ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ ಮಿಷನ್ 4 ಸ್ಪೇಸ್ ಶೆಟಲ್ನಲ್ಲಿ ಮಿಷನ್ ಪೈಲೆಟ್ ಆಗಿ ಶುಭಾಂಶು ಶುಕ್ಲಾ ಅವರು ಐಎಸ್ಎಸ್ನಲ್ಲಿ 18 ದಿನಗಳ ವೈಜ್ಞಾನಿಕ ಸಂಶೋಧನೆ ನಡೆಸಿ ಭಾರತಕ್ಕೆ ಕೀರ್ತಿ ತಂದರು. ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಕ್ಲಾ ಅವರ ಈ ಚಾರಿತ್ರಿಕ ಸಾಧನೆ ಮುಂಬರುವ ಮಾನವಸಹಿತ ಗಗನಯಾನಕ್ಕೆ ಹೊಸ ಭಾಷ್ಯ ಬರೆದಿದೆ. ಐಎಸ್ಎಸ್ನಲ್ಲಿ ಇದ್ದಷ್ಟು ದಿನ ಹಲವು ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗ ನಡೆಸಿದರು. 41 ವರ್ಷಗಳ ಬಳಿಕ ಎರಡನೇ ಭಾರತೀಯ ಗಗನಯಾನಿಯಾಗಿ ಗುರುತಿಸಿಕೊಂಡ ಶುಕ್ಲಾ ಅವರ ಈ ಐತಿಹಾಸಿಕ ಸಾಧನೆ ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ.
ಅಣುಶಕ್ತಿ ಉತ್ಪಾದನೆಯಲ್ಲಿ ಮೈಲಿಗಲ್ಲು
ಭಾರತವು ಅಣುಶಕ್ತಿ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದು, ಆರ್ಥಿಕ ವರ್ಷವೊಂದರಲ್ಲಿ 50 ಶತಕೋಟಿ ಯೂನಿಟ್ ವಿದ್ಯುತ್ ಉತ್ಪಾದಿಸಿ ಸಾಧನೆ ಮಾಡಿದೆ. ರಾಜಸ್ಥಾನದಲ್ಲಿ ತಲಾ 700 ಮೆಗಾವಾಟ್ ಸಾಮರ್ಥ್ಯದ 4 ಟಕಗಳುಳ್ಳ "ಮಾಹಿ ಬನ್ಸ್ವಾರಾ ಅಣು ವಿದ್ಯುತ್ ಸ್ಥಾವರ'ಕ್ಕೆ ಸೆಪ್ಟೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯು "ಅಶ್ವಿನಿ' ಹೆಸರಿನಲ್ಲಿ ಎನ್ಪಿಸಿಐಎಲ್&ಎನ್ಟಿಪಿಸಿ ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ. 2032ರ ವೇಳೆಗೆ 22.5 ಗಿಗಾವಾಟ್ ಅಣುಶಕ್ತಿ ಉತ್ಪಾದಿಸುವ ಗುರಿ ಹೊಂದಲಾಗಿದೆ.
ಬಾಹ್ಯಾಕಾಶದಲ್ಲಿ ಯಶಸ್ವಿ ಡಾಕಿಂಗ್
ಜನವರಿ ತಿಂಗಳಿನಲ್ಲಿ ಭಾರತವು ತನ್ನದೇಯಾದ ಡಾಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಬಾಹ್ಯಾಕಾಶದಲ್ಲಿ ಡಾಕಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತು. ಅತಿ ಕ್ಲಿಷ್ಟಕರ ಕೆಲಸವಾದ ಈ ಕಾರ್ಯವನ್ನು ಇಸ್ರೋ ವಿಜ್ಞಾನಿ ಸಮೂಹ ಯಶಸ್ವಿಗೊಳಿಸಿತು. ಎರಡು ಸ್ಪಾಡೆಸ್ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಜೋಡಣೆ ಮಾಡಿತು. ಇಂತಹ ಸಾಧನೆ ಮಾಡಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿತು. ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾಲಯವಾಗಿರುವ "ಆದಿತ್ಯ&ಎಲ್1' ಕಾರ್ಯಾಚರಣೆಯಿಂದ ಅಂದಾಜು 15 ಟೆರಾಬೈಟ್ ಪ್ರಮಾಣದಷ್ಟು ವೈಜ್ಞಾನಿಕ ದತ್ತಾಂಶ ಬಿಡುಗಡೆ ಮಾಡಿದ್ದು, ಇದನ್ನಾಧರಿಸಿ ಸೂರ್ಯನ ಅಧ್ಯಯನ ಮಾಡಲು ಆತ್ಮವಿಶ್ವಾಸ ವೃದ್ಧಿಸಿದೆ.
