VijayVsDMK | ಭುಗಿಲೆದ್ದ ಡಿಎಂಕೆ ಆಕ್ರೋಶಕ್ಕೆ ತುರ್ತು ಪರಿಸ್ಥಿತಿಯ ಆ ಭೀಕರ ಇತಿಹಾಸವೇ ಕಾರಣವಂತೆ!
VijayVsDMK: ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಮಾಡಿದ ಒಂದು ಸನ್ನೆ ಈಗ ಡಿಎಂಕೆ ಮತ್ತು ಟಿವಿಕೆ ನಡುವೆ ದೊಡ್ಡ ಮಟ್ಟದ ರಾಜಕೀಯ ಸಮರಕ್ಕೆ ಕಾರಣವಾಗಿದ್ದು, 1976ರ ತುರ್ತು ಪರಿಸ್ಥಿತಿಯಲ್ಲಿ ಸ್ಟಾಲಿನ್ ಮಾಡಿದ್ದ ಸನ್ನೆಯನ್ನು ಗೇಲಿ ಮಾಡಲು ಸಿಎಂ ಹೀಗೆ ಮಾಡಿದ್ದಾರೆ ಎಂದು ಡಿಎಂಕೆ ಆರೋಪಿಸಿದರೆ, ಅದು ಉದ್ದೇಶಪೂರ್ವಕವಲ್ಲದ ಆಕಸ್ಮಿಕ ಘಟನೆ ಎಂದು ವಿಜಯ್ ಸ್ಪಷ್ಟನೆ ನೀಡಿದ್ದಾರೆ.
ಸೆಪ್ಟೆಂಬರ್ 7 ರ ತಮ್ಮ ಭಾಷಣದಲ್ಲಿ, ಪ್ರತಿಪಕ್ಷ ಡಿಎಂಕೆ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಮಾತನಾಡುತ್ತಿದ್ದಾಗ, ವಿಜಯ್ ತಮ್ಮ ಒಂದು ಕೈಯಿಂದ ದವಡೆಯನ್ನು ಸವರಿದರು. ಡಿಎಂಕೆ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಂತೆ, ವಿಜಯ್ ತಮ್ಮ ಬಾಡಿ ಲಾಂಗ್ವೇಜ್ ಅಕಸ್ಮಾತ್ ಆಗಿದ್ದು ಮತ್ತು ಯಾರನ್ನು ಅಣುಕಿಸುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿಎಂ ವಿಜಯ್ ತಮ್ಮ ನಾಯಕ ಸ್ಟಾಲಿನ್ ಅವರನ್ನು ಗೇಲಿ ಮಾಡುತ್ತಿದ್ದಾರೆ ಎಂದು ಡಿಎಂಕೆ ನಾಯಕರು ಆರೋಪಿಸುತ್ತಿದ್ದಾರೆ. ಇದು ಸ್ಟಾಲಿನ್ ಅವರಿಗೆ 1976ರ ನೋವಿನ ಘಟನೆಯೊಂದನ್ನು ನೆನಪಿಸುವಂತಿದೆ.
ಅಷ್ಟಕ್ಕೂ 1976ರಲ್ಲಿ ಆಗಿದ್ದೇನು..?
