ವಿಡಿ ಸತೀಶನ್ 
ದೇಶ

ಇಂದು ನೂತನ ಕೇರಳಂ ಮುಖ್ಯಮಂತ್ರಿಯಾಗಿ ವಿಡಿ ಸತೀಶನ್ ಪ್ರಮಾಣವಚನ; ರಾಹುಲ್ ಗಾಂಧಿ, ಖರ್ಗೆ ಸೇರಿ ಹಲವರು ಭಾಗಿ | VD Satheesan

ತಿರುವನಂತಪುರಂ: ಕೇರಳಂ ನೂತನ ಮುಖ್ಯಮಂತ್ರಿಯಾಗಿ ಇಂದು(ಮೇ 18) ವಿಡಿ ಸತೀಶನ್ ಪ್ರಮಾಣವಚನ ಸ್ವೀಕರಿಸಲಿದ್ದು, ಜೊತೆಗೆ 20 ಮಂದಿ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿಗೆ ಗೆಲುವು ಸಾಧಿಸಿ ಅಧಿಕಾರಕ್ಕೇರಿರುವ ಕಾಂಗ್ರೆಸ್​​ ನೇತೃತ್ವದ ಯುಡಿಎಫ್, ನೂತನ ಸಿಎಂ ಆಗಿ ವಿಡಿ ಸತೀಶನ್ ಅವರನ್ನು ಆಯ್ಕೆ ಮಾಡಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಸಿಎಂಗಳಾದ ಸಿದ್ದರಾಮಯ್ಯ, ರೇವಂತ್ ರೆಡ್ಡಿ ಹಾಗೂ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭಾಗವಹಿಸುವ ಸಾಧ್ಯತೆ ಇದೆ.
ಸತೀಶನ್ ಜೊತೆಗೆ 20 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್​ನಿಂದ 11 ಮಂದಿ, ಮುಸ್ಲಿಂ ಲೀಗ್​ನ ಐವರು ಹಾಗೂ ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಕ್ರಾಂತಿಕಾರಿ ಸಮಾಜವಾದಿ ಪಕ್ಷ), ಅನೂಪ್ ಜಾಕೋಬ್ (ಕೇರಳ ಕಾಂಗ್ರೆಸ್-ಜಾಕೋಬ್), ಮತ್ತು ಸಿಪಿ ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್ವಾದಿ ಪಕ್ಷ) ಅವರಿಗೂ ಅವಕಾಶ ಮಾಡಿಕೊಡಲಾಗಿದೆ.
ಕಾಂಗ್ರೆಸ್​ನಿಂದ ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ ಮುರಳೀಧರನ್, ಎ ಪಿ ಅನಿಲ್ ಕುಮಾರ್, ಪಿ ಸಿ ವಿಷ್ಣುನಾಥ್, ರೋಜಿ ಎಂ ಜಾನ್, ಬಿಂದು ಕೃಷ್ಣ, ಎಂ ಲಿಜು, ಟಿ ಸಿದ್ದಿಕ್, ಕೆ ಎ ತುಳಸಿ ಮತ್ತು ಒ ಜೆ ಜನೀಶ್ ಸಚಿವರಾಗಲಿದ್ದಾರೆ.
ಮಿತ್ರ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್​ನಿಂದ ಪಿಕೆ ಕುನ್ಹಾಲಿಕುಟ್ಟಿ, ಕೆಎಂ ಶಾಜಿ, ವಿ ಅಬ್ದುಲ್ ಗಫೂರ್, ಎನ್ ಶಂಸುದ್ದೀನ್ ಮತ್ತು ಪಿಕೆ ಬಶೀರ್ ಸಚಿವರಾಗಲಿದ್ದಾರೆ ಎನ್ನಲಾಗಿದೆ. ಸಂಪುಟದ 14 ಸದಸ್ಯರು ಹೊಸ ಮುಖಗಳಾಗಿದ್ದಾರೆ (ಏಜೆನ್ಸೀಸ್).