ದಳಪತಿ ವಿಜಯ್ ಮತ್ತು ತೋಲ್ ತಿರುಮಾವಲವನ್
ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ರಾಜಕೀಯದ ಚೊಚ್ಚಲ ಪ್ರವೇಶದಲ್ಲಿ ಇತಿಹಾಸ ಸೃಷ್ಟಿಸಿ ಬಹುಮತದ ಕೊರತೆ ಎದುರಿಸುತ್ತಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ತಮ್ಮ ಪಕ್ಷ ಪರಿಗಣಿಸಿಲ್ಲ ಎಂದು ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್(Thol Thirumavalavan) ಹೇಳಿದ್ದಾರೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆಗೆ ಬಹುಮತವಿಲ್ಲದ ಕಾರಣ, ಎಡ ಪಕ್ಷಗಳು ಮತ್ತು ವಿಸಿಕೆ ಪಕ್ಷವು ಬೆಂಬಲ ನೀಡುವ ಬಗ್ಗೆ ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತಮ್ಮ ಪಕ್ಷ ಮತ್ತು ಎಡಪಂಥೀಯ ಪಕ್ಷಗಳಾದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮತ್ತು ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬಹಳ ಹಿಂದಿನಿಂದಲೂ ಮೂರು ಪಕ್ಷಗಳು ಜಾತ್ಯತೀತ ರಾಜಕೀಯದಲ್ಲಿ ಹೊಂದಿಕೊಂಡಿವೆ.
ಎಲ್ಲಾ ಪ್ರಮುಖ ರಾಜಕೀಯ ನಿರ್ಧಾರಗಳನ್ನು ಮೂರು ಪಕ್ಷಗಳು ಜಂಟಿಯಾಗಿ ತೆಗೆದುಕೊಳ್ಳುತ್ತವೆ. ಟಿವಿಕೆಗೆ ಬೆಂಬಲ ನೀಡುವ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಮತ್ತು ಆ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.
234 ಸ್ಥಾನಗಳ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಐ(ಎಂ) 2, ಮತ್ತು ವಿಸಿಕೆ 2 ಸ್ಥಾನಗಳನ್ನು ಗೆದ್ದಿವೆ. ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನ ಗೆದ್ದಿವೆ (ಏಜೆನ್ಸೀಸ್).