ಕಟ್ಟುಕತೆ ಹೆಣೆಯುವಲ್ಲಿ ನಿಪುಣರು... ಸಚಿವ ಸತೀಶ್ ಜಾರಕಿಹೊಳಿ ಪರ ನಿಂತು ಇಡಿ ವಿರುದ್ಧ ಗುಡುಗಿದ ವಿಜಯ್​ ಮಲ್ಯ! Vijay Mallya  
ದೇಶ

ಕಟ್ಟುಕತೆ ಹೆಣೆಯುವಲ್ಲಿ ನಿಪುಣರು... ಸಚಿವ ಸತೀಶ್ ಜಾರಕಿಹೊಳಿ ಪರ ನಿಂತು ಇಡಿ ವಿರುದ್ಧ ಗುಡುಗಿದ ವಿಜಯ್​ ಮಲ್ಯ! Vijay Mallya

ಪ್ರಮುಖ ಮುಖ್ಯಾಂಶಗಳು

  • ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ಖಂಡಿಸಿದ ವಿಜಯ್ ಮಲ್ಯ
  • ಚಾರ್ಜ್‌ಶೀಟ್ ಇಲ್ಲದೆ ಸಾರ್ವಜನಿಕವಾಗಿ ಚಾರಿತ್ರ್ಯ ವಧೆ ಮಾಡುತ್ತಿದೆ ಎಂದ ಮದ್ಯದ ದೊರೆ
  • ಇಡಿ ಸಂಸ್ಥೆಯ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ ಪರಾರಿಯಾಗಿರುವ ವಿಜಯ್ ಮಲ್ಯ
  • ಕಾಂಗೋದಲ್ಲಿ ಅಕ್ರಮ ಹಣ ಹೂಡಿಕೆ ಆರೋಪದ ಹಿನ್ನೆಲೆಯಲ್ಲಿ ಜಾರಕಿಹೊಳಿ ನಿವಾಸಗಳ ಮೇಲೆ ಇಡಿ ದಾಳಿ
ಬೆಂಗಳೂರು: ಬೆಳಗಾವಿ ಮೂಲದ ಪ್ರಭಾವಿ ರಾಜಕಾರಣಿ ಹಾಗೂ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿರುವ ದಾಳಿಯ ವಿಚಾರವು ಇದೀಗ ರಾಷ್ಟ್ರ ಮಟ್ಟದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಹಣಕಾಸು ವಂಚನೆ ಪ್ರಕರಣದಲ್ಲಿ ದೇಶದಿಂದ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ( Vijay Mallya ), ಸತೀಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದ್ದು, ಇಡಿ ಸಂಸ್ಥೆಯ ಕಾರ್ಯಾಚರಣೆ ಹಾಗೂ ಅದರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿ ಅಚ್ಚರಿ ಮೂಡಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಸರಣಿ ಟ್ವೀಟ್​ಗಳನ್ನು ಮಾಡಿರುವ ವಿಜಯ್​ ಮಲ್ಯ, ಯಾವುದೇ ಅಧಿಕೃತ ಚಾರ್ಜ್‌ಶೀಟ್ ಸಲ್ಲಿಕೆಯಾಗುವ ಮುನ್ನ ಅಥವಾ ವಿಚಾರಣೆ ಪೂರ್ಣಗೊಳ್ಳುವ ಮೊದಲೇ ತನಿಖಾ ಸಂಸ್ಥೆಯು ತರಾತುರಿಯಲ್ಲಿ ಮಾಹಿತಿಗಳನ್ನು ಸಾರ್ವಜನಿಕಗೊಳಿಸುವುದನ್ನು ಕಟುವಾಗಿ ಪ್ರಶ್ನಿಸಿದ್ದಾರೆ. ವಿಶೇಷವಾಗಿ ಇಡಿ ಸಂಸ್ಥೆಯು ದಾಳಿಯ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ, ಬಳಿಕ ಅದನ್ನು 'ಎಕ್ಸ್' (X) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.