ಇದು ಸುಮಾರು ಐದು ದಶಕಗಳ ಹಿಂದಿನ ಕಥೆಯಾಗಿದೆ. 1975-77ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಕರುಣಾನಿಧಿ ನೇತೃತ್ವದ ಡಿಎಂಕೆ ಸರ್ಕಾರವನ್ನು ವಜಾಗೊಳಿಸಲಾಯಿತು. ಆ ನಂತರ 1976ರ ಆರಂಭದಲ್ಲಿ, ಡಿಎಂಕೆಯ ಯುವ ನಾಯಕರಾಗಿದ್ದ ಸ್ಟಾಲಿನ್ ಅವರನ್ನು ಬಂಧಿಸಲಾಯಿತು. ಅವರನ್ನು ಮಿಸಾ (MISA) ಕಾಯ್ದೆಯಡಿಯಲ್ಲಿ ಬಂಧಿಸಿ ಮದ್ರಾಸ್ ಸೆಂಟ್ರಲ್ ಜೈಲಿನಲ್ಲಿಡಲಾಗಿತ್ತು. ತುರ್ತು ಪರಿಸ್ಥಿತಿ ಮುಗಿಯುವವರೆಗೆ ಅವರು ಹಲವಾರು ತಿಂಗಳುಗಳ ಕಾಲ ಅಲ್ಲೇ ಇದ್ದರು. ನಂತರ ಮಾರ್ಚ್ 1977ರಲ್ಲಿ ತುರ್ತು ಪರಿಸ್ಥಿತಿ ಮುಕ್ತಾಯಗೊಂಡಾಗ ಅವರನ್ನು ಬಿಡುಗಡೆ ಮಾಡಲಾಯಿತು.
ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ ಅಥವಾ ಮಿಸಾ (MISA) ಎಂಬುದು 1971 ರಲ್ಲಿ ಜಾರಿಗೆ ತರಲಾದ ಒಂದು ಕಠಿಣ ಕಾನೂನಾಗಿತ್ತು. ಇದು ಅಧಿಕಾರಿಗಳಿಗೆ ವಿಚಾರಣೆಯಿಲ್ಲದೆ ಜನರನ್ನು ಬಂಧಿಸುವ ಅಧಿಕಾರವನ್ನು ನೀಡಿತು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ರಾಜಕೀಯ ಎದುರಾಳಿಗಳ ವಿರುದ್ಧ ಈ ಕಾಯ್ದೆಯನ್ನು ಬಳಸಲಾಯಿತು. ಈ ಕಾನೂನನ್ನು 1978 ರಲ್ಲಿ ಜನತಾ ಪಕ್ಷದ ಸರ್ಕಾರವು ರದ್ದುಗೊಳಿಸಿತು.
ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಸೇರಿದಂತೆ ಹಲವು ಪ್ರಮುಖ ರಾಜಕೀಯ ನಾಯಕರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಮಿಸಾ ಅಡಿಯಲ್ಲಿ ಜೈಲು ಪಾಲಾಗಿದ್ದರು. ಯಾದವ್ ಅವರು ಮಿಸಾ ಕಾಯ್ದೆಯಡಿಯಲ್ಲಿ ಜೈಲಿನಲ್ಲಿದ್ದಾಗ 1976 ರಲ್ಲಿ ಜನಿಸಿದ ತಮ್ಮ ಹಿರಿಯ ಮಗಳಿಗೆ ಮಿಸಾ ಭಾರತಿ ಎಂದು ಹೆಸರಿಟ್ಟರು.
ಸ್ಟಾಲಿನ್ ಆತ್ಮಚರಿತ್ರೆಯಲ್ಲಿ ಹಳೆ ಕಥೆಯ ಉಲ್ಲೇಖ!...
ಸ್ಟಾಲಿನ್ ಅವರು ತಮ್ಮ ಆತ್ಮಕಥೆಯಾದ ಉಂಗಳಿಲ್ ಒರುನ್ (ನಿಮ್ಮಲ್ಲಿ ಒಬ್ಬ) ಪುಸ್ತಕದಲ್ಲಿ 1976 ರಲ್ಲಿ ನಡೆದ ತಮ್ಮ ಬಂಧನ ಮತ್ತು ತದನಂತರದ ಜೈಲುವಾಸವನ್ನು ವಿವರಿಸಿದ್ದಾರೆ. ಆ ಸಮಯದಲ್ಲಿ ಜೈಲು ಹೇಗೆ ಹಿಂಸಾರೂಪದ ಕೊಠಡಿಯಾಗಿ ಮಾರ್ಪಟ್ಟಿತ್ತು ಮತ್ತು ನೋವಿನ ಕೂಗುಗಳಿಂದ ಆವರಿಸಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ. ಜಸ್ಟಿಸ್ ಎಂ ಎಂ ಇಸ್ಮಾಯಿಲ್ ಕಮಿಷನ್ ಮುಂದಿನ ಸಾಕ್ಷ್ಯವು, ಅವರು ಮತ್ತು ಇತರ ಕೈದಿಗಳು ತೀವ್ರ ದೈಹಿಕ ಕಿರುಕುಳವನ್ನು ಎದುರಿಸಿದರು ಎಂಬುದನ್ನು ಗಮನಿಸಿದೆ. ಇದರಿಂದಾಗಿ ಅವರ ದವಡೆಗೆ ಪೆಟ್ಟಾಗಿ ಅದು ಮುರಿದುಹೋಯಿತು.
