Vijay govt bans smartphones at 52 TN temples, to charge Rs 5 for device deposit
- ತಮಿಳುನಾಡಿನ 52 ದೇವಾಲಯಗಳಲ್ಲಿ ಫೋಟೋ, ವಿಡಿಯೋ, ರೀಲ್ಸ್‌ಗೆ ಬ್ರೇಕ್
- 52 ದೇವಾಲಯಗಳಿಗೆ ಸ್ಮಾರ್ಟ್ಫೋನ್ ಕೊಂಡೊಯ್ಯದಂತೆ ಹೊಸ ರೂಲ್ಸ್ ಜಾರಿ.
- ಮೊಬೈಲ್ ಕೊಂಡೊಯ್ದರೆ ಸಂಬಂಧಿತ ಕೌಂಟರ್ನಲ್ಲಿ ಕೊಟ್ಟು 5ರೂ. ಪಾವತಿ ಮಾಡುವ ರೂಲ್ಸ್ ಜಾರಿ.
ಚೆನ್ನೈ: ತಮಿಳುನಾಡಿನ ಪ್ರಮುಖ ದೇವಸ್ಥಾನಗಳ ಒಳಗೆ ದೇವರ ಫೋಟೋ ಕ್ಲಿಕ್ಕಿಸುವಂತಿಲ್ಲ, ವಿಡಿಯೋ ರೆಕಾರ್ಡ್ ಮಾಡುವಂತಿಲ್ಲ, ರೀಲ್ಸ್ ಮಾಡುವಂತಿಲ್ಲ ಎನ್ನುವ ಮಾರ್ಗಸೂಚಿಯಿದ್ದರೂ ಸಹ ಯುವಜನರು ನಿಯಮ ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆ, ಸಿಎಂ ಸಿ ಜೋಸೆಫ್ ವಿಜಯ್ ಸರ್ಕಾರವು ಕಟ್ಟುನಿಟ್ಟಿನ ಕ್ರಮವೊಂದನ್ನು ಜಾರಿ ಮಾಡಿದೆ.
ಹೌದು, ತಮಿಳುನಾಡಿನ 52 ಪ್ರಮುಖ ದೇವಾಲಯಗಳ ಒಳಗೆ ಭಕ್ತಾದಿಗಳು, ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯುವುದು ಮತ್ತು ಬಳಸುವುದನ್ನು ಇಂದಿನಿಂದ(ಸೆ.2) ನಿಷೇಧಿಸಲಾಗಿದೆ. ಅಲ್ಲದೇ ಫೋನ್‌ಗಳನ್ನು ಕೊಂಡೊಯ್ದರೆ 5ರೂ. ಪಾವತಿ ಮಾಡಿ, ಸಂಬಂಧಪಟ್ಟ ಕೌಂಟರ್‌ಗಳಲ್ಲಿ ಕೊಡಬಹುದಾಗಿದೆ. ಇನ್ನು ಕ್ಯಾಮೆರಾ ಇಲ್ಲದ ಮೊಬೈಲ್ ಫೋನ್‌ಗಳಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ ಇರಲಿದೆ ಎಂದು ವಿಜಯ್ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಸಚಿವ ರಮೇಶ್ ಹೇಳಿದ್ದೇನು?
ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ರಮೇಶ್ ಈ ನಿರ್ಬಂಧದ ಬಗ್ಗೆ ಮಾಹಿತಿ ನೀಡಿದ್ದು, ದೇವಸ್ಥಾನದಲ್ಲಿ ಫೋನ್ ನಿಷೇಧ ಕ್ರಮವು ಮದುರೈ ಪೀಠದ ಮದ್ರಾಸ್ ಹೈಕೋರ್ಟ್‌ನ ಡಿಸೆಂಬರ್ 2, 2022 ರ ಆದೇಶಕ್ಕೆ ಅನುಗುಣವಾಗಿದೆ. ಮಾರ್ಗಸೂಚಿಯಿದ್ದರೂ ಸಹ ಯುವಕರು ದೇವಸ್ಥಾನದ ಒಳಗೆ ಫೋಟೋ ಕ್ಲಿಕ್ಕಿಸುವುದು, ರೀಲ್ಸ್ ಮಾಡುವುದು, ವಿಡಿಯೋ ರೆಕಾರ್ಡ್ ಮಾಡುವ ಬಗ್ಗೆ ಇತ್ತೀಚೆಗೆ ಹೆಚ್ಚು ಕಳವಳ ವ್ಯಕ್ತವಾಗಿತ್ತು. ಆ ಹಿನ್ನೆಲೆ ಮೊಬೈಲ್ ನಿಷೇಧಿಸಲಾಗಿದೆ. ಜೊತೆಗೆ ಕ್ಯಾಮೆರಾ ಇಲ್ಲದ ಮೊಬೈಲ್ ಫೋನ್‌ಗಳನ್ನು ದೇವಾಲಯಗಳ ಒಳಗೆ ಅನುಮತಿಸಲಾಗುವುದು ಎಂದು ರಮೇಶ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹೊಸ ವ್ಯವಸ್ಥೆಯಡಿಯಲ್ಲಿ, ಸ್ಮಾರ್ಟ್‌ಫೋನ್‌ಗಳನ್ನು ಕೊಂಡೊಯ್ಯುವ ಭಕ್ತರು ದೇವಾಲಯದ ಪ್ರವೇಶದ್ವಾರಗಳಲ್ಲಿ ಸ್ಥಾಪಿಸಲಾದ ಮೀಸಲು ಕೌಂಟರ್‌ಗಳಲ್ಲಿ 5ರೂ.