ಶುಕ್ಲಾ ಸಾಧನೆಯಿಂದ ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸು ವೃದ್ಧಿ
ಇಸ್ರೋ ಇದೇ ಮೊದಲ ಬಾರಿಗೆ ಅತಿ ಭಾರದ (6,100 ಕೆಜಿ) ವಾಣಿಜ್ಯ ಉಪಗ್ರಹವನ್ನು ಎಂವಿಎಮ& ಎಂ6 ಬಾಹುಬಲಿ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಿತು. ಡಿಸೆಂಬರ್ 24ರಂದು ನಡೆದ ಈ ಉಡಾವಣೆ ಯಲ್ಲಿ ಅಮೆರಿಕದ "ಬ್ಲೂರ್ಬಡ್ ಬ್ಲಾಕ್&2' ಸಂವಹನ ಸ್ಯಾಟಲೈಟ್ಅನ್ನು ಕಡಿಮೆ ಭೂಕೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಜಾಗತಿಕ ದೂರಸಂಪರ್ಕ ಕ್ಷೇತ್ರದಲ್ಲಿ ಭಾರತವು ಅಮೆರಿಕಕ್ಕೆ ಪೈಪೋಟಿ ನೀಡುವ ಸಾಮರ್ಥ್ಯ ನೀಡುವ ಛಾಪು ಮೂಡಿಸಿದೆ. ಈ ವರ್ಷದ ಆರಂಭದಲ್ಲೇ ಇಸ್ರೋ ಶ್ರೀಹರಿಕೋಟದ ಕೇಂದ್ರದಿಂದ 100ನೇ ಉಡಾವಣೆ ನಡೆಸಿ ಗಮನ ಸೆಳೆಯಿತು.
ಕ್ವಾಂಟಮ್ ಮಿಷನ್ಗೆ ಆರ್ಥಿಕ ಬಲ
ದೇಶದಲ್ಲಿ ವೈಜ್ಞಾನಿಕ ಹಾಗೂ ಆರ್ ಆ್ಯಂಡ್ ಡಿ ಕ್ಷೇತ್ರವನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ರೂಪಿಸಿರುವ ರಾಷ್ಟ್ರೀಯ ಕ್ವಾಂಟಮ್ ಮಿಷನ್ಗೆ ಕೇಂದ್ರ ಸರ್ಕಾರ 6,003.65 ಕೋಟಿ ರೂ. ಮೊತ್ತದ ಯೋಜನೆಗೆ ಒಪ್ಪಿಗೆ ನೀಡಿದೆ. ಬೆಂಗಳೂರಿನ ಐಐಎಸ್ಸಿ ಸೇರಿ ಮದ್ರಾಸ್ ಐಐಟಿ, ದಿಲ್ಲಿ ಐಐಟಿ ಹಾಗೂ ಬಾಂಬೆ ಐಐಟಿಗಳಲ್ಲಿ 4 ವಿಷಯಾಧಾರಿತ ಹಬ್ ಸ್ಥಾಪಿಸಿದ್ದು, ಒಟ್ಟು 17 ಕಾರ್ಯಕ್ರಮಗಳನ್ನು ಒಳಗೊಂಡಿದೆ. ಇದಲ್ಲದೆ ಕ್ವಾಂಟಮ್ ತಂತ್ರಜ್ಞಾನದಲ್ಲಿ ನವೋದ್ಯಮಗಳನ್ನು ಬೆಂಬಲಿಸಲು ವಿಶೇಷ ಮಾರ್ಗಸೂಚಿ ರೂಪಿಸಲಾಗಿದೆ.
