TVK | ದಾರಾಪುರಂ, ಮಧುರಾಂತಕಂ ಉಪಚುನಾವಣೆಗೆ ಸಿದ್ಧವಾದ ಟಿವಿಕೆ!
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು, ಮಧುರಾಂತಕಂ ಮತ್ತು ದಾರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎಐಎಡಿಎಂಕೆ ಮಾಜಿ ನಾಯಕರಾದ ಮರಗತಂ ಕುಮಾರವೇಲ್ ಮತ್ತು ಪಿ. ಸತ್ಯಭಾಮಾ ಅವರನ್ನು ಗುರುವಾರ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ.
ಈ ಉಪಚುನಾವಣೆಯ ಮತದಾನವು ಅಕ್ಟೋಬರ್ 6 ರಂದು ನಡೆಯಲಿದ್ದು, ಅಕ್ಟೋಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ. ಕರಾವಳಿ ರಾಜ್ಯದಲ್ಲಿ ಟಿವಿಕೆ ಸರ್ಕಾರ ರಚನೆಯಾದ ನಂತರ ಪಕ್ಷ ಎದುರಿಸುತ್ತಿರುವ ಮೊದಲ ಚುನಾವಣಾ ಪರೀಕ್ಷೆ ಇದಾಗಿದೆ.
ಮರಗತಂ ಕುಮಾರವೇಲ್ ಮತ್ತು ಪಿ. ಸತ್ಯಭಾಮಾ ಅವರು ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಕ್ರಮವಾಗಿ ಮಧುರಾಂತಕಂ ಮತ್ತು ದಾರಾಪುರಂ ಕ್ಷೇತ್ರಗಳಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಇದಾದ ಬಳಿಕ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಇಬ್ಬರು ಶಾಸಕರು ಎಐಎಡಿಎಂಕೆ ತೊರೆದು ಟಿವಿಕೆ ಸೇರ್ಪಡೆಯಾಗಿದ್ದರು. ಅವರಿಬ್ಬರೂ ಟಿವಿಕೆ ಸೇರಿದ್ದರಿಂದ ಕೇಂದ್ರ ಚುನಾವಣಾ ಆಯೋಗವು ಈ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಿದೆ. ಬಳಿಕ ಕುಮಾರವೇಲ್ ಅವರನ್ನು ಟಿವಿಕೆ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಸತ್ಯಭಾಮಾ ಅವರನ್ನು ತಿರುಪ್ಪೂರ್ ದಕ್ಷಿಣ-ಪೂರ್ವ ಜಿಲ್ಲಾ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಮೀಸಲು ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯುವ ಗುರಿ!...
ಮೀಸಲು ಕ್ಷೇತ್ರಗಳಾದ ಮಧುರಾಂತಕಂ ಮತ್ತು ದಾರಾಪುರಂನಲ್ಲಿ ಮರಗತಂ ಕುಮಾರವೇಲ್ ಹಾಗೂ ಪಿ. ಸತ್ಯಭಾಮಾ ಅವರನ್ನು ಮತ್ತೆ ಕಣಕ್ಕಿಳಿಸುವುದರಿಂದ, ಟಿವಿಕೆ ಪಕ್ಷಕ್ಕೆ ಬೆಂಬಲ ಕ್ರೋಢೀಕರಿಸಲು ಭಾರಿ ನೆರವಾಗಲಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವಿಷಯವಾಗಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಪಕ್ಷದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಗೆಲುವನ್ನೇ ಏಕೈಕ ಗುರಿಯಾಗಿಸಿಕೊಂಡು, ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ, ಅವರಿಗೆ ಐತಿಹಾಸಿಕ ಜಯ ತಂದುಕೊಡಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ, ಸ್ಪಷ್ಟ ಬಹುಮತಕ್ಕೆ ಕೊರತೆ ಉಂಟಾಗಿತ್ತು. ಹೀಗಾಗಿ ವಿಜಯ್ ಕಾಂಗ್ರೆಸ್, ವಿಸಿಕೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಎಡಪಕ್ಷಗಳ ಬೆಂಬಲವನ್ನು ನೆಚ್ಚಿಕೊಳ್ಳಬೇಕಾಯಿತು. ಬುಧವಾರವಷ್ಟೇ ವಿಜಯ್ ನೇತೃತ್ವದ ಮೈತ್ರಿಕೂಟವು ತನ್ನ ಒಕ್ಕೂಟಕ್ಕೆ ಸೆಕ್ಯುಲರ್ ಸೋಷಿಯಲ್ ಜಸ್ಟಿಸ್ ವಿಕ್ಟರಿ ಎಂದು ಹೆಸರಿಟ್ಟು, ವಿಜಯ್ ಅವರನ್ನು ತನ್ನ ನಾಯಕ ಎಂದು ಘೋಷಿಸಿತ್ತು.
ಈ ಮೈತ್ರಿಕೂಟವು ಎಲ್ಲಾ ಹಂತಗಳಲ್ಲೂ ಕೋಮುವಾದಿ ಶಕ್ತಿಗಳನ್ನು ವಿರೋಧಿಸುವುದಾಗಿ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದೆ. ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವೇ ತನ್ನ ಮೂಲ ತತ್ವಗಳಾಗಿರಲಿವೆ ಎಂದು ಹೇಳಿದೆ. ಎಲ್ಲೆಲ್ಲಿ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯ ಇರುತ್ತದೆಯೋ, ಅಲ್ಲೆಲ್ಲಾ ಜಯ ಸದಾ ಸಾರ್ವಜನಿಕರಿಗೆ ಸಿಗುತ್ತದೆ ಎಂದು ಸಚಿವ ಆದವ್ ಅರ್ಜುನಾ ಹೇಳಿದ್ದಾರೆ(ಏಜೆನ್ಸೀಸ್).