರ್ಷದಿಂದ ಉಖ್ರುಲ್ ಪ್ರದೇಶಗಳು ಮತ್ತು ಇಂಫಾಲ್ ಕಣಿವೆಯ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ (ಏಜೆನ್ಸೀಸ್).