TVK Whistle Symbol | ನಟ ವಿಜಯ್ 
ದೇಶ

ವಿಜಯ್ 'ಶಿಳ್ಳೆ'ಗೆ ಮರುಳಾಗುತ್ತಾನಾ ಮತದಾರ..? ಕಮಲ್​ ಹಾಸನ್​ಗೆ ​'ಟಾರ್ಚ್' ಬೆಳಕು ನೀಡಿದ ಚುನಾವಣಾ ಆಯೋಗ | TVK Whistle Symbol

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ನಟ-ರಾಜಕಾರಣಿ ವಿಜಯ್​​ರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಚುನಾವಣಾ ಚಿಹ್ನೆಯಾಗಿ ಶಿಳ್ಳೆ ನೀಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದ್ದು, ನಟ ಕಮಲ್ ಹಾಸನ್​ರ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ)ಗೆ ಬ್ಯಾಟರಿ ಟಾರ್ಚ್ ನೀಡಲಾಗಿದೆ.
ಈಗ ಹಂಚಿಕೆ ಮಾಡಲಾದ ಚಿಹ್ನೆ ಮುಂಬರುವ ವಿಧಾನಸಭೆ ಮತ್ತು ಲೋಕಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ, ಚುನಾವಣೆ ಮುಗಿದ ಬಳಿಕ ಅವುಗಳನ್ನು ಬಳಸಲು ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಚುನಾವಣೆಗಳು ನಡೆಯಲಿದ್ದು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಕೇಂದ್ರಾಡಳಿತ ಪ್ರದೇಶ (ಯುಟಿ) ಚುನಾವಣೆಗಳು ನಡೆಯಲಿವೆ. ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ಟಿವಿಕೆ ಎಂಟ್ರಿ ಲೆಕ್ಕಾಚಾರವನ್ನೇ ಬದಲಾಯಿಸಿದ್ದು, ಮುಂಬರುವ ಚುನಾವಣೆಗಾಗಿ ಶಕ್ತಿ ಮೀರಿ ತಯಾರಿ ನಡೆಸುತ್ತಿದೆ. ಮತದಾನಕ್ಕೆ ಸಂಬಂಧಿಸಿದ ಕಾರ್ಯಗಳಿಗಾಗಿ 10 ಸದಸ್ಯರ ಚುನಾವಣಾ ಪ್ರಚಾರ ಸಮಿತಿಯನ್ನು ಸಹ ರಚಿಸಿದೆ.
ಟಿವಿಕೆ ತನ್ನ ಪ್ರಣಾಳಿಕೆಯ ಬಗ್ಗೆ ನಿರ್ಧರಿಸಲು ಇತ್ತೀಚೆಗೆ ಮೊದಲ ಚುನಾವಣಾ ಪ್ರಚಾರ ಸಮಿತಿ ಸಭೆಯನ್ನು ಕರೆದಿದ್ದು, ಈ ಪ್ರಣಾಳಿಕೆಯಲ್ಲಿ ಕೈಗಾರಿಕೆ, ಕೃಷಿ ಮತ್ತು ನೇಯ್ಗೆ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸಮಗ್ರ ಬೆಳವಣಿಗೆ ಮತ್ತು ಎಲ್ಲಾ ಕ್ಷೇತ್ರಗಳಿಗೆ ದೃಷ್ಟಿಕೋನದ ಮೂಲಕ ಕರಾವಳಿ ರಾಜ್ಯವನ್ನು ಪರಿವರ್ತಿಸಲು ದಾರಿ ಮಾಡಿಕೊಡುತ್ತದೆ ಎಂದು ಪಕ್ಷದ ನಾಯಕ ಅರುಣ್‌ರಾಜ್ ಹೇಳಿದ್ದಾರೆ(ಏಜೆನ್ಸೀಸ್​).