iPad Missing (ಚಿತ್ರ Instagram) 
ದೇಶ

ವಿಮಾನ ನಿಲ್ದಾಣದಲ್ಲಿ ಐಪ್ಯಾಡ್ ಮಿಸ್ಸಿಂಗ್​..ಸಿಬ್ಬಂದಿ ಮಾಡಿದ ಈ ಕೆಲಸಕ್ಕೆ ದೇಶಾದ್ಯಂತ ಮೆಚ್ಚುಗೆಯ ಸುರಿಮಳೆ! iPad Missing

ಆಂಧ್ರಪ್ರದೇಶ: ವಿಮಾನ ನಿಲ್ದಾಣಗಳಲ್ಲಿ ವಸ್ತುಗಳನ್ನು ಕಳೆದುಕೊಂಡರೆ ಅವುಗಳನ್ನು ಮರಳಿ ಪಡೆಯುವುದು ಒಂದು ದೀರ್ಘ ಪ್ರಕ್ರಿಯೆ ಎಂಬ ನಂಬಿಕೆ ಸಾಮಾನ್ಯ. ಆದರೆ, ತಿರುಪತಿ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯೊಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ( iPad Missing) ದಕ್ಷತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ರಿಮ್ಜಿಮ್ ಎಂಬ ಪ್ರಯಾಣಿಕರೊಬ್ಬರು ತಮ್ಮ ಕಳೆದುಹೋದ ಐಪ್ಯಾಡ್ ಅನ್ನು ಕೇವಲ 10 ನಿಮಿಷಗಳಲ್ಲಿ ಮರಳಿ ಪಡೆಯಲು ಅವರು ಹೇಗೆ ಸಹಾಯ ಮಾಡಿದರು ಎಂಬುದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ರಿಮ್ಜಿಮ್​ ತಮ್ಮ ಕುಟುಂಬದೊಂದಿಗೆ ತಿರುಪತಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಪ್ರಯಾಣದ ಅವಸರದಲ್ಲಿ ತಮ್ಮ ಐಪ್ಯಾಡ್ ಅನ್ನು ವಿಮಾನ ನಿಲ್ದಾಣದ ಆವರಣದಲ್ಲೇ ಮರೆತು ಹೋಗಿದ್ದರು. ಅಲ್ಲಿಂದ ಸುಮಾರು 4 ಕಿಲೋ ಮೀಟರ್​ ದೂರಕ್ಕೆ ಪ್ರಯಾಣ ನಡೆಸಿದ ನಂತರ ತಮ್ಮ ಐಪ್ಯಾಡ್​ ಕಾಣೆಯಾಗಿರುವುದನ್ನು ಅರಿತುಕೊಂಡರು.
ತಕ್ಷಣವೇ ಅವರು ವಿಮಾನ ನಿಲ್ದಾಣಕ್ಕೆ ವಾಪಾಸ್ಸಾಗಿದ್ದು, ಕಳೆದುಹೋದ ಐಪ್ಯಾಡ್​ ಹುಡುಕಾಡಲು ಪ್ರಾರಂಭಿಸಿದರು. ನಂತರ ಅವರು ವಿಮಾನ ನಿಲ್ದಾಣದ ಸಿಐಎಸ್‌ಎಫ್ ಸಿಬ್ಬಂದಿಯನ್ನು ಸಂಪರ್ಕಿಸಿ ಈ ಬಗ್ಗೆ ಔಪಚಾರಿಕ ದೂರು ದಾಖಲಿಸಿದರು.
ದೂರು ದಾಖಲಾದ ನಂತರ ಅಲ್ಲಿನ ಅಧಿಕಾರಿಗಳು ತಮ್ಮ ತ್ವರಿತ ಚಟುವಟಿಕೆಯಿಂದ ಕಳೆದು ಹೋದ ವಸ್ತುವನ್ನು ಹುಡುಕಾಡಲು ಆರಂಭಿಸಿದ್ದು, ಕೆಲವೇ 10 ನಿಮಿಷಗಳಲ್ಲಿ ಐಪ್ಯಾಡ್​ನ್ನು ಮಹಿಳೆಗೆ ಹಸ್ತಾಂತರಿಸಿದ್ದಾರೆ. ಅಧಿಕಾರಿಗಳ ಮಿಂಚಿನ ವೇಗದ ಕಾರ್ಯಾಚರಣೆ ಕಂಡು ರಿಮ್ಜಿಮ್​ ಇಷ್ಟು ಬೇಗ ಕಳೆದುಕೊಂಡ ವಸ್ತುವನ್ನು ವಾಪಸ್ಸು ಪಡೆಯುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅಭಿಪ್ರಾಯ ಸೂಚಿಸಿದ್ದಾರೆ.
ಆದಾಗ್ಯೂ, ರಿಮ್ಜಿಮ್​ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ನಾವು ತಿರುಪತಿ ವಿಮಾನ ನಿಲ್ದಾಣದಲ್ಲಿ ನಮ್ಮ ಐಪ್ಯಾಡ್ ಅನ್ನು ಮರೆತುಬಿಟ್ಟಿದ್ದೇವೆ ಮತ್ತು ಸಿಎಫ್​ಎಸ್​ಸಿ ಸಹಾಯದಿಂದ ಅದನ್ನು ಮರಳಿ ಪಡೆಯಲು ಸಾಧ್ಯವಾಯಿತು. @official_cisf ಗೆ ತುಂಬಾ ಧನ್ಯವಾದಗಳು ಎಂದು ಬರೆದು ಪೋಸ್ಟ್​ ಮಾಡಿದ್ದರು.
ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಅನೇಕರ ಗಮನ ಸೆಳೆದಿದ್ದು, ವಿಮಾನ ನಿಲ್ದಾಣಗಳಂತಹ ಕಾರ್ಯನಿರತ ಸಾರಿಗೆ ಕೇಂದ್ರಗಳಲ್ಲಿ ಕಳೆದುಹೋದ ಮತ್ತು ಕಂಡುಬಂದ ಪ್ರಕರಣಗಳನ್ನುನಿರ್ವಹಿಸುವಲ್ಲಿ ಸಿಐಎಸ್​ಎಫ್​ನ ತ್ವರಿತ ಕ್ರಮ ಮತ್ತು ಸ್ಪಂದಿಸುವಿಕೆಯನ್ನು ಅನೇಕ ಬಳಕೆದಾರರು ಶ್ಲಾಘಿಸಿದ್ದಾರೆ.

