ಟಿವಿಕೆ ಪಕ್ಷ, ದಳಪತಿ ವಿಜಯ್
- ತಮಿಳುನಾಡಿನಲ್ಲಿ ಚುನಾವಣಾ ರಾಜಕೀಯ ಭರಾಟೆ ಬಲು ಜೋರು
- ತಮ್ಮದೇ ಕಾರು ಚಾಲಕನ ಪುತ್ರನಿಗೆ ಶಾಸಕನ ಟಿಕೆಟ್
- ಚುನಾವಣೆ ಗೆಲ್ಲಲು ಪಣತೊಟ್ಟಿರುವ ವಿಜಯ್ ಮಾಸ್ಟರ್ಪ್ಲ್ಯಾನ್ ಹಿಂದಿದೆ 2
ಚೆನ್ನೈ: ಪ್ರಸ್ತುತ, ತಮಿಳುನಾಡಿನಲ್ಲಿ ಚುನಾವಣಾ ರಾಜಕೀಯ ಭರಾಟೆ ಬಲು ಜೋರಾಗಿದೆ. ಇಂದು ಟಿವಿಕೆ ಮುಖ್ಯಸ್ಥ, ನಟ ವಿಜಯ್ 2026ರ ಚುನಾವಣೆಗೆ ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದ್ದು, ಒಟ್ಟು 234 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ವಿಶೇಷ ಎಂದರೆ, ಈ ಚುನಾವಣೆಯಲ್ಲಿ 'ಜನ ನಾಯಗನ್' ಎರಡು ಕಡೆಯಿಂದ ಸ್ಪರ್ಧಿಸುತ್ತಿದ್ದಾರೆ.
ತಮಿಳುನಾಡಿನ ಪೆರಂಬೂರು (ಚೆನ್ನೈ) ಮತ್ತು ತಿರುಚಿ (ಪೂರ್ವ) ಕ್ಷೇತ್ರಗಳಿಂದ ವಿಜಯ್ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಇದಲ್ಲದೆ, ವಿಜಯ್ ಟಿವಿಕೆ ಪಕ್ಷದ ಪರವಾಗಿ ತಮ್ಮ ಕಾರು ಚಾಲಕನ ಪುತ್ರನಿಗೆ ಶಾಸಕ ಟಿಕೆಟ್ ನೀಡಿರುವುದು ಸದ್ಯ ಹಲವರ ಅಚ್ಚರಿಗೆ ಕಾರಣವಾಗಿದೆ. ಈ ಬಾರಿಯ ಎಲೆಕ್ಷನ್ ಟಿವಿಕೆ ಮತ್ತು ಡಿಎಂಕೆ ನಡುವೆ ಎಂದು ವಿಜಯ್ ಖಡಕ್ ಆಗಿ ಪೈಪೋಟಿಯ ಸಂದೇಶವನ್ನು ಸಾರಿದ್ದಾರೆ.
ವಿಜಯ್ ಭರವಸೆ
ಮತ್ತೊಂದೆಡೆ, ಟಿವಿಕೆ ಗೆದ್ದರೆ ರಾಜ್ಯವನ್ನು ಮಾದಕ ವಸ್ತು ಮುಕ್ತಗೊಳಿಸುವುದಾಗಿ ವಿಜಯ್ ತಮಿಳುನಾಡಿನ ಜನತೆಗೆ ಭರವಸೆ ನೀಡಿದ್ದಾರೆ. ನಿರುದ್ಯೋಗಿಗಳಿಗೆ 4,000 ರೂ. ಭತ್ಯೆ ಮತ್ತು ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಯುವಕರಿಗೆ ಉದ್ಯೋಗ ಧನ ಸಹಾಯವಾಗಿ 20 ಲಕ್ಷ ರೂ. ಕೊಡಲಾಗುವುದು. ಇದರೊಂದಿಗೆ, ತಮಿಳುನಾಡಿನಲ್ಲಿ ಸ್ವಯಂಸೇವಕ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ಒತ್ತಿ ಹೇಳಿದರು.
ಸಾಮಾನ್ಯರಿಗೆ ಟಿಕೆಟ್
ಅತ್ಯಂತ ಸಾಮಾನ್ಯ ಜನರಿಗೆ ಶಾಸಕ ಟಿಕೆಟ್ ನೀಡಿರುವ ವಿಜಯ್, ಬಹು ವರ್ಷಗಳಿಂದ ತಮಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿರುವ ರಾಜೇಂದ್ರನ್ ಅವರ ಪುತ್ರ ಶಬರಿನಾಥನ್ ಅವರಿಗೆ ಟಿಕೆಟ್ ಘೋಷಿಸಿದ್ದಾರೆ. ಈ ಕ್ಷಣವನ್ನು ನೆನೆದ ತಂದೆ ಮತ್ತು ಮಗ ಇಬ್ಬರೂ ವೇದಿಕೆಯಲ್ಲಿ ಕಣ್ಣೀರಾಕಿದರು. ತಕ್ಷಣ ಇಬ್ಬರನ್ನೂ ಸಂತೈಸಿದ ವಿಜಯ್, ಜನರಿಗೆ ತಮ್ಮ ಪಕ್ಷದಿಂದ ಭರವಸೆಗಳನ್ನು ನೀಡಿದರು.
2 ಕ್ಷೇತ್ರ, ದಳಪತಿ ಮಾಸ್ಟರ್ಪ್ಲ್ಯಾನ್
ತಮಿಳುನಾಡಿನ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ವಿಜಯ್, ಬುದ್ಧಿವಂತಿಕೆಯಿಂದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಉತ್ತರ ಮತ್ತು ಮಧ್ಯ ತಮಿಳುನಾಡಿನಾದ್ಯಂತ ಬಲವಾದ ನೆಲೆಯನ್ನು ಸ್ಥಾಪಿಸಲು ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರಗಳಿಂದ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಎದುರಾಳಿ ಪಕ್ಷಗಳಿಗೆ ಖಡಕ್ ಸಂದೇಶ ನೀಡಿರುವ ವಿಜಯ್, ಇದು ನಮ್ಮ-ನಿಮ್ಮ ನಡುವಿನ ನೇರ ಫೈಟ್ ಎಂದಿದ್ದಾರೆ,(ಏಜೆನ್ಸೀಸ್).