CM Vijay | ಮುಖ್ಯಮಂತ್ರಿ ಜೋಸೆಫ್ ವಿಜಯ್ 
ದೇಶ

ರೈತರ ಪರ ನಿಂತ ತಮಿಳುನಾಡು ಸರ್ಕಾರ!....ಡಿಎಂಕೆ ಅವಧಿಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು | CM Vijay

ಚೆನ್ನೈ: ಈ ಹಿಂದೆ ಡಿಎಂಕೆ ಆಡಳಿತಾವಧಿಯಲ್ಲಿ ಪ್ರತಿಭಟನೆ ನಡೆಸಿದ್ದ ರೈತರು ಮತ್ತು ಶಿಕ್ಷಕರ ವಿರುದ್ಧ ದಾಖಲಿಸಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಬುಧವಾರ ಘೋಷಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಹಿಂದಿನ ಎಂ ಕೆ ಸ್ಟಾಲಿನ್ ನೇತೃತ್ವದ ಸರ್ಕಾರ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಇಂದು ಸದನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, 2021 ರ ಮೇ ನಿಂದ 2026 ರ ನಡುವಿನ ಅವಧಿಯಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಶಿಕ್ಷಕರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿತ್ತು, ಪ್ರಕರಣಗಳು ಇನ್ನೂ ಬಾಕಿ ಇರುವುದರಿಂದ ಅವರೆಲ್ಲರೂ ಇಂದಿಗೂ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಈ ಸರ್ಕಾರವು ರೈತರು ಮತ್ತು ಶಿಕ್ಷಕರ ಪರವಾಗಿ ಹಾಗೂ ಅವರ ನ್ಯಾಯಯುತ ಬೇಡಿಕೆಗಳ ಪರವಾಗಿ ಸದಾ ನಿಲ್ಲುತ್ತದೆ. ಈ ನಿರ್ಧಾರವು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮತ್ತಷ್ಟು ಬಲಪಡಿಸುತ್ತದೆ ಹಾಗೂ ಸಾರ್ವಜನಿಕರು ಮತ್ತು ಸರ್ಕಾರದ ನಡುವಿನ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ವಿಜಯ್ ತಿಳಿಸಿದ್ದಾರೆ.
ರಾಜ್ಯದ ಬೆನ್ನೆಲುಬು ಆಗಿರುವ ರೈತರು ಸಿಪ್ಕಾಟ್ (SIPCOT) ಕೈಗಾರಿಕಾ ಅಭಿವೃದ್ಧಿ ಯೋಜನೆಗಳು ಹಾಗೂ ಪ್ರಸ್ತಾವಿತ ಪರಂದೂರು ವಿಮಾನನಿಲ್ದಾಣ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಅವರ ಮೇಲೆ ಪ್ರಕರಣಗಳನ್ನು ಹೂಡಲಾಗಿತ್ತು. ಆ ಪ್ರತಿಭಟನೆಗಳ ವೇಳೆ ರೈತರ ವಿರುದ್ಧ ದಾಖಲಿಸಲಾದ ಪ್ರಕರಣಗಳು ಇಂದಿಗೂ ಇತ್ಯರ್ಥವಾಗದೆ ಬಾಕಿಯುಳಿದಿವೆ ಎಂದು ಅವರು ಉಲ್ಲೇಖಿಸಿದರು. ಹಾಗೆಯೇ ಶಿಕ್ಷಕರು ಪ್ರಜಾಸತ್ತಾತ್ಮಕ ಮಾರ್ಗದಲ್ಲೇ ಪ್ರತಿಭಟನೆ ನಡೆಸಿದ್ದರೂ, ಅವರ ಮೇಲೆಯೂ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಅವು ಇಂದಿಗೂ ಬಾಕಿಯಿವೆ ಎಂದು ವಿಜಯ್ ಹೇಳಿದರು.