ಸಿಐಎಸ್ಎಫ್ ಬಗ್ಗೆ

ಭಾರತದ ಆಂತರಿಕ ಭದ್ರತಾ ವ್ಯವಸ್ಥೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಅತ್ಯಂತ ವಿಶ್ವಾಸಾರ್ಹ ಮತ್ತು ದಕ್ಷ ಪಡೆಯಾಗಿ ಹೊರಹೊಮ್ಮಿದೆ. ಇದು ಕೇವಲ ಕೈಗಾರಿಕೆಗಳಿಗೆ ಸೀಮಿತವಾಗದೆ, ದೇಶದ ಸಂವಹನ ಮತ್ತು ಸಾರಿಗೆಯ ಜೀವನಾಡಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಪ್ರಸ್ತುತ ದೇಶಾದ್ಯಂತ ಇರುವ 60ಕ್ಕೂ ಹೆಚ್ಚು ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಈ ಪಡೆ ಭದ್ರತೆಯನ್ನು ಒದಗಿಸುತ್ತಿದೆ. ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ, ಸಾಮಾನುಗಳ ಕೂಲಂಕಷ ತಪಾಸಣೆ ಮತ್ತು ವಿಮಾನ ನಿಲ್ದಾಣದ ಒಟ್ಟಾರೆ ಸುರಕ್ಷತೆಯನ್ನು ಈ ಪಡೆ ನಿರ್ವಹಿಸುತ್ತದೆ (ಏಜೆನ್ಸೀಸ್​).