Bengal Election | ಮಮತಾ ಬ್ಯಾನರ್ಜಿ VS ಸುವೇಂದು ಅಧಿಕಾರಿ 
ದೇಶ

ಎರಡು ಕಡೆ ಸ್ಪರ್ಧಗೆ ಗೆಲುವೊಂದೇ ಕಾರಣವಲ್ಲ.. ಟಿಎಂಸಿ ನಾಯಕರ ನಿದ್ದೆಗೆಡಿಸಿರುವ ಬಿಜೆಪಿಯ ಆ ಗುಪ್ತ ಕಾರ್ಯಾಚರಣೆ ಏನು..? ಇಲ್ಲಿದೆ ಸಂಪೂರ್ಣ ಮಾಹಿತಿ | Bengal Election

Bengal Election: ಈ ಸಲದ ಬಂಗಾಳ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ ಘಟ್ಟಕ್ಕೆ ತಲುಪಿದ್ದು, ಚುನಾವಣಾ ರಣತಂತ್ರದಲ್ಲಿ ಬಿಜೆಪಿಯ ಅತ್ಯಂತ ದೊಡ್ಡ ಮತ್ತು ಆಶ್ಚರ್ಯಕರ ನಡೆ ಎಂದರೆ ಸುವೇಂದು ಅಧಿಕಾರಿಯವರನ್ನು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಸಿರುವುದು. ಈ ನಿರ್ಧಾರದ ಹಿಂದೆ ಬಿಜೆಪಿಯ ದೊಡ್ಡ ಪ್ಲಾನ್​ಗಳಿವೆ ಎನ್ನುವುದು ಅನೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಕೋಟೆಯನ್ನು ಭೇದಿಸಲು ಬಿಜೆಪಿ ರೂಪಿಸಿರುವ ತಂತ್ರಗಾರಿಕೆಯಲ್ಲಿ ಸುವೇಂದು ಅಧಿಕಾರಿ ಪ್ರಮುಖ ದಾಳವಾಗಿದ್ದು, ಅವರನ್ನು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಸಿರುವುದು ಕೇವಲ ಒಂದು ಚುನಾವಣಾ ನಿರ್ಧಾರವಲ್ಲ, ಬದಲಾಗಿ ಇದು ಇಡೀ ರಾಜ್ಯದ ರಾಜಕೀಯ ಸಮೀಕರಣವನ್ನು ಬದಲಿಸುವ ಗುರಿಯನ್ನು ಹೊಂದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ.

ನಂದಿಗ್ರಾಮದ ಹಿಡಿತ ಮತ್ತು ಹೊಸ ಅಖಾಡದ ವಿಸ್ತರಣೆ

ಸುವೇಂದು ಅಧಿಕಾರಿಯವರು ಈಗಾಗಲೇ ನಂದಿಗ್ರಾಮವನ್ನು ಭದ್ರಕೋಟೆಯಾಗಿಸಿಕೊಂಡಿದ್ದಾರೆ, ಕಳೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಸೋಲಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ವಿಪಕ್ಷ ನಾಯಕ, ಈ ಬಾರಿಯೂ ಇಲ್ಲಿನ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದರ ಜೊತೆಗೆ, ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಪಕ್ಕದ ಕ್ಷೆತ್ರದಲ್ಲಿ ಪ್ರಭಾವ ಬೀರಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಇದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ.

ಮಮತಾರನ್ನು ಕಟ್ಟಿಹಾಕುವ ತಂತ್ರ

ಸುವೇಂದು ಅಧಿಕಾರಿಯವರು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧವೇ ಕಣಕ್ಕಿಳಿಯುವುದರಿಂದ ಸ್ಪರ್ಧಾ ಕಣ ರಂಗು ಪಡೆದುಕೊಳ್ಳುತ್ತದೆ, ಇದಷ್ಟೆ ಅಲ್ಲದೇ ಬಿಜೆಪಿಯ ಕೇಂದ್ರ ನಾಯಕರು ಈ ಕ್ಷೇತ್ರದ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತಾರೆ, ಹೀಗಿದ್ದಾಗ ದೀದಿ ಕ್ಷೇತ್ರವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ.
ಸಿಎಂ ಬ್ಯಾನರ್ಜಿ ವಿರುದ್ಧ ಪ್ರಬಲ ಅಭ್ಯರ್ಥಿಯೇ ಕಣಕ್ಕಿಳಿದಿರುವುದರಿಂದ ಟಿಎಂಸಿ ತನ್ನ ಪ್ರಚಾರದ ಬಹುಪಾಲು ಸಮಯ ಮತ್ತು ಸಂಪನ್ಮೂಲವನ್ನು ಈ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಬೇಕಾಗುತ್ತದೆ. ಮುಖ್ಯವಾಗಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಯವರು ಸುವೇಂದು ಅವರನ್ನು ಸೋಲಿಸಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಇದರಿಂದ ಟಿಎಂಸಿಯ ನಾಯಕರು ರಾಜ್ಯದ ಇತರ ಭಾಗಗಳಲ್ಲಿ ಪ್ರಚಾರ ಮಾಡಲು ಸಮಯದ ಕೊರತೆ ಎದುರಿಸುವಂತೆ ಮಾಡುವುದು ಬಿಜೆಪಿಯ ಗುಪ್ತ ಅಜೆಂಡಾವಾಗಿದೆ ಎಂಬ ಚರ್ಚೆಗಳು ಸಹ ಕೇಳಿ ಬರುತ್ತಿವೆ.

