ಎಎಂ ಶಹಜಹಾನ್ ಮತ್ತು ವನ್ನಿ ಅರಸು 
ದೇಶ

ಟಿವಿಕೆ ಸರ್ಕಾರದ ಭಾಗವಾದ ವಿಸಿಕೆ, ಮುಸ್ಲಿಂ ಲೀಗ್; ವನ್ನಿ ಅರಸು ಮತ್ತು ಎಎಂ ಶಹಜಹಾನ್ ಸಚಿವರಾಗಿ ಪ್ರಮಾಣವಚನ | TVK government

ಚೆನ್ನೈ: ತಮಿಳುನಾಡಿನ ನಟ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ(TVK government) ಬಾಹ್ಯ ಬೆಂಬಲ ನೀಡಿದ್ದ ವಿಸಿಕೆ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಇಂದು(ಮೇ 22) ಸರ್ಕಾರದ ಭಾಗವಾಗಿದ್ದು, ವಿಸಿಕೆಯ ವನ್ನಿ ಅರಸು ಮತ್ತು ಮುಸ್ಲಿಂ ಲೀಗ್​ನ ಎಎಂ ಶಹಜಹಾನ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಚೆನ್ನೈನ ಲೋಕ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ ವಿಜಯ್ ಅವರ ಸಚಿವ ಸಂಪುಟವು 35 ಸಚಿವರೊಂದಿಗೆ ಭರ್ತಿಯಾಗಿದೆ.
ಟಿವಿಕೆ ಸರ್ಕಾರ ಈಗ ಪೂರ್ಣ ಪ್ರಮಾಣದ ಸಮ್ಮಿಶ್ರ ಸರ್ಕಾರವಾಗಿದ್ದು, ಕಾಂಗ್ರೆಸ್, ವಿಸಿಕೆ ಮತ್ತು ಐಯುಎಂಎಲ್ ಚುನಾವಣೋತ್ತರ ಮಿತ್ರಪಕ್ಷಗಳಾಗಿವೆ. ಆದರೆ ಸಿಪಿಐ ಮತ್ತು ಸಿಪಿಎಂನ ನಾಲ್ವರು ಸದಸ್ಯರು ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡಿದ್ದಾರೆ. ಇನ್ನೂ ಡಿಎಂಕೆಯ ತನ್ನ ಮಿತ್ರಪಕ್ಷಗಳು ಸರ್ಕಾರದ ಭಾಗವಾಗಿರೋದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ತಿಂಗಳ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದ ಹಿನ್ನೆಲೆ, 108 ಸ್ಥಾನ ಪಡೆದಿದ್ದ ಟಿವಿಕೆಗೆ ಸರ್ಕಾರ ರಚಿಸಲು ಕಾಂಗ್ರೆಸ್ ಮೊದಲು ಬೆಂಬಲ ನೀಡಿತ್ತು. ಬಳಿಕ ಡಿಎಂಕೆಯ ದೀರ್ಘಕಾಲದ ಮಿತ್ರಪಕ್ಷಗಳಾದ ಸಿಪಿಐ, ಸಿಪಿಎಂ, ವಿಸಿಕೆ ಹಾಗೂ ಮುಸ್ಲಿಂ ಲೀಗ್ ಬಾಹ್ಯಬೆಂಬಲ ನೀಡುವುದಾಗಿ ಘೋಷಿಸಿ, ಸರ್ಕಾರ ರಚನೆಗೆ ಸಹಕರಿಸಿದ್ದವು (ಏಜೆನ್ಸೀಸ್).