- ರಿಕ್ಕಿ ರಾಧನ್ ಪಂಡಿತ್ಗೆ ನೀಡಿದ್ದ ಓಎಸ್ಡಿ ಹುದ್ದೆ ವಾಪಾಸ್ ಪಡೆದ ಸಿಎಂ ವಿಜಯ್
- ಅಧಿಕಾರ ಸ್ವೀಕರಿಸುವ ಮುನ್ನವೇ ಖ್ಯಾತ ಜೋತಿಷಿಗೆ ಗೇಟ್ಪಾಸ್
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಸೃಷ್ಟಿಯಾಗಿರುವ ಹೊಸದೊಂದು ಸಂಚಲನ ಸದ್ಯ ದೇಶದ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿ.ಜೋಸೆಫ್ ವಿಜಯ್ ಅವರದ್ದು ಸುನಾಮಿ ಜಾತಕ, ಖಂಡಿತ ಈ ಬಾರಿಯ ಚುನಾವಣೆಯಲ್ಲಿ ಅವರಿಗೆ 100ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದ ರಿಕ್ಕಿ ರಾಧನ್ ಪಂಡಿತ್ಗೆ ಸಿಎಂ ವಿಜಯ್ ತಮ್ಮ ಸರ್ಕಾರದಲ್ಲಿ ವಿಶೇಷ ಕರ್ತವ್ಯ ಅಧಿಕಾರಿ ಸ್ಥಾನ ನೀಡಿದ್ದರು. ಇದು ಭಾರೀ ಚರ್ಚೆ ಹಾಗೂ ಟೀಕೆಗಳನ್ನು ಸ್ವೀಕರಿಸುತ್ತಿದ್ದಂತೆ ಇದೀಗ ವಿಜಯ್ ದಿಢೀರ್ ಉಲ್ಟಾ ಹೊಡೆದಿದ್ದಾರೆ.
ಚೊಚ್ಚಲ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಸಿಎಂ ಸಿ. ಜೋಸೆಫ್ ವಿಜಯ್, ತಮ್ಮ ಪಕ್ಷ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ಮತ್ತು ಸಲಹೆಗಾರ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೆಲ್ ಅವರಿಗೆ ಸಿಎಂ ಕಚೇರಿಯ ವಿಶೇಷ ಕರ್ತವ್ಯ ಅಧಿಕಾರಿ (OSD) ಹುದ್ದೆಯನ್ನು ನೀಡುವ ಮೂಲಕ ಭಾರೀ ಟೀಕೆಗಳಿಗೆ ಗುರಿಯಾದರು. ಇಂದಿನ (ಮೇ.13) ಸಭೆಯಲ್ಲಿ ವಿಶ್ವಾಸಮತಯಾಚನೆ ವೇಳೆ ಸರ್ಕಾರದ ವಿರುದ್ಧ ಭಾರೀ ವಿರೋಧಗಳು ಕೇಳಿಬರುತ್ತಿದ್ದಂತೆ ವಿಜಯ್ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಪ್ರಮುಖ ಮಿತ್ರ ಪಕ್ಷವಾದ ವಿದುತಲೈ ಚಿರುತೈಗಲ್ ಕಚ್ಚಿಯಿಂದ ಪ್ರತಿಭಟನೆ ಜೋರಾದ ಬೆನ್ನಲ್ಲೇ ರಾಧನ್ ಪಂಡಿತ್ರನ್ನು ಅಧಿಕಾರಿ ಸ್ಥಾನದಿಂದ ವಿಜಯ್ ಕೆಳಗಿಳಿಸಿದ್ದಾರೆ. ಇದು ತಕ್ಷಣಕ್ಕೆ ಜಾರಿಗೆ ಬರುವಂತೆ ಹೇಳಿದ್ದಾರೆ. ತಮಗೆ ಆಪ್ತರು ಹಾಗೂ ಸಲಹೆಗಾರರು ಎಂಬ ಒಂದು ಕಾರಣಕ್ಕೆ ಜೋತಿಷಿಯೊಬ್ಬರಿಗೆ ಹೇಗೆ ವಿಜಯ್ ಅಧಿಕಾರ ಹಂಚಿಕೆ ಮಾಡಿದರು. ಇದನ್ನು ನಾವ್ಯಾರೂ ಒಪ್ಪುವುದಿಲ್ಲ ಎಂದು ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಸಿಎಂ ರಾಧನ್ ಅವರಿಗೆ ನೀಡಿದ್ದ ವಿಶೇಷ ಅಧಿಕಾರವನ್ನು ಹಿಂಪಡೆದಿದ್ದಾರೆ.
ಯಾರು ಈ ರಾಧನ್ ಪಂಡಿತ್?
ವೈದಿಕ ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಮತ್ತು ಜೋತಿಷ್ಯದಲ್ಲಿ ಪ್ರವೀಣರಾಗಿರುವ ರಿಕ್ಕಿ ರಾಧನ್ ಪಂಡಿತ್ ಅವರಿಗೆ ಇದರಲ್ಲಿ ಸುಮಾರು 40 ವರ್ಷಗಳ ಅನುಭವವಿದೆ. 2024ರಲ್ಲೇ ವಿಜಯ್ ಅವರ ರಾಜಕೀಯ ಏಳಿಗೆಯ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದ ಪಂಡಿತ್, ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿದ್ದರು. ವಿಜಯ್ ಅವರದ್ದು ಸುನಾಮಿ ಜಾತಕ. ಅವರು ಚುನಾವಣೆಯಲ್ಲಿ ಜಯಭೇರಿ ಖಚಿತ ಎಂದು ಹೇಳಿದ್ದರು. ಅಂತೆಯೇ, ವಿಜಯ್ ಕೂಡ ತಮಿಳುನಾಡು ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಿದ್ದು ಹಲವರ ಹುಬ್ಬೇರಿಸಿತು.
ಹಳೆಯ ನಂಟು
ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೂ ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಕಾಣಿಸಿಕೊಂಡಿದ್ದ ರಾಧನ್ ಪಂಡಿತ್, ಬಿಜೆಪಿ, ಕಾಂಗ್ರೆಸ್, ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪ್ರಮುಖ ನಾಯಕರಿಗೂ ಚಿರಪರಿಚಿತರೇ. ಚಿತ್ರರಂಗದಲ್ಲಿದ್ದ ವಿಜಯ್ಗೆ ನಿಮಗೆ ರಾಜಕೀಯದಲ್ಲಿ ಯಶಸ್ಸು ಅಡಗಿದೆ ಎಂದು ಕಿವಿಮಾತು ನೀಡಿದ್ದ ಜ್ಯೋತಿಷಿ, ಈಗ ಸಿಎಂ ಕಚೇರಿಯಲ್ಲಿ ಪಡೆದಿದ್ದ ಹೊಸ ಅಧಿಕಾರದಿಂದ ವಂಚಿತರಾಗಿರುವುದು ಸ್ವತಃ ಟಿವಿಕೆಗೆ ಆಶ್ಚರ್ಯ ತಂದಿದೆ,(ಏಜೆನ್ಸೀಸ್).