Natural Ally | ಕಾಂಗ್ರೆಸ್​ ಮತ್ತು ಟಿವಿಕೆ ಪಕ್ಷದ ನಾಯಕರು 
ದೇಶ

ವಿಜಯ್ ‘ಕೈ’ ಹಿಡಿಯುತ್ತಾ ಶತಮಾನದ ಪಕ್ಷ..? ಟಿವಿಕೆ ನಾಯಕನ ಮೈತ್ರಿ ಮಾತಿಗೆ ಕಾಂಗ್ರೆಸ್​ ರಿಯಾಕ್ಷನ್​ ಹೀಗಿದೆ! | Natural Ally

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಟಿವಿಕೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಊಹಾಪೋಹದ ನಡುವೆ, ತಮಿಳಗ ವೆಟ್ರಿ ಕಳಗಂ ನಾಯಕರೊಬ್ಬರು, ಕಾಂಗ್ರೆಸ್​ ಪಕ್ಷವನ್ನು ನೈಸರ್ಗಿಕ ಪಾಲುದಾರ (Natural Ally) ಎಂದು ಕರೆದಿದ್ದು, ಈ ವಿಷಯವಾಗಿ ಯಾವುದೇ ಅಧಿಕೃತ ಮಾತುಕತೆ ನಡೆದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಟಿವಿಕೆ ವಕ್ತಾರ ಫೆಲಿಕ್ಸ್ ಜೆರಾಲ್ಡ್ ಈ ವಿಷಯವಾಗಿ ಮಾತನಾಡಿದ್ದು, ವಿಜಯ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರಸ್ಪರ ಸ್ನೇಹಿತರಾಗಿರುವುದರಿಂದ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದಿದ್ದು, ತಮಿಳುನಾಡು ಕಾಂಗ್ರೆಸ್ ಘಟಕದ ಹಿರಿಯ ನಾಯಕರುಗಳಲ್ಲಿನ ವೈಯಕ್ತಿಕ ಹಿತಾಸಕ್ತಿಗಳು ಈ ಕುರಿತಾದ ಚರ್ಚೆಯನ್ನು ವಿಳಂಬಗೊಳಿಸಬಹುದು ಎಂದಿದ್ದಾರೆ.
ತಮಿಳುನಾಡಿನಲ್ಲಿ 58 ವರ್ಷಗಳ ಕಾಲ ಅಧಿಕಾರದಿಂದ ಹೊರಗಿದ್ದರೂ, ಕಾಂಗ್ರೆಸ್ ಕಾರ್ಯಕರ್ತರು ಬಲಿಷ್ಠ ಮತ್ತು ಸಕ್ರಿಯರಾಗಿದ್ದಾರೆ ಎಂದು ಜೆರಾಲ್ಡ್ ಉಲ್ಲೇಖಿಸಿದ್ದರು, ಪರಿಸ್ಥಿತಿಗಳು ಬದಲಾದರೆ ಯಾವುದೇ ರಾಜಕೀಯ ಪಕ್ಷವು ಅಧಿಕಾರವನ್ನು ನಿರಾಕರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅವರ ಈ ಮಾತುಗಳು ರಾಜಕೀಯದಲ್ಲಿ ಯಾರು ಖಾಯಂ ಶತ್ರುಗಳು ಇಲ್ಲ, ಮಿತ್ರರು ಇರುವುದಿಲ್ಲ ಎನ್ನುವುದನ್ನು ಒತ್ತಿ ಹೇಳುತ್ತಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಬದಲಾಗುತ್ತಿರುವ ಸಮೀಕರಣಗಳಿಗೆ ಡಿಎಂಕೆ ಮತ್ತು ಕಾಂಗ್ರೆಸ್ ಎರಡೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ ನಾಯಕರ ರಿಯಾಕ್ಷನ್​...

ಟಿವಿಕೆ ನಾಯಕರ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್, ಪಕ್ಷವು ಬೂತ್ ಸಮಿತಿಗಳು ಮತ್ತು ಸಂಘಟನಾ ಕೆಲಸಗಳಲ್ಲಿ ಪೂರ್ಣ ವೇಗದಲ್ಲಿ ತೊಡಗಿಸಿಕೊಂಡಿದ್ದು, ರಾಜಕೀಯ ವಿಕಸನಗೊಳ್ಳುತ್ತಿದ್ದಂತೆ ಪಕ್ಷವು ಬದಲಾವಣೆಗೆ ಮುಕ್ತವಾಗಿದೆ ಎಂದು ಮೈತ್ರಿಯ ಕುರಿತು ಸುಳಿವು ನೀಡಿದರು.

ಕಾಂಗ್ರೆಸ್ ಪಕ್ಷವನ್ನು ನೈಸರ್ಗಿಕ ಪಾಲುದಾರ ಎನ್ನಲು ಕಾರಣವೇನು?