ಕೊಟ್ಟು ಫೋನ್ ಸುರಕ್ಷಿತವಾಗಿಡಬೇಕು. ಮೊಬೈಲ್ ಕೊಟ್ಟವರಿಗೆ ರಶೀದಿ/ ಟೋಕನ್ ನೀಡಲಾಗುತ್ತದೆ, ಫೋನ್‌ಗಳನ್ನು ವಾಪಸ್ ಪಡೆಯುವಾಗ ಅವರು ಇದನ್ನು ಇಟ್ಟುಕೊಳ್ಳಬೇಕು. ಈಗಾಗಲೇ ಕಾಂಚಿಪುರದ ಪ್ರಸಿದ್ಧ ದೇವರಾಜಸ್ವಾಮಿ-ಅತಿವರದರ್ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಇಬ್ಬರನ್ನು ನೇಮಕ
ಭಕ್ತರ ಫೋನ್ ಸಂಗ್ರಹಿಸಲು ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳು ಮತ್ತು ಇಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ. ಭಕ್ತರ ಫೋಟೋ, ಮೊಬೈಲ್ ಫೋನ್ ಮಾದರಿ ಮತ್ತು ಫೋನ್ ಸಂಖ್ಯೆಯನ್ನು ನೋಂದಾಯಿಸಲಾಗುತ್ತದೆ. ಸ್ವೀಕೃತಿ ರಶೀದಿಯನ್ನು ತೋರಿಸಿ ವಿವರಗಳನ್ನು ಪರಿಶೀಲಿಸಿದ ನಂತರ ಫೋನ್ ಅನ್ನು ಹಿಂದಿರುಗಿಸಲಾಗುತ್ತದೆ ಎಂದು ಸಚಿವ ರಮೇಶ್ ಹೇಳಿದರು.
ಮೊಬೈಲ್ ಸುರಕ್ಷತೆ ಬಗ್ಗೆ ಹೆಚ್ಚಿದ ಕಳವಳ
ಹೊಸ ನಿಯಮ ಜಾರಿಯಾದರೂ ಸಹ ಭಕ್ತರಿಗೆ ಮತ್ತು ದೇವಾಲಯದ ಸಿಬ್ಬಂದಿಗೆ ಫೋನ್ ಸುರಕ್ಷತೆ ಬಗ್ಗೆ ಸದ್ಯ ಕಳವಳ ಕಾಡುತ್ತಿದೆ. ದುಬಾರಿ ಫೋನ್ ಬಳಕೆ ಮಾಡುವವರಿಗೆ ದೇವರ ದರ್ಶನ ಪಡೆದು ವಾಪಸ್ ಫೋನ್ ಪಡೆದುಕೊಳ್ಳುವವರೆಗೂ ಸಮಾಧಾನವಿರೋದಿಲ್ಲ, ದೇವರ ದರ್ಶನವೂ ಸರಿಯಾಗಿ ಪಡೆದುಕೊಳ್ಳೋದಿಲ್ಲ. ನನ್ನ ಫೋನ್ ಕಳುವಾಗಿದ್ಯಾ ಎನ್ನುವ ಗೊಂದಲ ಇರುತ್ತದೆ ಎಂದು ಇಲ್ಲಿನ ದೇವಾಲಯದ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
5ರೂ. ಹೊರೆಯಾಗ್ಬೋದು!
ಇನ್ನೂ ಕೆಲವರು ಸ್ಥಳೀಯ ನಿವಾಸಿಗಳು ನಿತ್ಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ.. ಪ್ರತಿನಿತ್ಯ 5ರೂಪಾಯಿ ಪಾವತಿ ಮಾಡೋದು ಹೊರೆಯಾಗಬಹುದು ಎನ್ನುವ ಕಳವಳವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವರು ಮೊಬೈಲ್ ಫೋಟೋ, ವಿಡಿಯೋ ರೆಕಾರ್ಡ್ಗೆ ಮಾತ್ರವಲ್ಲ. ದೈನಂದಿನ ಮಾತುಕತೆ ಹಾಗೂ ತುರ್ತು ಸಂದರ್ಭದಲ್ಲಿ ಬೇಕಾಗುವ ಸಾಧನ..ದೇವಸ್ಥಾನದಲ್ಲಿ ಕ್ಯೂ ಇದ್ದಾಗ ಅಥವಾ ಮೊಬೈಲ್ ಅನ್ನು ಕೌಂಟರ್ನಲ್ಲಿ ಕೊಡುವಾಗ, ಪಡೆದುಕೊಳ್ಳುವಾಗ ಕ್ಯೂ ಇದ್ದರೆ ಜನರಿಗೆ ಕಷ್ಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).