ಚೆನ್ನೈ: ಡಿಎಂಕೆಯ ಹಿರಿಯ ನಾಯಕ ಅನಿತಾ ರಾಧಾಕೃಷ್ಣನ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ (TVK Government) ಟಿವಿಕೆ ಸಮ್ಮಿಶ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಈ ಹೊಸ ಆಡಳಿತವು ಆರು ತಿಂಗಳೂ ಉಳಿಯುವುದಿಲ್ಲ. ಆದಾಗ್ಯೂ, ವಿಜಯ್ಗಿಂತ ಮೊದಲು ಸಿಎಂ ಆಗಿದ್ದ ಎಂ.ಕೆ ಸ್ಟಾಲಿನ್ ಶೀಘ್ರದಲ್ಲೇ ಅಧಿಕಾರಕ್ಕೆ ಮರಳುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಪ್ರಮುಖ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಧಾಕೃಷ್ಣನ್, ಈ ಸರ್ಕಾರ ಇನ್ನೂ ನಾಲ್ಕು ತಿಂಗಳು ಮಾತ್ರ ಉಳಿಯುತ್ತದೆ. ವಿಲ್ಲಿವಕ್ಕಂ ಕ್ಷೇತ್ರದಲ್ಲಿ ಗೆದ್ದಿರುವ ಆಧವ್ ಅರ್ಜುನ್ ಅವರೇ ಧೈರ್ಯವಿದ್ದರೆ ಆ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಿ, ನಾನು ಕೂಡಾ ರಾಜಿನಾಮೆ ನೀಡುತ್ತೇನೆ. ತಿರುಚೆಂಡೂರಿನಲ್ಲಿ ಸ್ಪರ್ಧಿಸೋಣ ಎಂದು ಸವಾಲು ಹಾಕಿದ್ದಾರೆ.
ತಿರುಚೆಂಡೂರ್ ಕ್ಷೇತ್ರವು 25 ವರ್ಷಗಳಿಂದ ರಾಧಾಕೃಷ್ಣನ್ ಅವರ ಭದ್ರಕೋಟೆಯಾಗಿದೆ.
ವಿಶೇಷವೆಂದರೆ, ಅವರು 2001 ರ ಚುನಾವಣೆಯಲ್ಲಿ ಡಿಎಂಕೆಯ ಪ್ರಬಲ ದ್ರಾವಿಡ ಪ್ರತಿಸ್ಪರ್ಧಿಯಾದ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇಲ್ಲಿ ಮೊದಲ ಬಾರಿ ಗೆದ್ದಿದ್ದರು. ಆ ಬಳಿಕ, 2009 ರಲ್ಲಿ ಅವರು ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗಿ, ಅಂದಿನಿಂದಲೂ ಈ ಕ್ಷೇತ್ರವನ್ನು ಡಿಎಂಕೆ ಪರವಾಗಿಯೇ ತಮ್ಮ ವಶದಲ್ಲಿಟ್ಟುಕೊಂಡಿದ್ದಾರೆ.
ತಮ್ಮ ಭದ್ರಕೋಟೆಯಾದ ಕೊಲತ್ತೂರ್ನ್ನು ವಿ.ಎಸ್ ಬಾಬು ವಿರುದ್ಧ ಕಳೆದುಕೊಂಡ ನಂತರ ಅನಿತಾ ಸ್ಟಾಲಿನ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಆದಾಗ್ಯೂ, ಡಿಎಂಕೆ ಮಾಜಿ ನಾಯಕ ವಿ.ಎಸ್ ಬಾಬು ನಮ್ಮ ನಾಯಕರನ್ನು ಸೋಲಿಸಬೇಕೆಂದೇ ಟಿವಿಕೆಗೆ ಸೇರಿದ್ದರು. ಮುಂದಿನ ಬಾರಿ ಸ್ಟಾಲಿನ್ ತಿರುಚ್ಚಿಯಲ್ಲಿ ಸ್ಪರ್ಧಿಸಬೇಕೆಂದು ನಾವು ಬಯಸುತ್ತೇವೆ. ಅವರು ಕೊಲತ್ತೂರ್ ಅನ್ನು ಸಿಂಗಾಪುರವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದ್ದಾರೆ.
ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಚುನಾವಣಾ ಗೆಲುವು ಕಳೆದ ಕೆಲವು ದಶಕಗಳಲ್ಲೇ ತಮಿಳುನಾಡು ರಾಜಕಾರಣದಲ್ಲಿ ಕಂಡುಬಂದ ಅತ್ಯಂತ ದೊಡ್ಡ ರಾಜಕೀಯ ಆಘಾತ ಎನ್ನಲಾಗಿದೆ. ಒಟ್ಟು 234 ಕ್ಷೇತ್ರಗಳಲ್ಲಿ 108 ಸ್ಥಾನಗಳನ್ನು ಗೆದ್ದು, ಬಹುಮತಕ್ಕೆ 10 ಸ್ಥಾನಗಳ ಕೊರತೆಯನ್ನು ಅನುಭವಿಸಿತು. ನಂತರ ಕಾಂಗ್ರೆಸ್, ಎರಡು ಎಡ ಪಕ್ಷಗಳು ಮತ್ತು ವಿದುತಲೈ ಚಿರುತೈಗಲ್ ಕಚ್ಚಿಯಿಂದ ಸ್ಥಾನಗಳನ್ನು ಪಡೆಯುವ ಮೂಲಕ 10 ಸ್ಥಾನಗಳ ಅಂತರವನ್ನು ಅಂತಿಮವಾಗಿ ಸರಿಪಡಿಸಲಾಯಿತು. ಬಹುಮತದ ಅಂಕ ದಾಟಿದ ನಂತರ, ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ (ಏಜೆನ್ಸೀಸ್).