ನಟ ವಿಜಯ್​ರ ಟಿವಿಕೆಯು ಜಾತ್ಯತೀತ ಸಾಮಾಜಿಕ ನ್ಯಾಯದ ಅಡಿಯಲ್ಲಿ ರೂಪಗೊಂಡಿದ್ದು, ಬಿಜೆಪಿ ಮತ್ತು ಅದರ ಹಿಂದುತ್ವ ರಾಜಕಾರಣವನ್ನು ಬಹಿರಂಗವಾಗಿ ವಿರೋಧಿಸುತ್ತಿರುವ ವಿಜಯ್, ದ್ರಾವಿಡ ಸಿದ್ಧಾಂತ ಮತ್ತು ರಾಷ್ಟ್ರೀಯ ಜಾತ್ಯತೀತತೆಯ ಸಮ್ಮಿಶ್ರಣವನ್ನು ಬಯಸುತ್ತಿದ್ದಾರೆ. ಕೇಂದ್ರ ಸರ್ಕಾರದ ಪ್ರಬಲ ವಿರೋಧಿಯಾಗಿರುವ ಕಾಂಗ್ರೆಸ್ ಮತ್ತು ತಮಿಳುನಾಡಿನಲ್ಲಿ ಹೊಸ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುತ್ತಿರುವ ವಿಜಯ್​ರ ಸಿದ್ಧಾಂತ ಒಂದೇ ಆಗಿದೆ. ವಿಜಯ್ ಅಪಾರ ಯುವ ಅಭಿಮಾನಿ ಬಳಗವನ್ನು ಸೆಳೆದಿದ್ದು, ಇದರೊಂದಿಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಒಂದಾದರೆ, ಡಿಎಂಕೆ ಮತ್ತು ಎಐಎಡಿಎಂಕೆಗೆ ಪ್ರಬಲ ಪೈಪೋಟಿ ನೀಡಬಹುದು ಎಂಬುದು ಟಿವಿಕೆ ನಾಯಕರ ಲೆಕ್ಕಾಚಾರವಾಗಿದೆ.

ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಕೈ..

ಟಿವಿಕೆ ಕಡೆಯಿಂದ ಮೈತ್ರಿಯ ಮಾತುಗಳು ಕೇಳಿಬರುತ್ತಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದು, ಸದ್ಯ ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆಯೊಂದಿಗೆ ಕೈ ಜೋಡಿಸಿರುವ ಕಾಂಗ್ರೆಸ್, ಈಗ ಅಧಿಕಾರದ ಆಸೆಗೆ ಅವರಿಂದ ದೂರ ಸರಿದು, ಇನ್ನೂ ನೆಲೆ ಕಂಡುಕೊಳ್ಳುತ್ತಿರುವ ಹೊಸ ಪಕ್ಷದೊಂದಿಗೆ ಕೈಜೋಡಿಸುವುದರ ಕುರಿತು ಆಲೋಚನೆ ನಡೆಸಿದೆ.
ನಟರಾಗಿರುವ ವಿಜಯ್​ಗೆ ಈಗಾಗಲೇ ಸಾಕಷ್ಟು ಜನಪ್ರಿಯತೆ ಇದ್ದು, ಇದು ಮತಗಳಾಗಿ ಬದಲಾಗುತ್ತದೆಯೇ ಎಂಬುದಕ್ಕೆ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಆದ್ದರಿಂದ ಮುಂದಿನ ಚುನಾವಣೆಗಳಲ್ಲಿ ಟಿವಿಕೆ ಪಡೆಯುವ ಜನಬೆಂಬಲವನ್ನು ಆಧರಿಸಿ ಮೈತ್ರಿಯ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕಾಂಗ್ರೆಸ್​ ನಾಯಕರು ನಿರ್ಧರಿಸಿದ್ದಾರೆ.

ಮೈತ್ರಿಯಾದರೆ ಏನಾಗಬಹುದು..?

ಈಗ ಎದ್ದಿರುವ ಊಹಾಪೋಹಗಳೆಲ್ಲಾ ನಿಜವಾಗಿ ಟಿವಿಕೆ ಮತ್ತು ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡರೆ, ತಮಿಳುನಾಡಿನ ದ್ವಿಪಕ್ಷೀಯ ರಾಜಕಾರಣಕ್ಕೆ (DMK vs AIADMK) ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಿದ್ದು, ಇದು ಆಡಳಿತರೂಢ ಡಿಎಂಕೆ ನೇತೃತ್ವದ ಒಕ್ಕೂಟಕ್ಕೆ ಹಿನ್ನಡೆಯಾದರೂ ಅಚ್ಚರಿಪಡಬೇಕಿಲ್ಲ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಈ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ(ಏಜೆನ್ಸೀಸ್​).