Justice Ujjal Bhuyan | ಪೊಲೀಸ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಜಸ್ಟಿಸ್ ಭುಯಾನ್! 
ದೇಶ

ಎನ್‌ಕೌಂಟರ್ ಎಂಬುದು ಕ್ರಿಮಿನಲ್ ಮನಸ್ಥಿತಿ!...ಪೊಲೀಸ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಜಸ್ಟಿಸ್ ಭುಯಾನ್! | Justice Ujjal Bhuyan

ನವದೆಹಲಿ: ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗ ಹಾಗೂ ದೌರ್ಜನ್ಯದ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ (Justice Ujjal Bhuyan) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳಲ್ಲಿ ಇರಬೇಕಾದ ನಿಷ್ಪಕ್ಷಪಾತ ಹಾಗೂ ತಾಳ್ಮೆಯ ನಡೆ ಕ್ರಮೇಣ ಮಾಯವಾಗುತ್ತಿರುವುದು ಕಂಡುಬರುತ್ತಿದೆ ಎಂದಿರುವ ಅವರು, ಪ್ರತಿಭಟನಾಕಾರರ ಮೇಲೆ ಖುದ್ದು ಪೊಲೀಸ್ ಅಧಿಕಾರಿಗಳೇ ಹಲ್ಲೆ ನಡೆಸುತ್ತಿರುವುದು ತೀವ್ರ ಬೇಸರದ ಸಂಗತಿ ಎಂದು ಹೇಳಿದ್ದಾರೆ.
ನಿವೃತ್ತ ಐಪಿಎಸ್ ಅಧಿಕಾರಿ ಯಶೋವರ್ಧನ್ ಆಜಾದ್ ಅವರ ಪೋಲಿಸಿಂಗ್ ದಿ ರಿಪಬ್ಲಿಕ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಭುಯಾನ್, ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಯುವ ಅಧಿಕಾರಿಗಳು ಸ್ವತಃ ಮುಂಚೂಣಿಯಲ್ಲಿ ನಿಂತು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸುವುದು ದಿಗ್ಭ್ರಮೆ ಮೂಡಿಸುವಂತಿದೆ. ಪೊಲೀಸ್ ಸಿಬ್ಬಂದಿಯಿಂದ ನಿರೀಕ್ಷಿಸಲಾಗುವ ವೃತ್ತಿಪರ ಸಂಯಮ ಕಣ್ಮರೆಯಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಎಂದರು.
ಅತಿಯಾದ ಬಲಪ್ರಯೋಗ ಅಥವಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡದೆಯೂ ಪರಿಣಾಮಕಾರಿಯಾಗಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಸಾಮಾನ್ಯ ಜನರಿಗೆ ರಸ್ತೆಯಲ್ಲಿ ನಿಂತಿರುವ ಪೊಲೀಸರೇ ಸರ್ಕಾರದ ಅಧಿಕಾರ ಮತ್ತು ರಕ್ಷಣೆಯ ಸಂಕೇತವಾಗಿದ್ದಾರೆ. ತಮಗೆ ಅನ್ಯಾಯವಾದಾಗ ಜನರು ಪೊಲೀಸರ ಸಹಾಯ ಕೋರುತ್ತಾರೆ. ಆದ್ದರಿಂದ ಪೊಲೀಸ್ ಪಡೆ ತನ್ನ ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ವಿಚಾರಣೆಯ ನೆಪದಲ್ಲಿ ಕಿರುಕುಳ ಬೇಡ!...