ನ್ಯಾಯಯುತ ವಿಚಾರಣೆಯಿಲ್ಲದೆ ಸತೀಶ್ ಜಾರಕಿಹೊಳಿ ಅವರ ವ್ಯವಹಾರಗಳು ಮತ್ತು ಹೂಡಿಕೆಗಳ ಬಗ್ಗೆ ಸಾರ್ವಜನಿಕವಾಗಿ ಅಪಪ್ರಚಾರ ಮಾಡುವ 'ಚಾರಿತ್ರ್ಯ ವಧೆ'ಗೆ ಇಡಿ ಮಾಧ್ಯಮ ಪ್ರಕಟಣೆ ಸಮಾನವಾಗಿದೆ ಎಂದು ಮಲ್ಯ ಕಿಡಿಕಾರಿದ್ದಾರೆ.
ಇಡಿಯ ಅಧಿಕೃತ ಪ್ರಕಟಣೆಯನ್ನು ತಮ್ಮ ವೈಯಕ್ತಿಕ ಎಕ್ಸ್ ಖಾತೆಯಿಂದ ಹಂಚಿಕೊಂಡಿರುವ ವಿಜಯ್ ಮಲ್ಯ, ಇಂಡಿಯನ್ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ಕೇವ ಮಾಧ್ಯಮ ಪ್ರಕಟಣೆಯಲ್ಲಿ ಬೀಗುತ್ತಿದೆ. ಯಾವುದೇ ಚಾರ್ಜ್‌ಶೀಟ್ ಇಲ್ಲ, ವಿಚಾರಣೆಯಿಲ್ಲ, ಕೇವಲ ಸಾರ್ವಜನಿಕವಾಗಿ ಚಾರಿತ್ರ್ಯ ವಧೆ ಮಾಡಲಾಗುತ್ತಿದೆ. ಜಗತ್ತಿನ ಬೇರೆ ಯಾವ ದೇಶದಲ್ಲೂ ಇದು ಸಂಭವಿಸುವುದಿಲ್ಲ. ದಯವಿಟ್ಟು ನೀವೇ ಯೋಚಿಸಿ ಎಂದು ವಿಜಯ್​ ಮಲ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ನ್ಯಾಯಯುತ ವಿಚಾರಣೆಯಿಲ್ಲದೆ ಜಗತ್ತಿನ ಯಾವ ದೇಶದ ತನಿಖಾ ಸಂಸ್ಥೆಯು ಈ ರೀತಿ ಬೀಗುತ್ತದೆಯೇ? ಎಂದು ಪ್ರಶ್ನಿಸುವ ಮೂಲಕ ಸಂಸ್ಥೆಯ ಕ್ರಮವನ್ನು ಬಲವಾಗಿ ಟೀಕಿಸಿದ್ದಾರೆ.
ಅಂದಹಾಗೆ, ವಿಜಯ್​ ಮಲ್ಯ ಕೂಡ ಭಾರತೀಯ ತನಿಖಾ ಸಂಸ್ಥೆಗಳ ತನಿಖೆಗೆ ಗುರಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಸಿಬಿಐ (CBI) ಮತ್ತು ಇಡಿ ತಮ್ಮ ಮೇಲೆ ಹಾಗೂ ಇತರರ ಮೇಲೆ ಹೊರಿಸಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಕಲ್ಪಿತ ಎಂದು ವಿಜಯ್​ ಮಲ್ಯ ಬಲವಾಗಿ ವಾದಿಸಿದ್ದಾರೆ. ಸಿಬಿಐ ಮತ್ತು ಇಡಿ ಅಧಿಕಾರಿಗಳು ಕಟ್ಟುಕತೆಗಳನ್ನು ಹೆಣೆಯುವಲ್ಲಿ ನುರಿತವರು ಎಂದು ಆರೋಪಿಸಿರುವ ಮದ್ಯದ ದೊರೆ, ಮುಂಬರುವ ದಿನಗಳಲ್ಲಿ ತನಿಖಾ ಸಂಸ್ಥೆಗಳ ಎಲ್ಲಾ ಸುಳ್ಳುಗಳನ್ನು ನಿಧಾನವಾಗಿ ಬಯಲು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ತಾವು ಸತ್ಯಕ್ಕಾಗಿ ದೃಢವಾಗಿ ನಿಂತಿದ್ದು, ಸುಳ್ಳಿನ ಮುಂದೆ ಎಂದಿಗೂ ಶರಣಾಗುವುದಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಮೇಲಿನ ಕಾನೂನು ಹೋರಾಟದ ಅನುಭವವನ್ನು ಹಂಚಿಕೊಂಡಿರುವ ಮಲ್ಯ, ತನಿಖಾ ಸಂಸ್ಥೆಗಳ ದಬ್ಬಾಳಿಕೆಯಿಂದ ಅನ್ಯಾಯವಾಗಿ ಗುರಿಯಾಗಿರುವ ಇತರ ಎಲ್ಲಾ ಸಂತ್ರಸ್ತರ ಬಗ್ಗೆ ತಮಗೆ ಮರುಕವಿದೆ ಎಂದು