Cuddalore Rally | ನಟ ವಿಜಯ್ 
ದೇಶ

ಏಕಾಏಕಿ ರದ್ದಾಯ್ತು ದಳಪತಿ ವಿಜಯ್ ಸಮಾವೇಶ...ಕಡಲೂರಲ್ಲಿ 'ಶಿಳ್ಳೆ' ಸದ್ದು ಮಾಡದಿರಲು ಇದೇ ಕಾರಣವಂತೆ! | Cuddalore Rally

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ನಟ ವಿಜಯ್ ಶನಿವಾರ (ಏ.11) ಕಡಲೂರು ಜಿಲ್ಲೆಯಲ್ಲಿ ನಡೆಸಬೇಕಿದ್ದ ತಮ್ಮ ಬೃಹತ್ ಪ್ರಚಾರ ಸಭೆಯನ್ನು ಸುರಕ್ಷತಾ ಕಾರಣಗಳನ್ನು ನೀಡಿ ಹಠಾತ್ತಾಗಿ ರದ್ದುಗೊಳಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಜಿಲ್ಲೆಗಳಲ್ಲಿ ವಿಜಯ್ ಇತ್ತೀಚೆಗೆ ನಡೆಸಿದ ಪ್ರಚಾರದ ವೇಳೆ ವಾಹನಗಳಿಗೆ ಸಂಬಂಧಿಸಿದ ಸಣ್ಣಪುಟ್ಟ ಅಹಿತಕರ ಘಟನೆಗಳು ಸಂಭವಿಸಿದ್ದವು. ಕಡಲೂರು ಜಿಲ್ಲೆಯು ಚೆನ್ನೈನಿಂದ ಸುಮಾರು 175 ಕಿಲೋಮೀಟರ್ ದೂರದಲ್ಲಿದ್ದು, ದೀರ್ಘ ರಸ್ತೆ ಪ್ರಯಾಣವು ಮತ್ತಷ್ಟು ಅಪಾಯಗಳನ್ನು ತಂದೊಡ್ಡಬಹುದು ಎಂದು ಪ್ರಚಾರ ತಂಡವು ಅಂದಾಜಿಸಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಪಾಯಕ್ಕೆ ಅವಕಾಶ ನೀಡಬಾರದೆಂಬ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಚಾರವನ್ನು ರದ್ದುಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವೇಳಾಪಟ್ಟಿ ಬದಲಾವಣೆ ಮತ್ತು ಪೊಲೀಸ್ ಅನುಮತಿ

ವಾಸ್ತವವಾಗಿ ಈ ಸಭೆಯನ್ನು ಮೊದಲು ಏಪ್ರಿಲ್ 9 ರಂದೇ ನಿಗದಿಪಡಿಸಲಾಗಿತ್ತು. ಆದರೆ ಪುದುಚೇರಿ ವಿಧಾನಸಭಾ ಚುನಾವಣೆಯ ಕಾರಣದಿಂದ ಅದನ್ನು ಶನಿವಾರಕ್ಕೆ ಮುಂದೂಡಲಾಗಿತ್ತು. ಕಡಲೂರು, ವಡಲೂರು, ಸೇಥಿಯಾಥೋಪೆ ಮತ್ತು ತಿಟ್ಟಕುಡಿ ಎಂಬ ನಾಲ್ಕು ಪ್ರದೇಶಗಳಲ್ಲಿ ಪ್ರಚಾರ ನಡೆಸಲು ಪೊಲೀಸರು 21 ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿದ್ದರು. ರಾತ್ರಿ 9 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕೆಂಬ ನಿಯಮವಿತ್ತು. ಆದರೆ, ಎಲ್ಲಾ ಸಿದ್ಧತೆಗಳ ನಡುವೆಯೂ ಕೊನೆಯ ಕ್ಷಣದಲ್ಲಿ ರದ್ದತಿ ನಿರ್ಧಾರ ಹೊರಬಿದ್ದಿದೆ.
ಟಿವಿಕೆ ಪಕ್ಷದ ಮೂಲಕ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿರುವ ವಿಜಯ್, ಶಿಳ್ಳೆ ಚಿಹ್ನೆಗಾಗಿ ರಾಜ್ಯಾದ್ಯಂತ ಬಿರುಗಾಳಿ ಪ್ರಚಾರ ನಡೆಸುತ್ತಿದ್ದಾರೆ. ಚೆನ್ನೈನ ಪೆರಂಬೂರಿನಲ್ಲಿ ಅಭಿಯಾನ ಆರಂಭಿಸಿದ್ದ ವಿಜಯ್​ ಇದಾದ ಬಳಿಕ ತಿರುಚಿರಾಪಳ್ಳಿ, ತಿರುನಲ್ವೇಲಿ, ತೂತುಕುಡಿ ಮತ್ತು ಕಾರೈಕುಡಿಯಲ್ಲಿ ಬೃಹತ್ ಸಭೆಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಭಾರಿ ಜನಸಮೂಹವನ್ನು ಸೆಳೆದಿದ್ದರು.

ಕಾರ್ಯಕರ್ತರು ಹೇಳಿದ್ದೇನು..?

ವಿಜಯ್​ ಪ್ರಚಾರ ಸಭೆಯನ್ನು ಹಠಾತ್ ರದ್ದುಗೊಳಿಸುವ ನಿರ್ಧಾರವನ್ನು ಕೆಲವು ರಾಜಕೀಯ ವಿಶ್ಲೇಷಕರು ಟೀಕಿಸಿದ್ದು, ಇತ್ತ ಚುನಾವಣಾ ಗದ್ದಲದ ನಡುವೆ ಕಾರ್ಯಕರ್ತರ ಸುರಕ್ಷತೆಯೇ ಅತ್ಯಂತ ಮುಖ್ಯ ವಿಜಯ್ ಬೆಂಬಲಿಗರು ಸಮರ್ಥಿಸಿಕೊಂಡಿದ್ದಾರೆ. ತಮಿಳುನಾಡಿನ ಸ್ಪರ್ಧಾ ಕಣದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿರುವ ವಿಜಯ್​ರ ಪ್ರತಿ ಹೆಜ್ಜೆಯನ್ನು ಈಗ ಇಡೀ ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ(ಏಜೆನ್ಸೀಸ್​).