ಜಿಐಐನಲ್ಲಿ 39ನೇ ಸ್ಥಾನಕ್ಕೆ ನೆಗೆತ
ಜಾಗತಿಕ ನಾವೀನ್ಯತೆ ಸೂಚ್ಯಂಕ (ಜಿಐಐ)&2025ರ ಪ್ರಕಾರ ಭಾರತವು ಉನ್ನತ ನವೀನ ಆರ್ಥಿಕತೆಗಳಲ್ಲಿ 39ನೇ ಸ್ಥಾನಕ್ಕೆ ಏರಿದೆ. ವಿಶ್ವ ಬೌದ್ಧಿಕ ಆಸ್ತಿ ಫೈಲಿಂಗ್ನಲ್ಲಿ 6ನೇ ಸ್ಥಾನವನ್ನು ಹೊಂದಿದೆ. ನೆಟ್ವರ್ಕ್ ರೆಡಿನೆಸ್ ಇಂಡೆಕ್ಸ್ (ಎನ್ಆರ್ಐ)& 2024ರ ವರದಿಯಂತೆ 79ನೇ ಸ್ಥಾನದಿಂದ 49ನೇ ಶ್ರೇಯಾಂಕಕ್ಕೆ ಜಿಗಿದಿದೆ. ಸಂಶೋಧನಾ ಪ್ರಕಟಣೆಗಳ ವಿಷಯದಲ್ಲೂ ಜಾಗತಿಕವಾಗಿ 3ನೇ ಸ್ಥಾನಕ್ಕೆ ಏರಿದೆ.
ಸಬ್ಮರೈನ್ನಿಂದ ಕೆ&4 ಪಣಿ ಪರೀಕ್ಷೆ
ರಕ್ಷಣಾ ಬತ್ತಳಿಕೆಗೆ ಹೊಸ ಪಣಿ ಸಹಿತ ಯುದ್ಧಸಾಮಗ್ರಿ ಸಂಶೋಧಿಸಿ ಸೇನಾಪಡೆಗೆ ಸೇರ್ಪಡೆ ಮಾಡುವ ಕಾರ್ಯ ಮತ್ತಷ್ಟು ವೇಗ ಪಡೆದಿದೆ. ಈ ವರ್ಷಾಂತ್ಯದಲ್ಲಿ ಪರಮಾಣುಚಾಲಿತ ಜಲಾಂತರ್ಗಾಮಿ ನೌಕೆ "ಐಎನ್ಎಸ್ ಅರಿಘಾಟ್' ಮೂಲಕ ಬ್ಯಾಲಿಸ್ಟಿಕ್ ಕೆ&4 ಮಾದರಿಯ ಪಣಿಯ ಪರೀಕ್ಷೆ ಯಶಸ್ವಿಯಾಗಿದೆ. 2.5 ಟನ್ ಪರಮಾಣು ಸಿಡಿತಲೆ ಹೊಂದಿರುವ ಪಣಿಯು 3,500 ಕಿ.ಮೀ. ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದುವ ರೀತಿಯಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದೆ.