ಪ್ರಕರಣ ಎದುರಿಸುತ್ತಿರುವವರ ಕಷ್ಟಗಳನ್ನು ಪರಿಗಣಿಸಿ, ಪ್ರತಿಭಟನೆ ನಡೆಸಿದ್ದ ರೈತರು ಮತ್ತು ಶಿಕ್ಷಕರ ವಿರುದ್ಧ ಹೂಡಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ ಎಂದು ಅವರು ಸ್ಪಷ್ಟಪಡಿಸಿದರು. ಇದೇ ವೇಳೆ, ವಿದ್ಯಾರ್ಥಿಗಳು ಸೇರಿದಂತೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಸಿಪಿಐ ಪಕ್ಷವು ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಆಗ್ರಹಿಸಿದೆ.
ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ವಿರುದ್ಧ ಪ್ರತಿಭಟನೆ ನಡೆಸಿದ ಸಾರ್ವಜನಿಕರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಪಿಎಂಕೆ ಪಕ್ಷವೂ ಮುಖ್ಯಮಂತ್ರಿ ವಿಜಯ್ ಅವರನ್ನು ಒತ್ತಾಯಿಸಿದ್ದು, ಈ ಬೇಡಿಕೆಗಳನ್ನು ಸರ್ಕಾರವು ಪರಿಗಣಿಸಲಿದೆ ಎಂದು ಕಾನೂನು ಸಚಿವ ನಿರ್ಮಲ್ ಕುಮಾರ್ ತಿಳಿಸಿದ್ದಾರೆ.
ಧನುಷ್‌ ಸ್ವಂತ ಪಕ್ಷ ಆರಂಭಿಸಿದರೆ ಮೊದಲು ಓಡಿಹೋಗುವುದು ಆಧವ್ ಅರ್ಜುನ!
ತಮಿಳು ನಟ ಧನುಷ್‌ ಹೊಸ ರಾಜಕೀಯ ಪಕ್ಷ ಆರಂಭಿಸಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ, ಸಿಎಂ ಜೋಸೆಫ್ ವಿಜಯ್ ಅವರ ಆಪ್ತ ಸಚಿವ ಆಧವ್ ಅರ್ಜುನ ವಿರುದ್ಧ ಡಿಎಂಕೆ ತೀವ್ರ ವಾಗ್ದಾಳಿ ನಡೆಸಿದೆ. ಧನುಷ್‌ ರಾಜಕೀಯ ಪ್ರವೇಶಿಸಿದರೆ ಪಕ್ಷ ಬದಲಾಯಿಸುವಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದೇ ಆಧವ್ ಅರ್ಜುನ ಎಂದು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್‌ ಎಸ್ ಭಾರತಿ ಲೇವಡಿ ಮಾಡಿದ್ದಾರೆ. ಪ್ರತಿ ಸೀಸನ್‌ಗೂ ಪಕ್ಷ ಬದಲಾಯಿಸುವುದು ಅರ್ಜುನ ಅವರ ಹಳೆಯ ಚಾಳಿ. ಹಿಂದೆ ಡಿಎಂಕೆಯಲ್ಲಿದ್ದು ಹೊರಬಿದ್ದ ಅವರು, ನಂತರ ತಿರುಮಾವಳವನ್ ಅವರ ವಿಸಿಕೆ ಪಕ್ಷ ಸೇರಿ ಅದಕ್ಕೂ ಕೈಕೊಟ್ಟು ಈಗ ಟಿವಿಕೆಗೆ ಓಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಧನುಷ್ ತಮ್ಮ ಅಭಿಮಾನಿ ಸಂಘಕ್ಕೆ ಹೊಸ ಬಾವುಟ ಅನಾವರಣಗೊಳಿಸಿ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದ್ದರು. ಇದು ಸಿಎಂ ವಿಜಯ್ ಅವರ ಆರಂಭಿಕ ರಾಜಕೀಯ ಹೆಜ್ಜೆಗಳನ್ನು ನೆನಪಿಸುತ್ತಿದ್ದು, ಧನುಷ್ ಕೂಡ ಕೊಲಿವುಡ್‌ನ ಮುಂದಿನ ರಾಜಕೀಯ ರಂಗಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆಯೇ ಎಂಬ ಚರ್ಚೆ ತಮಿಳುನಾಡಿನಲ್ಲಿ ಕಾವು ಪಡೆದುಕೊಂಡಿದೆ(ಏಜೆನ್ಸೀಸ್​).