ತನ್ನಷ್ಟಕ್ಕೆ ತಾನೇ ಚಲಿಸುತ್ತಿರುವ ಬಾವಿಯಲ್ಲಿನ ನೀರು: ಕಾರಣವೇನು? ಈ ವಿಚಿತ್ರ ಕಂಡು ಹುಬ್ಬೇರಿಸಿದ ಊರ ಮಂದಿ! Haunted Well  
ದೇಶ

ತನ್ನಷ್ಟಕ್ಕೆ ತಾನೇ ಚಲಿಸುತ್ತಿರುವ ಬಾವಿಯಲ್ಲಿನ ನೀರು: ಕಾರಣವೇನು? ಈ ವಿಚಿತ್ರ ಕಂಡು ಹುಬ್ಬೇರಿಸಿದ ಊರ ಮಂದಿ! Haunted Well

ಪ್ರಮುಖ ಮುಖ್ಯಾಂಶಗಳು

  • ಗುಜರಾತ್‌ನ ಮೋರ್ಬಿ ತಾಲ್ಲೂಕಿನ ವಿರ್‌ಪರ್ಡಾ ಗ್ರಾಮದಲ್ಲಿರುವ ನಿಗೂಢ ಬಾವಿಯ ನೀರು ತಾನಾಗಿಯೇ ಚಲಿಸುತ್ತಿದೆ
  • ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾವಿಯ ನೀರು ತನ್ನಷ್ಟಕ್ಕೆ ತಾನೇ ಅಲುಗಾಡಲು ಆರಂಭಿಸಿದೆ
  • ನೀರಿನ ಈ ಅಸಾಮಾನ್ಯ ಚಲನೆಯನ್ನು ಕಣ್ಣಾರೆ ವೀಕ್ಷಿಸಲು ಗ್ರಾಮಸ್ಥರು ಬಾವಿಯ ಬಳಿ ಬಂದು ಜಮಾಯಿಸಿದ್ದಾರೆ
  • ಬಾವಿಯಲ್ಲಿ ನೀರು ಚಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರನ್ನು ಆಕರ್ಷಿಸುತ್ತಿದೆ
ಅಹಮದಾಬಾದ್​: ಈ ವಿಶಾಲವಾದ ಭೂಮಿಯ ಮೇಲೆ ವಿಜ್ಞಾನಕ್ಕೂ ಅರಿಯದ, ತರ್ಕಕ್ಕೂ ನಿಲುಕದ ಅದೆಷ್ಟೋ ನಿಗೂಢಗಳು ಅಡಗಿವೆ. ಅಂತಹ ಅಚ್ಚರಿಯ ಜಗತ್ತಿನಲ್ಲಿ ಮನುಷ್ಯನ ಬುದ್ಧಿಗೂ ಸವಾಲೆಸೆವ ಕೆಲವು ರಹಸ್ಯಗಳು ಎಂದೆಂದಿಗೂ ಬಗೆಹರಿಯದ ಸತ್ಯಗಳಾಗಿ ಉಳಿದುಕೊಂಡಿವೆ. ಅಂತಹ ನಿಗೂಢಗಳಲ್ಲಿ ಗುಜರಾತ್‌ನ ಮೋರ್ಬಿ ತಾಲೂಕಿನ ವಿರ್‌ಪರ್ಡಾ ಗ್ರಾಮದಲ್ಲಿರುವ ಬಾವಿಯು ( Haunted Well ) ಕೂಡ ಒಂದು.
ಗ್ರಾಮದಲ್ಲಿರುವ ನಿಗೂಢ ಬಾವಿಯ ನೀರು ತಾನಾಗಿಯೇ ಚಲಿಸುವ ಮೂಲಕ ಮತ್ತೊಮ್ಮೆ ಸ್ಥಳೀಯ ಜನರ ಹುಬ್ಬೇರಿಸುವಂತೆ ಮಾಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರನ್ನು ಆಕರ್ಷಿಸುತ್ತಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾವಿಯಿಂದ ನೀರು ತನ್ನಷ್ಟಕ್ಕೆ ಚಲಿಸಲು ಆರಂಭಿಸಿತು. ಎರಡು ದಿನಗಳ ಹಿಂದೆ ಇದೇ ರೀತಿಯ ಘಟನೆ ಕಂಡುಬಂದಿತ್ತಾದರೂ, ಗುರುವಾರ ಮಧ್ಯಾಹ್ನದ ವೇಳೆಗೆ ನೀರಿನ ಚಲನೆಯು ಕ್ರಮೇಣ ನಿಂತುಹೋಗಿ, ನಂತರ ಅದೇ ದಿನದ ಬಳಿಕ ಮತ್ತೆ ಪ್ರಾರಂಭವಾಯಿತು.
ಈ ವಿಚಿತ್ರ ವಿದ್ಯಮಾನವು ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರನ್ನು ಸ್ಥಳಕ್ಕೆ ಬರುವಂತೆ ಆಕರ್ಷಿಸಿತು. ನೀರಿನ ಈ ಅಸಾಮಾನ್ಯ ಚಲನೆಯನ್ನು ಕಣ್ಣಾರೆ ವೀಕ್ಷಿಸಲು ಅನೇಕ ಜನರು ಬಾವಿಯ ಬಳಿ ಬಂದು ಜಮಾಯಿಸಿದರು. ನೀರು ಅಲುಗಾಡುವುದನ್ನು ಕಂಡು ಹುಬ್ಬೇರಿಸಿದ ಊರ ಮಂದಿ, ತಮ್ ಮೊಬೈಲ್​ಗಳನ್ನು ತೆಗೆದುಕೊಂಡು ವಿಡಿಯೋ ರೆಕಾರ್ಡ್​ ಮಾಡಲು ಶುರು ಮಾಡಿದರು.

ಈ ವಿಚಿತ್ರ ವಿದ್ಯಾಮಾನದ ಹಿಂದಿರುವ ಕಾರಣ ಏನೆಂಬುದು ಇದುವರೆಗೆ ತಿಳಿದುಬಂದಿಲ್ಲ. ಮೋರ್ಬಿ ಪ್ರದೇಶವು ಭೂಕಂಪನ ಚಟುವಟಿಕೆಗಳ ಇತಿಹಾಸವನ್ನು ಹೊಂದಿರುವುದರಿಂದ, ಇದು ಆ ಪ್ರದೇಶದ ಭೂಕಂಪನದ ಸ್ವಭಾವಕ್ಕೆ ಸಂಬಂಧಿಸಿರಬಹುದು ಎಂದು ಕೆಲವರು ನಂಬುತ್ತಾರೆ, ಆದರೂ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.

ಬಾವಿಯಲ್ಲಿ ಪುನರಾವರ್ತನೆಯಾಗುತ್ತಿರುವ ಈ ಚಲನೆಗೆ ನಿಖರವಾಗಿ ಏನು ಕಾರಣ ಎಂಬುದನ್ನು ತಜ್ಞರು ಪತ್ತೆ ಹಚ್ಚುವುದಕ್ಕಾಗಿ ಸ್ಥಳೀಯರು ಕಾತುರದಿಂದ ಕಾಯುತ್ತಿದ್ದು, ಈ ಘಟನೆಯು ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿದೆ, (ಏಜೆನ್ಸೀಸ್​).