VD Satheesan | ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ (VD Satheesan) ಆಯ್ಕೆಯಾಗಿದ್ದಾರೆ ಎಂದು ಕೇರಳ ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಷಿ ಗುರುವಾರ (ಮೇ 14) ಅಧಿಕೃತವಾಗಿ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಹೆಸರುಗಳು ಸಹ ಮುಂಚೂಣಿಯಲ್ಲಿದ್ದವು. ಆದರೆ, ಹೈಕಮಾಂಡ್ ವಿ.ಡಿ. ಸತೀಶನ್ ಹೆಸರನ್ನು ಅಂತಿಮಗೊಳಿಸಿದೆ. ಇತ್ತೀಚಿನ ಚುನಾವಣೆಯಲ್ಲಿ ಯುಡಿಎಫ್ ಪರ ಪ್ರಚಾರದ ಪ್ರಮುಖ ಮುಖವಾಗಿದ್ದ ಸತೀಶನ್, ಎರ್ನಾಕುಲಂ ಜಿಲ್ಲೆಯ ಉತ್ತರ ಪರವೂರು ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಬಹುಪಾಲು ಸದಸ್ಯರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ರನ್ನು ಬೆಂಬಲಿಸಿದ್ದಾರೆ ಎಂಬ ವರದಿಗಳ ನಡುವೆಯೂ, ಜನಸಾಮಾನ್ಯರಿಂದ ವಿ.ಡಿ. ಸತೀಶನ್ಗೆ ಸಿಕ್ಕ ಬೆಂಬಲವು ಈ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದ್ದು, 2021ರ ಚುನಾವಣಾ ಹಿನ್ನಡೆಯ ಬಳಿಕ ಕಳೆದ ಐದು ವರ್ಷಗಳಲ್ಲಿ ಕೇರಳದಲ್ಲಿ ಪಕ್ಷದ ಪ್ರಬಲ ಮುಖವಾಗಿ ಹೊರಹೊಮ್ಮಿದ ಸತೀಶನ್ ಹೋರಾಟವು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿತ್ತು.
ಸಂಕೀರ್ಣಗೊಂಡಿದ್ದ ಆಯ್ಕೆ ಪ್ರಕ್ರಿಯೆ
ಕಾಂಗ್ರೆಸ್ ಪಕ್ಷವು ಅಧಿಕೃತವಾಗಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದೆ ಚುನಾವಣೆ ಎದುರಿಸಿತ್ತು. ಸತೀಶನ್ ಹೆಸರು ಕಾರ್ಯಕರ್ತರ ಮಟ್ಟದಲ್ಲಿ ಮೊದಲ ಆಯ್ಕೆಯಾಗಿದ್ದರೂ, ಕೊನೆಯ ಕ್ಷಣದಲ್ಲಿ ಕೆ.ಸಿ. ವೇಣುಗೋಪಾಲ್ ಸ್ಪರ್ಧೆಗೆ ಇಳಿದದ್ದು ಹೈಕಮಾಂಡ್‌ನ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ತುಸು ಸಂಕೀರ್ಣಗೊಳಿಸಿತ್ತು. ಅಂತಿಮವಾಗಿ ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಒಮ್ಮತದ ಸೂತ್ರವನ್ನು ಅನುಸರಿಸಿತು. ಇತರ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದ ಬಳಿಕ ವಿ.ಡಿ. ಸತೀಶನ್ರನ್ನು ಕೇರಳದ ನೂತನ ಮುಖ್ಯಮಂತ್ರಿಯಾಗಿ ನೇಮಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಮೂಲಗಳು ತಿಳಿಸಿವೆ.
ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ವೇಣುಗೋಪಾಲ್
ಈ ನಿರ್ಧಾರವನ್ನು ಕೆ.ಸಿ. ವೇಣುಗೋಪಾಲ್ ಸ್ವಾಗತಿಸಿದ್ದು, ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ಪಕ್ಷದ ನಾಯಕತ್ವವು ಎಲ್ಲಾ ಆಯಾಮಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಂಡಿದೆ ಮತ್ತು ಇದರಲ್ಲಿ ತಮಗೆ ಯಾವುದೇ ಅಸಮಾಧಾನವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮಗೆ ವೈಯಕ್ತಿಕ ಹಿತಾಸಕ್ತಿಗಿಂತ ಪಕ್ಷ ಮತ್ತು ಕಾರ್ಯಕರ್ತರ ಹಿತವೇ ಮುಖ್ಯವಾಗಿದ್ದು, ಅದರ ಶಿಸ್ತಿಗೆ ತಾವು ಸದಾ ಬದ್ಧರಾಗಿರುವುದಾಗಿ ಅವರು ತಿಳಿಸಿದರು. ಪಕ್ಷದೊಳಗೆ ನಡೆದಿದ್ದ ಬಣ ಜಗಳ ಮತ್ತು ತಮ್ಮ ವಿರುದ್ಧ ಕೇಳಿಬಂದಿದ್ದ ಟೀಕೆಗಳ ಬಗ್ಗೆಯೂ ಮಾತನಾಡಿದ ವೇಣುಗೋಪಾಲ್, ಟೀಕೆ ಮಾಡುವವರು ಅದನ್ನು ಮುಂದುವರಿಸಬಹುದು ಆದರೆ ತಾವು ಮಾತ್ರ ಪಕ್ಷದ ಏಳಿಗೆಗಾಗಿ ಶ್ರಮಿಸುವುದಾಗಿ ಹೇಳಿದರು. ಈ ಮೂಲಕ ಕೇರಳ ಕಾಂಗ್ರೆಸ್‌ನಲ್ಲಿ ಉಂಟಾಗಿದ್ದ ನಾಯಕತ್ವದ ಗೊಂದಲವನ್ನು ಪರಿಹರಿಸಿ, ಎಲ್ಲರೂ ಒಗ್ಗಟ್ಟಾಗಿ ಹೊಸ ಸರ್ಕಾರ ರಚನೆಯತ್ತ ಮುನ್ನಡೆಯುವ ಸಂದೇಶವನ್ನು ಅವರು ನೀಡಿದ್ದಾರೆ.
ಕೇರಳ ವಿಧಾನಸಭಾ ಚುನಾವಣಾ ಫಲಿತಾಂಶ
ಈ ಬಾರಿ ಕೇರಳದಲ್ಲಿ ಯುಡಿಎಫ್ ಸುನಾಮಿ ಎದ್ದಿದ್ದು, ಒಟ್ಟು 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
ಕಾಂಗ್ರೆಸ್: 63 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಎಲ್‌ಡಿಎಫ್ (LDF): ಕಳೆದ ಬಾರಿ (2021) 99 ಸ್ಥಾನ ಗೆದ್ದಿದ್ದ ಆಡಳಿತಾರೂಢ ಎಡರಂಗವು ಈ ಬಾರಿ ಕೇವಲ 35 ಸ್ಥಾನಗಳಿಗೆ ಕುಸಿಯುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ.
ದಶಕದ ಎಡರಂಗದ ಆಳ್ವಿಕೆಯನ್ನು ಕೊನೆಗಾಣಿಸಿ ಯುಡಿಎಫ್ ಅಧಿಕಾರಕ್ಕೆ ಬರಲು ಸತೀಶನ್ ಅವರ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿದೆ(ಏಜೆನ್ಸೀಸ್).