ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ದಿವಂಗತ ಹಿರಿಯ ನಾಯಕ ಎಂ. ಕರುಣಾನಿಧಿ ಅವರ ಹೆಸರನ್ನು ಗೌರವಾನ್ವಿತ ಪದಗಳಿಲ್ಲದೆ ನೇರವಾಗಿ ಉಲ್ಲೇಖಿಸಿದ ಘಟನೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಚಿವರೊಬ್ಬರ ಈ ಹೇಳಿಕೆಯಿಂದ ಆಕ್ರೋಶಗೊಂಡ ಪ್ರತಿಪಕ್ಷ ಡಿಎಂಕೆ ನಾಯಕರನ್ನು ಶಾಂತಗೊಳಿಸಲು ಸಿಎಂ ಸಿ. ಜೋಸೆಫ್ ವಿಜಯ್ (
ಅವರು ಸದನದಲ್ಲೇ ತಕ್ಷಣವೇ ಎದ್ದು ನಿಂತು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಸದನದಲ್ಲಿ ನಡೆದಿದ್ದೇನು?
ಆರೋಗ್ಯ ಮತ್ತು ಕಂದಾಯ ಇಲಾಖೆಯ ಅನುದಾನ ಬೇಡಿಕೆ ಮೇಲಿನ ಚರ್ಚೆಯ ಸಮಯದಲ್ಲಿ ಅರಣ್ಯ ಸಚಿವ ಆರ್‌ವಿ ರಂಜಿತ್ ಕುಮಾರ್ ಈ ಹಿಂದೆ ನಡೆದ ಚುನಾವಣೆಗಳ ತಿರುಮಂಗಲಂ ಫಾರ್ಮುಲಾ ಹಾಗೂ ಹಣ ಹಂಚಿಕೆ ಆರೋಪಗಳ ಕುರಿತು ಮಾತನಾಡುತ್ತಿದ್ದರು. ಆದಾಗ್ಯೂ, ತಮ್ಮ ಕಂಚೀಪುರಂ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಗಳಲ್ಲಿ ಪ್ರತಿಯೊಂದು ಮತಕ್ಕೆ 1,500 ರೂಪಾಯಿವರೆಗೆ ಹಣ ಹಂಚಲಾಗಿತ್ತು ಎಂದು ಆರೋಪಿಸಿದ ಸಚಿವರು, ಪ್ರಸ್ತುತ ಸರ್ಕಾರವು ಯಾವುದೇ ಹಣ ಹಂಚದೇ ಅಧಿಕಾರಕ್ಕೆ ಬಂದಿದೆ ಎಂದು ಸಮರ್ಥಿಸಿಕೊಂಡರು.
ಆದರೆ, ಈ ಚುನಾವಣಾ ತಂತ್ರಗಳ ಕುರಿತು ಮಾತನಾಡುತ್ತಿರುವಾಗ, ಸಚಿವ ರಂಜಿತ್ ಕುಮಾರ್ ಅವರು ಮಾಜಿ ಸಿಎಂ ಕರುಣಾನಿಧಿ ಅವರನ್ನು "ಕಲೈಂಜರ್" ಅಥವಾ "ಮಾಜಿ ಮುಖ್ಯಮಂತ್ರಿ" ಎಂದು ಗೌರವವನ್ನು ನೀಡಿದೆ ಕೇವಲ ಕರುಣಾನಿಧಿ ಎಂದು ನೇರವಾಗಿ ಕರೆದರು.
ಡಿಎಂಕೆ ತೀವ್ರ ಆಕ್ರೋಶ ಮತ್ತು ಸಿಎಂ ಮಧ್ಯಪ್ರವೇಶ
ತಮಿಳುನಾಡು ವಿಧಾನಸಭೆಯ ಸುದೀರ್ಘ ಪರಂಪರೆ ಹಾಗೂ ಶಿಷ್ಟಾಚಾರದ ಪ್ರಕಾರ ಹಿರಿಯ ನಾಯಕರನ್ನು ಗೌರವಯುತ ಬಿರುದುಗಳಿಂದ ಕರೆಯುವುದು ಸಾಂಪ್ರದಾಯ. ಆದರೆ, ಸಚಿವರ ಈ ಉಲ್ಲೇಖಕ್ಕೆ ಮಾಜಿ ಸಚಿವ ಕೆ.ಎಸ್.ಆರ್ ರಾಮಚಂದ್ರನ್ ನೇತೃತ್ವದ ಡಿಎಂಕೆ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿ, ಸಭೆಯಲ್ಲಿ ಗದ್ದಲ ಎಬ್ಬಿಸಿದರು.
ಸದನದಲ್ಲಿದ ವಾತಾವರಣ ಕಾವೇರುತ್ತಿದ್ದಂತೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಪ್ರವೇಶಿಸಿದ ಸಿಎಂ ವಿಜಯ್ ಸಚಿವರ ಭಾಷಣವನ್ನು ಮಧ್ಯದಲ್ಲೇ ತಡೆದು, ಹಿರಿಯ ನಾಯಕರನ್ನು ಆ ರೀತಿ ಕರೆಯುವುದು ತಪ್ಪು. ಆದಾಗ್ಯೂ, ಸಚಿವರ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಹೇಳುತ್ತಾ ಸದನದ ಗೊಂದಲಕ್ಕೆ ತೆರೆ ಎಳೆದರು (ಏಜೆನ್ಸೀಸ್).