TVK Vijay | ಟಿವಿಕೆ ಮುಖ್ಯಸ್ಥ ವಿಜಯ್ 
ದೇಶ

ಡಿಎಂಕೆ ಕೋಟೆಗೆ ಟಿವಿಕೆ ಲಗ್ಗೆ... ವಿಜಯ್​ ಪಾಲಿಗೆ ಒಲಿಯುತ್ತಾ ಮುಖ್ಯಮಂತ್ರಿ ಗದ್ದುಗೆ..? ಶಾಕಿಂಗ್ ಭವಿಷ್ಯ ನುಡಿದ ಆಕ್ಸಿಸ್ ಮೈ ಇಂಡಿಯಾ! | TVK Vijay

TVK Vijay: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅದ್ಭುತ ಬದಲಾವಣೆಯ ಮುನ್ಸೂಚನೆಯನ್ನು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್​ ಪೋಲ್​ ನೀಡಿದ್ದು, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷವು ತನ್ನ ಮೊದಲ ಚುನಾವಣೆಯಲ್ಲೇ ಅಚ್ಚರಿಯ ಪ್ರವೇಶ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
ಒಟ್ಟು 234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ ಪಕ್ಷವು 98–120 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಮೈತ್ರಿಕೂಟಕ್ಕೆ ನೇರ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಟಿವಿಕೆ ಸುಮಾರು 35% ಮತಗಳನ್ನು ಪಡೆಯುವ ಅಂದಾಜಿದ್ದು, ಇದು ಆಡಳಿತಾರೂಢ ಡಿಎಂಕೆ ಮೈತ್ರಿಕೂಟದ ಮತ ಹಂಚಿಕೆಗೆ (35%) ಸಮನಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟ 92–110 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದ್ದರೆ, ಎನ್‌ಡಿಎ ಮೈತ್ರಿಕೂಟ 22–32 ಸ್ಥಾನಗಳಿಗೆ ತೃಪ್ತಿಪಡುವ ಸಾಧ್ಯತೆಯಿದೆ. ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಮತ ಹಂಚಿಕೆ ಸುಮಾರು 23% ಕ್ಕೆ ಕುಸಿಯುವ ಮುನ್ಸೂಚನೆ ಇದೆ. ಟಿವಿಕೆ ಪಕ್ಷದ ಈ ಅಭೂತಪೂರ್ವ ಏಳಿಗೆಗೆ ಯುವ ಮತದಾರರ ಬೆಂಬಲವೇ ಪ್ರಮುಖ ಕಾರಣವಾಗಿದ್ದು, ವರ್ಷದ ಬಾರಿಗೆ ಮತ ಚಲಾಯಿಸಿದವರಲ್ಲಿ ಶೇ. 68 ರಷ್ಟು ಮಂದಿ ವಿಜಯ್ ಪರವಾಗಿ ನಿಂತಿದ್ದಾರೆ ಎನ್ನಲಾಗಿದ್ದು, 20-29 ವರ್ಷದವರು ಶೇ. 59 ಮತ್ತು 30-39 ವರ್ಷದ ಶೇ. 45 ರಷ್ಟು ಮತದಾರರು ಟಿವಿಕೆಯನ್ನು ಬೆಂಬಲಿಸಿದ್ದಾರೆ ಎಂದು ಭವಿಷ್ಯ ನುಡಿದಿದೆ.

ಮುಖ್ಯಮಂತ್ರಿ ರೇಸ್‌ನಲ್ಲಿ ವಿಜಯ್!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಜನರ ಮೊದಲ ಆಯ್ಕೆಯಾಗಿ ವಿಜಯ್ ಹೊರಹೊಮ್ಮಿದ್ದು, ಆಕ್ಸಿಸ್ ಮೈ ಇಂಡಿಯಾ ಪ್ರಕಾರ, ವಿಜಯ್​ಗೆ 37% ಬೆಂಬಲ ವ್ಯಕ್ತವಾಗಿದೆ, ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (35%) ಅವರಿಗಿಂತ ವಿಜಯ್​ ಸ್ವಲ್ಪ ಮುಂದಿದ್ದಾರೆ.
ತಮಿಳುನಾಡಿನ ಮತದಾರರಲ್ಲಿ ಕಂಡುಬರುತ್ತಿರುವ ಬದಲಾವಣೆಯ ಬಯಕೆಯೇ ಟಿವಿಕೆಗೆ ಶ್ರೀರಕ್ಷೆಯಾಗಿದ್ದು, ಸುಮಾರು 35% ಮತದಾರರು ಬದಲಾವಣೆಯನ್ನೇ ಪ್ರಮುಖ ವಿಷಯವಾಗಿ ಪರಿಗಣಿಸಿದ್ದಾರೆ. ಟಿವಿಕೆ ಬೆಂಬಲಿಗರಲ್ಲಿ ಈ ಪ್ರಮಾಣ ಶೇ. 77 ರಷ್ಟಿದೆ. ವಿಜಯ್ ವೈಯಕ್ತಿಕ ಆಕರ್ಷಣೆ, ಜಾತಿ ಮತ್ತು ವರ್ಗಗಳನ್ನು ಮೀರಿದ ಜನಪ್ರಿಯತೆ ಪಕ್ಷಕ್ಕೆ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ವ್ಯಾಪಕ ಬೆಂಬಲ ತಂದುಕೊಟ್ಟಿದೆ.
ಪೋಲ್‌ಸ್ಟರ್ ಪ್ರದೀಪ್ ಗುಪ್ತಾ ವಿಜಯ್​ರ ರಾಜಕೀಯ ಏಳಿಗೆಯನ್ನು ತಮಿಳುನಾಡಿನ ಎಂಜಿಆರ್ ಮತ್ತು ಆಂಧ್ರಪ್ರದೇಶದ ಎನ್.ಟಿ. ರಾಮರಾವ್ ಅವರ ಉದಯಕ್ಕೆ ಹೋಲಿಸಿದ್ದಾರೆ. ಒಂದು ವೇಳೆ ಈ ಮುನ್ಸೂಚನೆಗಳು ನಿಜವಾದರೆ, ಟಿವಿಕೆ ತಮಿಳುನಾಡಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಕಿಂಗ್‌ಮೇಕರ್ ಪಾತ್ರ ನಿರ್ವಹಿಸುವ ಅಥವಾ ಸುದೀರ್ಘ ರಾಜಕೀಯ ಶಕ್ತಿಯಾಗಿ ಸ್ಥಾಪಿತವಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ(ಏಜೆನ್ಸೀಸ್​​).