ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ 
ದೇಶ

ಸಿಎಂ ಆದ ಬಳಿಕ ಇಂದು ಮೊದಲ ಬಾರಿಗೆ ವಿಜಯ್ ದೆಹಲಿ ಭೇಟಿ; ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕರ ಭೇಟಿ ಸಾಧ್ಯತೆ | CM Vijay

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್(CM Vijay) ಅವರು ಬುಧವಾರ(ಮೇ 27) ನವದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದ್ದು, ಸಿಎಂ ಆದ ಬಳಿಕ ಇದು ಅವರ ಮೊದಲ ದೆಹಲಿ ಭೇಟಿಯಾಗಲಿದ್ದು, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಸಿಎಂ ವಿಜಯ್ ಅವರ ವೇಳಾಪಟ್ಟಿ ಪ್ರಕಾರ, ಇಂದು ಪೂರ್ತಿ ದಿನ ಅವರು ದೆಹಲಿಯಲ್ಲಿರಲಿದ್ದು ನಾಳೆ ಚೆನ್ನೈಗೆ ಮರಳುವ ನಿರೀಕ್ಷೆಯಿದೆ. ಸಂಜೆ 4.30ರ ಸುಮಾರಿಗೆ ಪ್ರಧಾನಿ ಮೋದಿ ಮತ್ತು ಸಿಎಂ ವಿಜಯ್ ಭೇಟಿಗೆ ಸಮಯ ನಿಗದಿಯಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ವಿಜಯ್ ತಮಿಳುನಾಡಿನ ಅವಶ್ಯಕತೆಗಳ ಕುರಿತು ವಿವರವಾದ ಮನವಿ ಪತ್ರವನ್ನು ಸಲ್ಲಿಸುವ ನಿರೀಕ್ಷೆಯಿದೆ. ಜೊತೆಗೆ ವಿವಿಧ ಯೋಜನೆಗಳಿಗೆ ಹಣ ಹಂಚಿಕೆ, ಅಭಿವೃದ್ಧಿ ಯೋಜನೆಗಳಿಗೆ ಬಾಕಿ ಇರುವ ಅನುಮತಿಗಳು, ಮೇಕೆದಾಟು ವಿಷಯ ಮತ್ತು ಪಿಎಂ ಶ್ರೀ ಯೋಜನೆ ಚರ್ಚಿಸುವ ಸಾಧ್ಯತೆ ಇದೆ.
ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯವನ್ನು ಬಾಧಿಸುವ ಪ್ರಮುಖ ಅಂತರರಾಜ್ಯ ಸಮಸ್ಯೆಗಳಿಗೆ ಮತ್ತು ನಡೆಯುತ್ತಿರುವ ಯೋಜನೆಗಳಿಗೆ ಆರ್ಥಿಕ ನೆರವು ಪಡೆಯುವ ಸಾಧ್ಯತೆಯಿದೆ. ಬಳಿಕ ಸಿಎಂ ವಿಜಯ್ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ (ಏಜೆನ್ಸೀಸ್).