ಡಿಎಂಕೆಗೆ, ಈ ಗಾಯವು ಕೇವಲ ದೈಹಿಕ ಕಲೆಯಷ್ಟೇ ಅಲ್ಲ. ಪಕ್ಷದ ನಾಯಕರು ಇದನ್ನು ಸಾಹಸದ ಗುರುತಾಗಿ ನೋಡುತ್ತಾರೆ. ಪ್ರಜಾಪ್ರಭುತ್ವವು ಒತ್ತಡದಲ್ಲಿದ್ದ ಸಮಯದಲ್ಲಿ ಸ್ಟಾಲಿನ್ ಅವರ ಪ್ರತಿರೋಧದ ಸಂಕೇತ ಎಂದು ಬಣ್ಣಿಸುತ್ತಾರೆ.
ವಿಜಯ್ ನಡೆಗೆ ಮಿತ್ರಪಕ್ಷದಿಂದಲೂ ವಿರೋಧ!
ಈ ವಿವಾದವು ವಿಜಯ್ ಅವರನ್ನು ತಮ್ಮ ಮಿತ್ರಪಕ್ಷವಾದ ಸಿಪಿಎಂ ಅಸಮಾಧಾನಕ್ಕೂ ಕಾರಣವಾಗಿದ್ದು, ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಮುಖ್ಯಮಂತ್ರಿಯವರ ಸನ್ನೆಯನ್ನು ಖಂಡಿಸಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಪೊಲೀಸರಿಂದ ಸ್ಟಾಲಿನ್ ತೀವ್ರವಾಗಿ ಹಲ್ಲೆಗೊಳಗಾಗಿದ್ದರು ಮತ್ತು ಅವರ ದವಡೆ ಮುರಿದುಹೋಗಿತ್ತು ಎಂದು ಹೇಳಿದ್ದಾರೆ.
ಯಾರೇ ಮಾಡಿದರೂ ಬಾಡಿ ಶೇಮಿಂಗ್ ಖಂಡನೀಯ. ಸ್ವತಃ ಮುಖ್ಯಮಂತ್ರಿಯವರೇ ಅದನ್ನು ಮಾಡಿರುವುದು ಜವಾಬ್ದಾರಿ ರಹಿತ ಕೃತ್ಯ ಎಂದು ಷಣ್ಮುಗಂ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜನರ ಅಭಿವೃದ್ಧಿಯ ಕಡೆಗೆ ಗಮನ ಹರಿಸುವ ಬದಲು, ವಿಧಾನಸಭೆಯನ್ನು ಇಂತಹ ವೈಯಕ್ತಿಕ ಟೀಕೆಗಳಿಗೆ ವೇದಿಕೆಯನ್ನಾಗಿ ಮಾಡಿಕೊಳ್ಳುವುದು ಅನೈತಿಕ ಎಂದು ಷಣ್ಮುಗಂ ಟೀಕಿಸಿದ್ದಾರೆ. ಜೊತೆಗೆ, ತಮ್ಮ ತಮ್ಮ ನಾಯಕರನ್ನು ಹೊಗಳಲು ಮಾತ್ರವೇ ಸದನವನ್ನು ವೇದಿಕೆಯಾಗಿ ಬಳಸಿಕೊಳ್ಳುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).