Sarla Maheshwari DD News(ಚಿತ್ರ X) 
ದೇಶ

ಮೌನವಾದ ಸುದ್ದಿ ಲೋಕದ 'ಸರಳ ಧ್ವನಿ'..ಇಂದು ದೆಹಲಿಯಲ್ಲಿ ಅಂತ್ಯಕ್ರಿಯೆ Sarla Maheshwari

ಪ್ರಮುಖ ಮುಖ್ಯಾಂಶಗಳು

  • 1980 ಮತ್ತು 1990 ರ ದಶಕಗಳಲ್ಲಿ ಡಿಡಿ ಸುದ್ದಿ ವಾಚನದ ನಿರೂಪಕಿ ಸರಳಾ ಮಹೇಶ್ವರಿ ನಿಧನ
  • ಇಂದು ಅವರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಗುವುದು
  • ಮಹೇಶ್ವರಿ ಅವರ ಸರಳತೆ, ಸಂಯಮ ಮತ್ತು ವ್ಯಕ್ತಿತ್ವ ವೀಕ್ಷಕರ ಹೃದಯಗಳಲ್ಲಿ ಆಳವಾದ ನಂಬಿಕೆಯನ್ನು ಸ್ಥಾಪಿಸಿದೆ
ನವದೆಹಲಿ:1980 ಮತ್ತು 1990 ರ ದಶಕಗಳಲ್ಲಿ ಡಿಡಿ ಸುದ್ದಿ ವಾಚನದ ಪ್ರಮುಖ ಮುಖಗಳಲ್ಲಿ ಒಬ್ಬರಾಗಿದ್ದ ನಿರೂಪಕಿ ಸರಳಾ ಮಹೇಶ್ವರಿ (Sarla Maheshwari) ಗುರವಾರ (ಫೆ.12) ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ದೆಹಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿವೆ.
ಸರಳಾ ಮಹೇಶ್ವರಿಯವರ ನಿಧನದ ನಂತರ ಡಿಡಿ ನ್ಯಾಷನಲ್ ತಮ್ಮ ಅಧೀಕೃತ ಎಕ್ಸ್​ X ಖಾತೆಯಲ್ಲಿ ಮಹೇಶ್ವರಿ ಅವರ ಸರಳತೆ, ಸಂಯಮ ಮತ್ತು ವ್ಯಕ್ತಿತ್ವ ವೀಕ್ಷಕರ ಹೃದಯಗಳಲ್ಲಿ ಆಳವಾದ ನಂಬಿಕೆಯನ್ನು ಸ್ಥಾಪಿಸಿದೆ ಎಂದು ಬರೆದು ಪೋಸ್ಟ್ ಮಾಡಿದೆ.
1980 ರಿಂದ 2005 ರವರೆಗೆ ಸತತ ಎರಡೂವರೆ ದಶಕಗಳ ಕಾಲ ಡಿಡಿ ನ್ಯೂಸ್‌ನ ಪ್ರಮುಖ ಮುಖವಾಗಿದ್ದ ಅವರು, ಸುದ್ದಿ ಪ್ರಸಾರಕ್ಕೆ ಒಂದು ಘನತೆಯನ್ನು ತಂದುಕೊಟ್ಟವರು. ಅವರ ಶಾಂತ ನಿರೂಪಣೆ, ಘನತೆಯ ಉಪಸ್ಥಿತಿ ಮತ್ತು ವಿಶ್ವಾಸಾರ್ಹ ಧ್ವನಿಗೆ ಹೆಸರುವಾಸಿಯಾಗಿದ್ದರು. ಈ ಮೂಲಕ ಅವರ ಕುಟುಂಬಕ್ಕೆ ಹೃತ್ಪೂರ್ವಕ ಸಂತಾಪಗಳನ್ನು ಸೂಚಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.
ದೂರದರ್ಶನದ ಧೀಮಂತ ಧ್ವನಿ ಸರಳಾ!
ಡಿಡಿ ನ್ಯೂಸ್‌ನಲ್ಲಿ ಮಹೇಶ್ವರಿ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಇವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮುಗಿಸಿದ ನಂತರ, ಡಿಡಿ ಸುದ್ದಿಗೆ ಆಡಿಷನ್​ ನೀಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಅವರು ಉದ್ಘೋಷಕರಾಗಿದ್ದರು. ನಂತರ 2005 ರವರೆಗೆ ನಿರೂಪಕರಾಗಿ ಸೇವೆ ಸಲ್ಲಿಸಿದರು. 

ಗಣ್ಯರಿಂದ ಸಂತಾಪ!

ಮಹೇಶ್ವರಿಯವರ ನಿಧನದ ನಂತರ ಅನೇಕ ಜನರು ಅವರಿಗೆ ಸಂತಾಪ ಸೂಚಿಸಿದ್ದಾರೆ. ಆದಾಗ್ಯೂ, ಕೇರಳ ಕಾಂಗ್ರೆಸ್ ಘಟಕವು ತನ್ನ ಎಕ್ಸ್ ಖಾತೆಯಲ್ಲಿ, ಇಡೀ ತಲೆಮಾರಿನ ಜನರು ಮಹೇಶ್ವರಿಯನ್ನು ನೋಡುತ್ತಾ ಬೆಳೆದವರು. ಅವರ ಶಿಸ್ತು, ಸಂಯಮದ ಉಪಸ್ಥಿತಿಯು ಪ್ರತಿಯೊಬ್ಬರ ಜೀವನದಲ್ಲೂ ಒಂದು ಭಾಗವಾಗಿದೆ. ಸುದ್ದಿ ನಿರೂಪಕರಾಗಿದ್ದ ಸಮಯದಲ್ಲಿ ಅವರು ಪರದೆಯ ಮೇಲೆ ಘನತೆ, ಸ್ಪಷ್ಟತೆ ಮತ್ತು ಶಾಂತ ಆತ್ಮವಿಶ್ವಾಸವನ್ನು ತಂದಂತವರು ಎಂದು ಬರೆದಿದ್ದಾರೆ.
ಆದಾಗ್ಯೂ, ಜೆಎಂಎಂ ನಾಯಕ ಮಿಥಿಲೇಶ್ ಕುಮಾರ್ ಠಾಕೂರ್, ಮಹೇಶ್ವರಿ ಅವರ ನಿಧನವನ್ನು 'ಅತ್ಯಂತ ಹೃದಯವಿದ್ರಾವಕ' ಎಂದು ಕರೆದಿದ್ದು, ಇದು ಭರಿಸಲಾಗದ ನಷ್ಟ ಎಂದು ಹೇಳಿದ್ದಾರೆ (ಏಜೆನ್ಸೀಸ್).