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಹಾಗೂ ಅರೆಸೈನಿಕ ಪಡೆಗಳು ನಡೆಸಿದ ಕಾರ್ಯಾಚರಣೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜುಲೈ 20 ರಂದು ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಸಂಸತ್ ಚಲೋ ಸಂದರ್ಭದಲ್ಲಿ ದೆಹಲಿ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಲಾಠಿಚಾರ್ಜ್, ಅಶ್ರುವಾಯು, ಪೆಲೆಟ್ ಗನ್, ಎಲೆಕ್ಟ್ರಾನಿಕ್ ಲಾಠಿ ಬಳಕೆಯ ದೂರುಗಳು ಮತ್ತು ಮಹಿಳಾ ಪ್ರತಿಭಟನಾಕಾರರ ಮೇಲಿನ ದೌರ್ಜನ್ಯದ ಆರೋಪಗಳನ್ನು ಸಿಸಿಟಿವಿ ಹಾಗೂ ವಿಡಿಯೋ ದೃಶ್ಯಾವಳಿಗಳ ಮೂಲಕ ತನಿಖೆ ನಡೆಸಲಿದೆ.
ಇದೇ ವೇಳೆ ದೇಶದಲ್ಲಿ ಹೆಚ್ಚುತ್ತಿರುವ ಕಸ್ಟಡಿ ಹಿಂಸಾಚಾರ ಮತ್ತು ಸಾವುಗಳ ಕುರಿತು ಪ್ರಸ್ತಾಪಿಸಿದ ಜಸ್ಟಿಸ್ ಭುಯಾನ್, ಇದು ನಾಗರಿಕ ಸಮಾಜದಲ್ಲಿ ನಡೆಯುವ ಅತ್ಯಂತ ಘೋರ ಅಪರಾಧಗಳಲ್ಲಿ ಒಂದಾಗಿದೆ ಎಂದರು. ತನಿಖೆ ಅಥವಾ ವಿಚಾರಣೆಯ ನೆಪದಲ್ಲಿ ಯಾವುದೇ ರೀತಿಯ ಕ್ರೂರ ಅಥವಾ ಅಮಾನವೀಯ ಕಿರುಕುಳ ನೀಡುವುದು ಸಂವಿಧಾನದ ವಿಧಿ 29 ರ ಅಡಿಯಲ್ಲಿ ಅಪರಾಧವಾಗುತ್ತದೆ. ಸರ್ಕಾರಿ ಅಧಿಕಾರಿಗಳೇ ಕಾನೂನು ಮುರಿಯಲು ಪ್ರಾರಂಭಿಸಿದರೆ ಅದು ಸಮಾಜದಲ್ಲಿ ಕಾನೂನಿನ ಬಗ್ಗೆ ಅಗೌರವವನ್ನು ಉಂಟುಮಾಡುತ್ತದೆ ಮತ್ತು ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಒಬ್ಬ ಪ್ರಜೆಯನ್ನು ಬಂಧಿಸಿದ ತಕ್ಷಣ ಆತನ ಮೂಲಭೂತ ಹಕ್ಕುಗಳು ರದ್ದಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎನ್‌ಕೌಂಟರ್ ಸಂಸ್ಕೃತಿ, ಕ್ರಿಮಿನಲ್ ಮನಸ್ಥಿತಿ: ನ್ಯಾಯಮೂರ್ತಿ ಭುಯಾನ್
ನಕಲಿ ಎನ್‌ಕೌಂಟರ್‌ಗಳ ಕುರಿತಾಗಿಯೂ ಮಾತನಾಡಿದ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ಇಂತಹ ಘಟನೆಗಳನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, 2011 ರ ತೀರ್ಪನ್ನು ಉಲ್ಲೇಖಿಸಿದ ಅವರು, ನಕಲಿ ಎನ್‌ಕೌಂಟರ್‌ಗಳು ಕಾನೂನಿನ ಶಾಸನದ ಮೂಲ ತತ್ವವನ್ನೇ ನಾಶಪಡಿಸುತ್ತವೆ. ಕರ್ತವ್ಯನಿರತ ಪೊಲೀಸ್ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅದನ್ನು ಗಂಭೀರ ಅಪರಾಧ ಎಂದು ಪರಿಗಣಿಸಬೇಕು ಎಂದರು. ಎನ್‌ಕೌಂಟರ್ ಸಂಸ್ಕೃತಿಯು ಒಂದು ಕ್ರಿಮಿನಲ್ ಮನಸ್ಥಿತಿಯಾಗಿದ್ದು, ಅದು ಎಂದಿಗೂ ಪೋಲಿಸಿಂಗ್‌ನ ಭಾಗವಾಗಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು(ಏಜೆನ್ಸೀಸ್​).