ಮೃತ ಸ್ಯಾಮ್ಯುಯೆಲ್ ಡಿ ಬ್ರಗಾಂಕಾ
ಪಣಜಿ: ಗೋವಾದಲ್ಲಿ 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಟ್ಟೋಲ್ಗೆ ಗುರಿಯಾದ ಬಳಿಕ ಖಿನ್ನತೆಗೊಳಗಾಗಿ ಮನೆಯಲ್ಲೇ ಗುಂಡು ಹರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ(Student suicide) ಎಂದು ಶನಿವಾರ(ಜೂ. 06) ವರದಿಯಾಗಿದೆ.
ಮಾಪುಸಾದ ಸ್ಯಾಮ್ಯುಯೆಲ್ ಡಿ ಬ್ರಗಾಂಕಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಎರಡನೇ ವರ್ಷದ ಪದವಿ ಓದುತ್ತಿದ್ದು, ತನ್ನ ತಾಯಿ ಮತ್ತು ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದನು. ಕಳೆದ ಕೆಲವು ದಿನಗಳ ಹಿಂದೆ ಉತ್ತರ ಗೋವಾದ ರಸ್ತೆಬದಿಯಲ್ಲಿ ಸ್ಯಾಮ್ಯುಯೆಲ್ ಕಸ ಎಸೆಯುತ್ತಿರುವುದು ವ್ಯಕ್ತಿಯೊಬ್ಬರ ಫೋನ್ನಲ್ಲಿ ಸೆರೆಯಾಗಿತ್ತು.
ಕಸ ಎಸೆಯುತ್ತಿರುವ ಆ ವಿಡಿಯೋದ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಹಲವಾರು ಬಳಕೆದಾರರು ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ವಿದ್ಯಾರ್ಥಿಗೆ ನೋಟಿಸ್ ನೀಡಿದ್ದರು. ಮತ್ತು ಆತನು ವಿಚಾರಣೆಗೆ ಹಾಜರಾಗಿದ್ದನು ಎನ್ನಲಾಗಿದೆ.
ಆದರೆ ಈ ಇಡೀ ಘಟನೆಯಿಂದ ಖಿನ್ನತೆಗೊಳಗಾಗಿದ್ದ ಸ್ಯಾಮ್ಯುವಲ್ ತಮ್ಮ ಕುಟುಂಬಕ್ಕೆ ಸೇರಿದ ಪರವಾನಗಿ ಪಡೆದ ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.
ಇನ್ನೂ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವೈರಲ್ ವೀಡಿಯೊ, ಪೊಲೀಸ್ ಕ್ರಮ ಮತ್ತು ಆತ್ಮಹತ್ಯೆಯ ನಡುವೆ ಯಾವುದೇ ಸಂಬಂಧವನ್ನು ಗುರುತಿಸಿಲ್ಲವಾದರೂ, ಆ ನಿಟ್ಟಿನಲ್ಲೂ ತನಿಖೆ ನಡೆಸುತ್ತಿದ್ದು, ಕುಟುಂಬಸ್ಥರ ಹೇಳಿಕೆ ಪಡೆಯುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್).