- ತಮಿಳುನಾಡು ಚುನಾವಣೆಯಲ್ಲಿ ಹೊಸ ಇತಿಹಾಸ ಬರೆದ ನಟ ವಿಜಯ್.
- ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಂದ ವಿಜಯ್‌ಗೆ ಅಭಿನಂದನೆಗಳ ಮಹಾಪೂರ.
- ದ್ರಾವಿಡ ಪಕ್ಷಗಳ ಭದ್ರಕೋಟೆ ಭೇದಿಸಿದ 'ದಳಪತಿ' ವಿಜಯ್.
- ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಧನ್ಯವಾದ ತಿಳಿಸಿದ ವಿಜಯ್
ಚೆನ್ನೈ: ತಮಿಳುನಾಡಿನಲ್ಲಿ ಯಾರೂ ಊಹಿಸದಂತಹ ಗೆಲುವು ಟಿವಿಕೆಗೆ(TVK Vijay) ಸಿಕ್ಕಿದೆ. ಸ್ಯಾಂಡಲ್ವುಡ್, ಕಾಲಿವುಡ್ ಮತ್ತು ಟಾಲಿವುಡ್ ಸ್ಟಾರ್ಗಳಿಂದ ಅಭಿನಂದನೆಯ ಕಾಮೆಂಟ್ಗಳು ಕೇಳಿಬರುತ್ತಿವೆ. ಇಷ್ಟೇ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಭಿನಂದನೆ ಸಲ್ಲಿಸಿದ್ದರು. ಗಣ್ಯರ ಶುಭ ಹಾರೈಕೆಗೆ ವಿಜಯ್ ಅವರು ಎಕ್ಸ್ ಮೂಲಕ ಹೃತ್ಪೂರ್ವಕ ಧನ್ಯವಾದ ಅರ್ಪಿಸಿದ್ದಾರೆ.
234 ಕ್ಷೇತ್ರಗಳಿಗಾಗಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆಯು 108 ಸ್ಥಾನ ಪಡೆದುಕೊಂಡರೆ, ಡಿಎಂಕೆ 59 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇನ್ನು ಎಐಎಡಿಎಂಕೆ 47 ಸ್ಥಾನ ಪಡೆದುಕೊಂಡಿತ್ತು.
ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದು ಹೀಗೆ..
ತಮಿಳುನಾಡಿನಲ್ಲಿ ವಿಜಯ್ ಕಂಡ ಗೆಲುವನ್ನು, ಅದಕ್ಕಾಗಿ ಅವರು ಪಟ್ಟ ಶ್ರಮವನ್ನು ಉಲ್ಲೇಖಿಸಿ ಪ್ರಧಾನಿ ಮೋದಿಯವರು ಶುಭ ಕೋರಿದ್ದರು. ನಿಮ್ಮ ಶುಭ ಹಾರೈಕೆಗೆ ಅಭಿನಂದನೆ ಪ್ರಧಾನಿ ಮಂತ್ರಿಗಳೇ ಎಂದು ವಿಜಯ್ ಅವರು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಿಮ್ಮ ಶುಭಾಶಯಗಳಿಗಾಗಿ ಧನ್ಯವಾದ. ಈಗ ನಮಗೆ ನಮ್ಮ ಜನರ ಯೋಗಕ್ಷೇಮಕ್ಕಾಗಿ ಕೆಲಸ ಮಾಡುವುದೇ ಏಕೈಕ ಗುರಿ. ರಾಜಕೀಯವನ್ನು ಮೀರಿ, ನಾವು ರಾಜ್ಯದ ಪ್ರಗತಿ ಮತ್ತು ತಮಿಳುನಾಡಿನ ಜನರ ಅಭಿವೃದ್ಧಿಯತ್ತ ಕೇಂದ್ರೀಕರಿಸುತ್ತೇವೆ ಈ ಪ್ರಯತ್ನದಲ್ಲಿ ನಾವು ಕೇಂದ್ರ ಸರ್ಕಾರದ ಬೆಂಬಲವನ್ನು ಪಡೆಯಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಗೆ ತ್ಯಾಂಕ್ಯು ಎಂದ ವಿಜಯ್
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಶುಭಾಷಯ ತಿಳಿಸುವುದಕ್ಕಾಗಿ ಧನ್ಯವಾದಗಳು. ಸಾರ್ವಜನಿಕ ಸೇವೆಯಲ್ಲಿ ಶ್ರೇಷ್ಠತೆಗೆ ಮತ್ತು ಸಾಮೂಹಿಕ ಸಹಕಾರದ ಅಗತ್ಯವಿರುವ ನಮ್ಮ ರಾಜ್ಯದ ಸಾಂಸ್ಕೃತಿಕ ನೀತಿಯನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿರುತ್ತೇವೆ. ರಾಜಕೀಯವನ್ನು ಮೀರಿ, ತಮಿಳುನಾಡಿನ ಜನರ ಕಲ್ಯಾಣಕ್ಕೆ ನಾವು ಆದ್ಯತೆ ನೀಡುತ್ತೇವೆ ಎಂದು ಬರೆದುಕೊಂಡಿದ್ದಾರೆ.
ದಶಕಗಳ ಕಾಲ ತಮಿಳಿನಾಡನ್ನು ಆಳ್ವಿಕೆ ಮಾಡಿದ ಡಿಎಂಕೆಯನ್ನು ಟಿವಿಕೆ ಹೊಡೆದುರುಳಿಸಿದೆ. ಟಿವಿಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಹೂಡಿದ್ದ ಪ್ರಾಬಲ್ಯವನ್ನು ಟಿವಿಕೆ ಮಣಿಸಿದೆ, (ಏಜೆನ್ಸೀಸ್).