ಆತ್ಮನಿರ್ಭರಕ್ಕಾಗಿ ಎರಡು ಯೋಜನೆ
ದೇಶದ ವ್ಯವಸಾಯ ಕ್ಷೇತ್ರವನ್ನು ಸುಸ್ಥಿರಗೊಳಿಸಿ ಸ್ವಾವಲಂಬನೆ ಹೆಚ್ಚಿಸಲು ಅಕ್ಟೋಬರ್ನಲ್ಲಿ ಎರಡು ಹೊಸ ಯೋಜನೆಗಳು ಪ್ರಕಟಿಸಲಾಯಿತು. ಪ್ರಧಾನಮಂತ್ರಿ "ಧನ ಧಾನ್ಯ ಕೃಷಿ ಯೋಜನೆ' ಹಾಗೂ "ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರ ಮಿಷನ್' ಕಾರ್ಯಕ್ರಮಕ್ಕೆ ಒಟ್ಟು 35,440 ಕೋಟಿ ರೂ. ಅನುದಾನದೊಂದಿಗೆ ಚಾಲನೆ ನೀಡಲಾಯಿತು. ಕೃಷಿ, ಪಶುಸಂಗೋಪನೆ, ಮೀನುಗಾರಿಕೆ, ಆಹಾರ ಸಂಸ್ಕರಣಾ ವಲಯಕ್ಕೆ 5,450 ಕೋಟಿ ರೂ. ಯೋಜನೆಗೂ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು. ಈ ಯೋಜನೆಗಳಿಂದ ಆಮದು ಕಡಿಮೆಗೊಳಿಸಿ ರ್ತು ಹೆಚ್ಚಿಸಲು ಸಹಕಾರಿ ಆಗಲಿದೆ.
ಕರ್ನಾಟಕದಿಂದ ನವೋದ್ಯಮ ನೀತಿ
ದೇಶದಲ್ಲೇ ಮೊದಲ ಬಾರಿಗೆ ಐಟಿ&ಬಿಟಿ ನೀತಿ ಪ್ರಕಟಿಸಿದ್ದ ಕರ್ನಾಟಕ, ನವೆಂಬರ್ನಲ್ಲಿ ಹೊಸ ನವೋದ್ಯಮ ನೀತಿಯನ್ನು ಪ್ರಕಟಿಸಿದೆ. 2025&30ರ ಅವಧಿಯಲ್ಲಿ 25 ಸಾವಿರ ಸ್ಟಾರ್ಟಪ್ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಬೆಂಗಳೂರಿನಾಚೆ (ಪ್ರಮುಖವಾಗಿ ಮೈಸೂರು, ಹುಬ್ಬಳ್ಳಿ, ಮಂಗಳೂರು) 10 ಸಾವಿರ ನವೋದ್ಯಮ ಆರಂಭಿಸಲು ಉತ್ತೇಜಿಸಲಾಗುತ್ತದೆ. ಈ ನೀತಿ ಜಾರಿಗೆ 518 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಡಿಜಿಟಲ್ ಕೃಷಿಗೆ ವಿಶೇಷ ಒತ್ತು
ದೇಶದ ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ನೀಡಲು ಕೇಂದ್ರ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಚಾಲನೆ ನೀಡಿದೆ. ಡ್ರೋನ್, ಉಪಗ್ರಹ ಚಿತ್ರಣ ಹಾಗೂ ಮೊಬೈಲ್ ಪೋನ್ ಆಧಾರಿತ ಅಪ್ಲಿಕೇಶನ್ ಮೂಲಕ ರೈತರಿಗೆ ತ್ವರಿತ ಹಾಗೂ ನಿಖರ ಮಾಹಿತಿ ನೀಡಲಾಗುತ್ತಿದೆ. ಸಾಂಪ್ರದಾಯಿಕ ಕೃಷಿ ಮಾರುಕಟ್ಟೆಗಳಿಂದ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ರೈತರು, ಖರೀದಿದಾರರು, ಚಿಲ್ಲರೆ ವ್ಯಾಪಾರಿಗಳು ಹಾಗೂ ರಪ್ತುದಾರರಿಗೆ ನೇರ ಪ್ರವೇಶ ಪಡೆಯಲು ಸಹಕಾರಿಯಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಗೆ ತಡೆಬಿದ್ದಿದೆ.
