ಇಂಫಾಲ್: ಮಣಿಪುರದ ಚುರಚಂದ್ಪುರದಲ್ಲಿ ಮದುವೆ ಹೊರಟಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಕಮರಿಗೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ(ಜ. 06) ಮಧ್ಯಾಹ್ನ ಸುಮಾರು 12 ಗಂಟೆಗೆ ಚುರಚಂದ್‌ಪುರ ಬಳಿಯ ಸಿಂಗ್‌ಗಟ್ ಪ್ರದೇಶದ ಪ್ರತ್ಯೇಕವಾದ ಎನ್‌ಗಲ್‌ಜಂಗ್ ಗ್ರಾಮದ ಬಳಿ ತೀಕ್ಷ್ಣವಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದಿದೆ. ವಾಹನದಲ್ಲಿ 30 ರಿಂದ 40 ಜನ ಇದ್ದರೆನ್ನಲಾಗಿದ್ದು, ಸ್ಥಳದಲ್ಲೇ ಮೂವರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ತಂಗ್ಮುನ್‌ಮಂಗ್ ಖುಪ್ಟಾಂಗ್, ಹೌಚಿನ್, ಚಿಂಗ್‌ಂಗೈಹ್ಸಿಯಾಮ್ ಹಾಗೂ ನಿಯಾಂಗ್‌ಜಾನಿಯಾಂಗ್ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ (ಏಜೆನ್ಸೀಸ್)