ತಿರುವನಂತಪುರಂ: ದೋಷಪೂರಿತ ಮತ್ತು ವಿಶ್ವಾಸಾರ್ಹವಲ್ಲದ ಸಿನೆಮಾಗಳಿಗೆ ರಾಷ್ಟ್ರೀಯ ಸಿನೆಮಾ ಪುರಸ್ಕಾರ ದೊರೆಯುತ್ತಿರುವುದು ಖೇದಕರ ಎಂದು ದಾದ ಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತ, ನಿರ್ದೇಶಕ ಆಡೂರು ಗೋಪಾಲಕೃಷ್ಣನ್ ಅಸಮಾಧಾನ ಹೊರಹಾಕಿದ್ದಾರೆ.
ಪ್ರಶಸ್ತಿಗೆ ಸಿನೆಮಾವನ್ನು ಆಯ್ಕೆಮಾಡುವ ಜ್ಯೂರಿ ತಂಡವೇ ಕಳಪೆಯಾಗಿರುವುದರಿಂದ ಅವರು ಕಳಪೆ ಸಿನೆಮಾಗಳನ್ನೇ ಆಯ್ಕೆ ಮಾಡುತ್ತಾರೆ, ಇದು ನಿರೀಕ್ಷಿತ, ಇದರಿಂದಾಗಿ ಸಿನೆಮಾ ನಿರ್ಮಾಣದ ಗುಣಮಟ್ಟವೇ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತೀರಾ ಕೆಳ ಮಟ್ಟದ ಸಿನೆಮಾಗಳು ಸಹ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆಯುತ್ತಿರುವ ಕುರಿತು ತನಿಖೆ ನಡೆಸುವುದು ಅವಶ್ಯಕವಾಗಿದೆ, ಇಲ್ಲದ್ದಿದ್ದರೆ ಈ ಪ್ರಶಸ್ತಿಗಳನ್ನು ನೀಡುವುದನ್ನೇ ನಿಲ್ಲಿಸುವುದು ಉತ್ತಮ. ಜ್ಯೂರಿಗಳಾಗಿ ಆಯ್ಕೆಯಾಗುವವರು ಯಾರು ಸಿನೆಮಾ ರಂಗದ ಪರಿಣಿತರೆ ಅಲ್ಲ, ಹೀಗಾಗಿ ಪ್ರಶಸ್ತಿ ಎನ್ನುವುದು ಕೇವಲ ಸ್ವಜನ ಪಕ್ಷಪಾತದಿಂದ ಕೂಡಿದ್ದು, ತಮಗೆ ಬೇಕಾದವರಿಗೆ ನೀಡಲಾಗುತ್ತಿದೆ ಎಂದರು.
ಇತ್ತೀಚೆಗೆ ಮೋಹನ್ ಲಾಲ್ರಿಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ದೊರೆತ ಸಂದರ್ಭದಲ್ಲಿಯೂ ಸಹ ತಮ್ಮ ಅಸಮಾಧಾನವನ್ನು ಹೊರಹಾಕಿದ್ದ ಆಡೂರು ಗೋಪಾಲಕೃಷ್ಣನ್, ನನಗೆ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಬರಲು ಯಾರ ಪಾತ್ರವು ಇರಲಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಮಲಯಾಳಂ ನಟನ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮೋಹನ್ ಲಾಲ್ ಅವರನ್ನು ಸನ್ಮಾನಿಸಲು ಕೇರಳ ಸರ್ಕಾರ ಆಯೋಜಿಸಿದ್ದ 'ವಾನೋಲಂ ಮಲಯಾಳಂ ಲಾಲ್ ಸಲಾಮ್' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಿರಿಯ ನಿರ್ದೇಶಕ ಅಡೂರ್ ಗೋಪಾಲಕೃಷ್ಣನ್, ದಶಕಗಳ ಹಿಂದೆ ನಾನು ಈ ಪ್ರಶಸ್ತಿಯನ್ನು ಪಡೆದಾಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಚರಣೆ ನಡೆದಿರಲಿಲ್ಲ. ಇದೀಗ ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿ ಮೋಹನ್ ಲಾಲ್ ಅವರನ್ನು ಗೌರವಿಸಲು ವಿಶೇಷ ಆಸಕ್ತಿ ವಹಿಸಿದೆ. ಆದ್ದರಿಂದ ಹೆಮ್ಮೆಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದಿದ್ದರು.
ಗೋಪಾಲಕೃಷ್ಣನ್ ಮಾತಿಗೆ ಪ್ರತಿಕ್ರಿಯೆ ನೀಡಿದ ಮೋಹನ್ ಲಾಲ್, ಹಿರಿಯ ನಿರ್ದೇಶಕರು ಹಲವು ಬಾರಿ ನನ್ನ ಬಗ್ಗೆ ಮಾತನಾಡಿದ್ದಾರೆ... ಧನ್ಯವಾದಗಳು ಅಡೂರ್ ಸರ್ ಎಂದು ಹೇಳಿದರು.(ಏಜೆನ್ಸೀಸ್).