ದಕ್ಷಿಣ ಬಂಗಾಳದ ಮೇಲೆ ಪ್ರಭುತ್ವ

ಬಿಜೆಪಿಗೆ ಉತ್ತರ ಬಂಗಾಳದಲ್ಲಿ ಉತ್ತಮ ಬೆಂಬಲವಿದೆ, ಆದರೆ ದಕ್ಷಿಣ ಬಂಗಾಳ ಮತ್ತು ಮೇದಿನಿಪುರ ಭಾಗದಲ್ಲಿ ಸುವೇಂದು ಅಧಿಕಾರಿಯವರ ಪ್ರಭಾವ ಅಪಾರ. ಅಂತಹ ಕ್ಷೇತ್ರಗಳಿಂದ ಬಿಜೆಪಿ ನಾಯಕರನ್ನು ಕಣಕ್ಕಿಳಿಸುವುದರಿಂದ ಆ ಭಾಗದ ಮತದಾರರ ಮೇಲೆ ಪ್ರಭಾವ ಬೀರಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಇದು ಕೇವಲ ಎರಡು ಸೀಟುಗಳ ಗೆಲುವಲ್ಲ, ಬದಲಾಗಿ ಸುತ್ತಮುತ್ತಲಿನ ಕನಿಷ್ಠ ೪೦-೫೦ ಕ್ಷೇತ್ರಗಳ ಮೇಲೆ ಧನಾತ್ಮಕ ಪರಿಣಾಮ ಬೀರುವ ತಂತ್ರವಾಗಿದೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ.

ಮುಂದಿನ ಮುಖ್ಯಮಂತ್ರಿ ಇವರೇ ಎನ್ನುವ ಸಂದೇಶವೇ..?

ಬಿಜೆಪಿ ಈವರೆಗೆ ಅಧಿಕೃತವಾಗಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲವಾದರೂ, ಸುವೇಂದು ಅಧಿಕಾರಿಯವರಿಗೆ ಈ ಮಟ್ಟದ ಪ್ರಾಮುಖ್ಯತೆ ನೀಡಿರುವುದು ಅವರು ಬಿಜೆಪಿಯ ಸಂಭಾವ್ಯ ಸಿಎಂ ಅಭ್ಯರ್ಥಿ ಎಂಬ ಬಲವಾದ ಸಂದೇಶವನ್ನು ರವಾನಿಸುತ್ತದೆ. ಒಬ್ಬ ನಾಯಕನನ್ನು ಎರಡು ಕ್ಷೇತ್ರಗಳಿಂದ ಕಣಕ್ಕಿಳಿಸುವುದು ಅವರ ಜನಪ್ರಿಯತೆ ಮತ್ತು ಪಕ್ಷಕ್ಕೆ ಅವರ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ. ಇದು ತಟಸ್ಥ ಮತದಾರರನ್ನು ಬಿಜೆಪಿಯತ್ತ ಸೆಳೆಯಲು ಸಹಾಯ ಮಾಡುತ್ತದೆ.

ಮತದಾರರ ಪಟ್ಟಿ ಮತ್ತು ಒಳನುಸುಳುವಿಕೆ ವಿವಾದದ ಅಸ್ತ್ರ

ಸುವೇಂದು ಅಧಿಕಾರಿ ನಿರಂತರವಾಗಿ ಒಳನುಸುಳುವಿಕೆ ಮತ್ತು ಮತದಾರರ ಪಟ್ಟಿಯ ಅಕ್ರಮಗಳ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ. ಅವರು ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಈ ರಾಷ್ಟ್ರೀಯವಾದಿ ಅಜೆಂಡಾಗಳನ್ನು ದೊಡ್ಡಮಟ್ಟದಲ್ಲಿ  ಮೂಲಕ ಹಿಂದೂ ಮತಗಳ ಧ್ರುವೀಕರಣಕ್ಕೆ ಬಿಜೆಪಿ ಮುಂದಾಗಿದೆ. ಮಮತಾ ಬ್ಯಾನರ್ಜಿಯವರ ಅಲ್ಪಸಂಖ್ಯಾತ ತುಷ್ಟೀಕರಣ ರಾಜಕಾರಣಕ್ಕೆ ಪ್ರತಿಯಾಗಿ ಸುವೇಂದು ಅವರ ಈ ನಡೆ ಬಿಜೆಪಿಗೆ ಲಾಭ ತಂದುಕೊಡಬಲ್ಲದು ಎಂಬ ಲೆಕ್ಕಾಚಾರ ಹಾಕಲಾಗಿದೆ.

ಸವಾಲುಗಳೇನು..?

ಈ ಪ್ಲಾನ್‌ನಲ್ಲಿ ಒಂದಷ್ಟು ಸವಾಲುಗಳು ಕೂಡ ಇವೆ. ಒಂದು ವೇಳೆ ಎರಡೂ ಕ್ಷೇತ್ರಗಳಲ್ಲಿ ಟಿಎಂಸಿ ಬಲವಾದ ಪೈಪೋಟಿ ನೀಡಿದರೆ, ಸುವೇಂದು ಅವರು ತಮ್ಮ ಕ್ಷೇತ್ರಗಳಲ್ಲೇ ಉಳಿಯಬೇಕಾಗುತ್ತದೆ, ಇದರಿಂದ ಅವರು ರಾಜ್ಯಾದ್ಯಂತ ಪ್ರಚಾರ ಮಾಡಲು ಸಾಧ್ಯವಾಗದಿರಬಹುದು. ಇತ್ತ ಸೋಲಿನ ಭಯದಿಂದ ಎರಡು ಕಡೆ ಸ್ಪರ್ಧಿಸುತ್ತಿದ್ದಾರೆ ಎಂಬ ಟಿಎಂಸಿಯ ಅಪಪ್ರಚಾರವನ್ನು ಎದುರಿಸುವುದು ದೊಡ್ಡ ಸವಾಲಾಗಿದೆ(ಏಜೆನ್ಸೀಸ್​).