ಭಯೋತ್ಪಾದನೆಯನ್ನೇ ಚಾಳಿ ಮಾಡಿಕೊಂಡಿರುವ ಪಾಕಿಸ್ತಾನ, ಮತ್ತೆ ತನ್ನ ದುಷ್ಟನೀತಿಯನ್ನು ಮುಂದುವರಿಸಿದೆ. ಜಮ್ಮು-ಕಾಶ್ಮೀರದ ನೌಥೇರಾ, ರಜೌರಿ ಗಡಿಭಾಗದಲ್ಲಿ ಪಾಕಿಸ್ತಾನದ ಡ್ರೋನ್ಗಳು ಪತ್ತೆಯಾದ ಬೆನ್ನಲ್ಲೇ ಪಾಕಿಸ್ತಾನದ ಗಡಿಯಲ್ಲಿ ಭಯೋತ್ಪಾದಕರ ಎಂಟು ಶಿಬಿರಗಳು ಸಕ್ರಿಯವಾಗಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಧ್ವಂಸಗೊಂಡ ಭಯೋತ್ಪಾದಕರ ಶಿಬಿರಗಳನ್ನು ಪಾಕ್ ಸರ್ಕಾರದ ಬೆಂಬಲದೊಂದಿಗೇ ಉಗ್ರ ಸಂಘಟನೆಗಳು ಮರುನಿರ್ಮಾಣ ಮಾಡುತ್ತಿರುವ ಬಗ್ಗೆ ಪಾಕ್ ಮಾಧ್ಯಮಗಳೇ ಕಳೆದ ಎರಡು-ಮೂರು ತಿಂಗಳಲ್ಲಿ ಹಲವು ಬಾರಿ ವರದಿ ಮಾಡಿವೆ. ಭಯೋತ್ಪಾದಕರಿಗೆ ಬೆಂಬಲ ಮುಂದುವರಿಸುತ್ತಿರುವ ಪಾಕ್ನ ನೀತಿಯನ್ನು ಅಂತಾರಾಷ್ಟ್ರೀಯ ವಲಯ ಕೂಡ ಗಟ್ಟಿದನಿಯಲ್ಲಿ ಖಂಡಿಸಬೇಕಿದೆ.
ಆಪರೇಷನ್ ಸಿಂಧೂರ ಇನ್ನೂ ಜಾರಿಯಲ್ಲಿದ್ದು, ಪಾಕಿಸ್ತಾನ ದುಸ್ಸಾಹಸ ಮಾಡಿದರೆ ಭಾರತ ಅತ್ಯಂತ ಕಠಿಣ ಪ್ರತಿಕ್ರಿಯೆ ನೀಡಲಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳಿದ್ದಾರೆ. ಆಪರೇಷನ್ ಸಿಂಧೂರ ಕುರಿತಂತೆ ಇನ್ನಷ್ಟು ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹಂಚಿಕೊಂಡ ಉಪೇಂದ್ರ ದ್ವಿವೇದಿ, ‘ಉಗ್ರ ಪೋಷಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಸರ್ಕಾರವು ಸೇನೆಯ ತ್ರಿವಳಿ ಪಡೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿತ್ತು. ತ್ರಿವಳಿ ಪಡೆಗಳ ಸಮನ್ವಯಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ. ಪಾಕ್ ಆಕ್ರಮಿತ ಪ್ರದೇಶಗಳಲ್ಲಿರುವ ಉಗ್ರ ಶಿಬಿರಗಳನ್ನು ಗುರಿಯಾಗಿಸಿ 2025ರ ಮೇ 7ರಂದು ನಡೆಸಿದ 22 ನಿಮಿಷಗಳ ದಾಳಿಯ ನಂತರ ಈ ಕಾರ್ಯಾಚರಣೆ ಮೇ 10ರವರೆಗೆ 88 ಗಂಟೆಗಳ ಕಾಲ ಮುಂದುವರಿಯಿತು’ ಎಂದಿದ್ದಾರೆ.
ಪಾಕ್ಗೆ ಬುದ್ಧಿ ಕಲಿಸಲೆಂದೇ ಭಯೋತ್ಪಾದಕರ ಶಿಬಿರಗಳನ್ನು ಗುರಿಯಾಗಿಸಿ ಕಳೆದ ವರ್ಷ ದಾಳಿ ನಡೆಸಲಾಗಿತ್ತು. ಇದರಲ್ಲಿ ಭಾರಿ ಹಾನಿ ಅನುಭವಿಸಿದ ಬಳಿಕವೂ ಪಾಕ್ ಬುದ್ಧಿ ಕಲಿತಿಲ್ಲ ಎಂಬುದು ಸ್ಪಷ್ಟ. ರಕ್ತ ಬೀಜಾಸುರನಂತೆ ಉಗ್ರ ಶಿಬಿರಗಳು ತಲೆ ಎತ್ತುತ್ತಲೇ ಇದ್ದು, ಭಾರತ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಬೇಕಿದೆ ಮತ್ತು ಈ ಸಂಗತಿಯನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಟ್ಟಿದನಿಯಲ್ಲಿ ಪ್ರಸ್ತಾಪಿಸಬೇಕಿದೆ. ಸೀಮಿತ ಕಾರ್ಯಾಚರಣೆಯಿಂದ ಪಾಕಿಸ್ತಾನ ಬುದ್ಧಿ ಕಲಿಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಾಕ್ನಲ್ಲಿನ ಉಗ್ರ ಸಂಘಟನೆಗಳನ್ನು ಬೇರುಸಮೇತ ಕಿತ್ತೊಗೆಯುವವರೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ.
ಆಪರೇಷನ್ ಸಿಂಧೂರದ ಹೊತ್ತಿನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಭೂ ದಾಳಿಗೂ ಸಿದ್ಧವಾಗಿತ್ತು ಎಂದು ದ್ವಿವೇದಿ ಹೇಳಿದ್ದಾರೆ. ಹಾಗಾಗಿ, ಭಾರತದ ಸಹನೆಯನ್ನು ಮತ್ತೆಮತ್ತೆ ಪರೀಕ್ಷಿಸುವ ಉದ್ಧಟತನವನ್ನು ಪಾಕ್ ಮಾಡದಿರಲಿ. ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಶಕ್ಸಗಮ್ ಕಣಿವೆ ಪ್ರದೇಶ ತನ್ನದು ಎಂದು ಚೀನಾ ಹೇಳಿಕೊಂಡಿದ್ದು, ಇದಕ್ಕೆ ಭಾರತ ಸೂಕ್ತ ತಿರುಗೇಟನ್ನು ನೀಡಿದೆ. ಚೀನಾ ಮತ್ತು ಪಾಕಿಸ್ತಾನ ನಡುವೆ ನಡೆದ 1963ರ ಗಡಿ ಒಪ್ಪಂದವೇ ಕಾನೂನು ಬಾಹಿರ ಹಾಗೂ ಅಮಾನ್ಯವಾಗಿದ್ದು, ಭಾರತದ ಅವಿಭಾಜ್ಯ ಅಂಗವಾದ ಜಮ್ಮು-ಕಾಶ್ಮೀರದ ಯಾವುದೇ ಪ್ರದೇಶದ ಮೇಲೆ ಯಾವುದೇ ದೇಶ ಹಕ್ಕು ಸಾಧಿಸಲು ಸಾಧ್ಯವಿಲ್ಲ.