ಎಂ.ಕೆ.ಸ್ಟಾಲಿನ್ ಮತ್ತು ಸಿಎಂ ವಿಜಯ್
ಚೆನ್ನೈ: ತಮಿಳುನಾಡಿನಲ್ಲಿ ನಟ ಸಿ.ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಯಾವುದೇ ಸಮಯದಲ್ಲೂ ಬೀಳಬಹುದು ಎಂದು ಭವಿಷ್ಯ ನುಡಿದಿರುವ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್(M K Stalin), ಮರು ಚುನಾವಣೆಗೆ ಸಿದ್ದರಾಗಿರಿ ಎಂದು ತಮ್ಮ ಡಿಎಂಕೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
106 ಸ್ಥಾನಗಳ ಜೊತೆಗೆ ಕಾಂಗ್ರೆಸ್‌ನ ಐದು ಸ್ಥಾನಗಳನ್ನು ಹೊಂದಿರುವ ಟಿವಿಕೆ, ಡಿಎಂಕೆಯ ಮಿತ್ರ ಪಕ್ಷಗಳಾದ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲದೊಂದಿಗೆ ಬಹುಮತವನ್ನು ಹೊಂದಿದೆ. ಮತ್ತು ಕಳೆದ ವಾರ ನಡೆದ ವಿಧಾನಸಭೆಯಲ್ಲಿನ ವಿಶ್ವಾಸಮತಯಾಚನೆಯಲ್ಲಿ 25 ಎಐಎಡಿಎಂಕೆ ಶಾಸಕರೂ ಸಹ ಬೆಂಬಲ ನೀಡಿದ್ದಾರೆ.
ಮಂಗಳವಾರ(ಮೇ 19) ಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿರುವ ಎಂ.ಕೆ.ಸ್ಟಾಲಿನ್, ಪ್ರಸ್ತುತ ಇರುವ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಮತ್ತು ಪಕ್ಷವು ಯಾವುದೇ ಸಮಯದಲ್ಲಿ ಚುನಾವಣೆಗೆ ಸಿದ್ಧವಾಗಿರಬೇಕು. ಒಂದು ವೇಳೆ ಮರು ಚುನಾವಣೆ ನಡೆದರೆ ನಮ್ಮ ಪಕ್ಷವು ಮತ್ತೆ ಅಧಿಕಾರಕ್ಕೇರಲಿದೆ ಎಂದು ತಿಳಿಸಿದ್ದಾರೆ.
ಸೋಲು ತಾತ್ಕಾಲಿಕ. ಈಗಿನ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು. ಸಿದ್ಧರಾಗಿರಿ. 2029ರ ಲೋಕಸಭಾ ಚುನಾವಣೆಯ ಜೊತೆಗೆ ಮತ್ತೆ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ನಾವು ಮತ್ತೆ ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.
ಸೋಮವಾರ ನಡೆದ ಮದುವೆ ಸಮಾರಂಭದಲ್ಲಿ ಮಾತನಾಡಿದ್ದ ಅವರು, ತಮಿಳುನಾಡಿನಲ್ಲಿ ಸೂರ್ಯ (ಡಿಎಂಕೆ ಚಿಹ್ನೆ) ಎಂದಿಗೂ ಮುಳುಗುವುದಿಲ್ಲ. ಚುನಾವಣೆಯಲ್ಲಿನ ವೈಫಲ್ಯದ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಸ್ವೀಕರಿಸುತ್ತೇನೆ. ಮಕ್ಕಳು ಮತ್ತು ಇನ್ಸ್ಟಾಗ್ರಾಂ ಪ್ರಭಾವದಿಂದ ಬೂತ್ ಏಜೆಂಟ್ ಇಲ್ಲದೆಯೂ ವಿರೋಧಿ ಪಕ್ಷ ಅಧಿಕಾರಕ್ಕೇರಿತು. ಒಂದು ಕಾಲದಲ್ಲಿ ಚಹಾ ಅಂಗಡಿಗಳಲ್ಲಿ ಮಾತನಾಡುತ್ತಿದ್ದ ರಾಜಕೀಯವನ್ನು ಈಗ ನಾವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಮಾತನಾಡಬೇಕು ಎಂದು ಹೇಳಿದ್ದಾರೆ.
ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುತ್ತಿರುವ ವಿಸಿಕೆ, ಸಿಪಿಐ, ಸಿಪಿಎಂ ಮತ್ತು ಐಯುಎಂಎಲ್ ಪಕ್ಷಗಳು ಪಕ್ಷದಿಂದ ಹೊರಗುಳಿದರೆ ಅಥವಾ ತಮಿಳುನಾಡು ಸ್ಪೀಕರ್ ಅಥವಾ ನ್ಯಾಯಾಲಯಗಳು ಬಂಡಾಯ ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದರೆ ರಾಜಕೀಯ ಅಸ್ಥಿರತೆ ಉಂಟಾಗಬಹುದು ಎಂದು ಡಿಎಂಕೆ ಆಶಿಸಿದೆ (ಏಜೆನ್ಸೀಸ್).