ಟಿವಿಕೆ ