Vijay Resigns | ಶಾಸಕ ಸ್ಥಾನಕ್ಕೆ ಹಠಾತ್​ ರಾಜೀನಾಮೆ ನೀಡಿದ ಸಿಎಂ ವಿಜಯ್​! 
ದೇಶ

ಶಾಸಕ ಸ್ಥಾನಕ್ಕೆ ಹಠಾತ್​ ರಾಜೀನಾಮೆ ನೀಡಿದ ಸಿಎಂ ವಿಜಯ್​!..ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ಗುಡ್​ ಬೈ ಹೇಳಿದ್ದೇಕೆ ದಳಪತಿ..? | Vijay Resigns

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ತಾವು ಗೆಲುವು ಸಾಧಿಸಿದ್ದ ಎರಡು ಕ್ಷೇತ್ರಗಳ ಪೈಕಿ ಪೆರಂಬೂರ್ ಕ್ಷೇತ್ರವನ್ನು ಪ್ರತಿನಿಧಿಸಲು ನಿರ್ಧರಿಸಿದ್ದು, ಮತ್ತೊಂದು ಕ್ಷೇತ್ರವಾದ ತಿರುಚ್ಚಿ ಪೂರ್ವಕ್ಕೆ ಅಧಿಕೃತವಾಗಿ ರಾಜೀನಾಮೆ (Vijay Resigns) ನೀಡಿದ್ದಾರೆ.
ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೆಲವೇ ಗಂಟೆಗಳಲ್ಲೇ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಪ್ರಕಟವಾಗಿದ್ದು, ಇದರಿಂದಾಗಿ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ನಡೆಯಲಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರ್ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಭರ್ಜರಿ ಜಯ ದಾಖಲಿಸಿದ್ದರು. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ತಿರುಚಿರಾಪಳ್ಳಿ ಪೂರ್ವದಲ್ಲಿ 91,381 ಮತಗಳನ್ನು ಪಡೆದ ಅವರು ಡಿಎಂಕೆ ಅಭ್ಯರ್ಥಿ ಎಸ್. ಇನಿಗೊ ಇರುದಯರಾಜ್​​ರನ್ನು ಸೋಲಿಸಿದರೆ, ಪೆರಂಬೂರ್ ಕ್ಷೇತ್ರದಲ್ಲಿ 1,20,365 ಮತಗಳನ್ನು ಪಡೆಯುವ ಮೂಲಕ ಆರ್‌ಡಿ ಶೇಖರ್ ವಿರುದ್ಧ ದೊಡ್ಡ ಅಂತರದ ಗೆಲುವು ಸಾಧಿಸಿದ್ದರು.

ಮೊದಲ ಸಹಿಯಲ್ಲೇ ಫ್ರೀ ಪವರ್!

ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿಎಂ ವಿಜಯ್​ ಹಲವಾರು ಕಡತಗಳಿಗೆ ಸಹಿ ಹಾಕುವ ಮೂಲಕ ತಮ್ಮ ಆಡಳಿತಕ್ಕೆ ಚಾಲನೆ ನೀಡಿದ್ದು, ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ವಿಜಯ್​ ಸಹಿ ಮಾಡಿದ ಮೊದಲ ಕಡತವು ಗೃಹಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೆ ತರಲು ಅನುಮೋದನೆ ನೀಡಿದ್ದು, ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಪಡೆಯ ರಚನೆ ಹಾಗೂ ರಾಜ್ಯದಲ್ಲಿನ ಮಾದಕವಸ್ತು ಪಿಡುಗನ್ನು ನಿವಾರಿಸಲು ಪ್ರತಿ ಜಿಲ್ಲೆಯಲ್ಲೂ ಮಾದಕವಸ್ತು ವಿರೋಧಿ ಘಟಕವನ್ನು ಸ್ಥಾಪಿಸುವ ಪ್ರಸ್ತಾಪಗಳಿಗೂ ತಕ್ಷಣವೇ ಒಪ್ಪಿಗೆ ನೀಡಿದ್ದಾರೆ. ಶಿಕ್ಷಣ, ಆಹಾರ ಪೂರೈಕೆ, ಆರೋಗ್ಯ ರಕ್ಷಣೆ ಮತ್ತು ಮಹಿಳಾ ಸುರಕ್ಷತೆ ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದು ವಿಜಯ್​ ತಿಳಿಸಿದ್ದಾರೆ.