ತಿಳಿಸಿದ್ದಾರೆ. ತನಿಖಾ ಸಂಸ್ಥೆಗಳು ಈ ರೀತಿ ನಡೆದುಕೊಳ್ಳುವ ಬಗ್ಗೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯ ವಿಚಾರಕ್ಕೆ ವಿಜಯ್ ಮಲ್ಯ ಬೆಂಬಲ ವ್ಯಕ್ತಪಡಿಸಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜಾರಕಿಹೊಳಿ ಇಡಿ ದಾಳಿ ಹಿನ್ನೆಲೆ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವುದು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯಲ್ಲಿ ದೃಢಪಟ್ಟಿದೆ. ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆಯಲ್ಲಿ ಅಕ್ರಮವಾಗಿ ನಗದು ರೂಪದಲ್ಲಿ ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಿರುವುದು ಬಹಿರಂಗವಾಗಿದೆ. ಅಲ್ಲದೆ ಬಹುವಿದೇಶಿ ಕಂಪನಿಗಳಲ್ಲಿ ಪಾಲು ಹೊಂದಿರುವುದು ಸಾಬೀತಾಗಿರುವ ಬಹುತೇಕ ಹಿನ್ನೆಲೆಯಲ್ಲಿ ಇ.ಡಿ ಉರುಳು ಸುತ್ತಿಕೊಳ್ಳುವುದು ಗ್ಯಾರಂಟಿಯಾಗಿದೆ.
ಸತೀಶ್ ಜಾರಕಿಹೊಳಿ, ಅವರ ಆಪ್ತರು, ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ ಸೇರಿ 21 ಸ್ಥಳಗಳ ಮೇಲೆ ಇ.ಡಿ ನಡೆಸಿದ ದಾಳಿ ವೇಳೆ 3.30 ಕೋಟಿ ನಗದು, 15 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಅನ್ವಯ ನಡೆದ ಕಾರ್ಯಾಚರಣೆಯಲ್ಲಿ ಜಾರಕಿಹೊಳಿ ಕುಟುಂಬದ ಅಘೋಷಿತ ವಿದೇಶಿ ಹೂಡಿಕೆಗಳು, ಗಡಿ ದಾಟಿದ ವ್ಯವಹಾರ ಸಂಪರ್ಕಗಳು ಹಾಗೂ ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಡಿ ಅಧಿಕೃತವಾಗಿ ಮಾಹಿತಿ ನೀಡಿದೆ. ಚಿಕ್ಕೋಡಿ ಸಂಸದೆ, ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ, ಸಹೋದರಿ ಮಹಾದೇವಿ ಹಾಗೂ ಅವರ ಪತಿ, ಸಚಿವರ ಭಾವ ವೈ.ಡಿ. ಮಂಜುನಾಥ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಸೆ.9 ಮತ್ತು 10ರಂದು ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಇದರ ಜತೆ ಸಚಿವರ ಆಪ್ತ ಸಹಾಯಕರಾದಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠಲ್ ಹಾಗೂ ಡಾ. ಗಿರೀಶ್ ಸೋನ ವಾಲ್ಕ‌ರ್ ಸೇರಿ ಹಲವು ಆಪ್ತರಿಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​).