ಸಾವಯವ ಕೃಷಿಗೆ ಉತ್ತೇಜನ
ದೇಶದಲ್ಲಿ ಸಾವಯವ ಕೃಷಿಯನ್ನು ಮತ್ತೆ ಮುನ್ನೆಲೆಗೆ ತರಲು ಪರಂಪರಾಗತ ಕೃಷಿ ವಿಕಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಕೆಲ ಕಾರ್ಯಕ್ರಮಗಳನ್ನು ಪ್ರಕಟಿಸಿದೆ. ದೇಶಾದ್ಯಂತ 15 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಕಾರ್ಯಕ್ರಮವನ್ನು ವಿಸ್ತರಿಸಿದ್ದು, ಈ ವರ್ಷಾಂತ್ಯಕ್ಕೆ 25 ಲಕ್ಷ ಹೆಕ್ಟೇರ್ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಸುಮಾರು 25.30 ಲಕ್ಷ ರೈತರು ಪ್ರಯೋಜನ ಪಡೆದಿದ್ದು, ಇನ್ನಷ್ಟು ಮಂದಿಗೆ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಬಜೆಟ್ನಲ್ಲಿ 205.46 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ರಪ್ತು ಮಾಡುವ ರೈತರಿಗೆ ವಿಶೇಷ ಸಬ್ಸಿಡಿ ಹಾಗೂ ಉತ್ತೇಜನ ನೀಡಲಾಗುತ್ತಿದೆ.
ದಾಖಲೆ ಆಹಾರಧಾನ್ಯ ಉತ್ಪಾದನೆ
ಭಾರತವು ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಆಹಾರಧಾನ್ಯಗಳನ್ನು ಉತ್ಪಾದಿಸಿ ಗಮನ ಸೆಳೆದಿದೆ. ಶೇಕಡ 8 ಹೆಚ್ಚಳದೊಂದಿಗೆ 357.73 ದಶಲಕ್ಷ ಟನ್ ಪ್ರಮಾಣದ ಉತ್ಪಾದನೆ ದಾಟಿದೆ. ದೇಶಾದ್ಯಂತ ಹೆಚ್ಚಿನ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಆತ್ಮನಿರ್ಭರ ಕಾರ್ಯಕ್ರಮಗಳ ಜಾರಿ, ಸುಸ್ಥಿರ ಕೃಷಿ, ಮಾರುಕಟ್ಟೆ ವಿಸ್ತರಣೆ ಹಾಗೂ ರೈತರಿಗೆ ಸಕಾಲದಲ್ಲಿ ಕಾರ್ಯಕ್ರಮಗಳನ್ನು ತಲುಪಿಸಿರುವುದು ಈ ಸಾಧನೆ ಮಾಡಲು ಕಾರಣವಾಗಿದೆ.
9.8 ಕೋಟಿ ರೈತರಿಗೆ ಪಿಎಂ ಕಿಸಾನ್ ಕಂತು ಪಾವತಿ
ಬೆಳೆ ಋತುವಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಪ್ರತಿ ರೈತನಿಗೆ ವಾರ್ಷಿಕ 6,000 ರೂ. ಸಹಾಯಧನ ವಿತರಿಸುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ&ಕಿಸಾನ್) ಕಾರ್ಯಕ್ರಮ ರೈತಾಪಿ ವರ್ಗದವರಲ್ಲಿ ಜನಪ್ರಿಯತೆ ಪಡೆದಿದೆ. ಫೆಬ್ರವರಿಯಲ್ಲಿ 19ನೇ ಕಂತಿನಲ್ಲಿ ದೇಶಾದ್ಯಂತ 9.8 ಕೋಟಿ ಕೃಷಿಕರಿಗೆ ಒಟ್ಟು 22,000 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಂತರ, ಆಗಸ್ಟ್ನಲ್ಲಿ 9.7 ಕೋಟಿ ರೈತರಿಗೆ 20,500 ಕೋಟಿ ರೂ. ಡಿಬಿಟಿ ಮೂಲಕ ವಿತರಿಸಲಾಯಿತು.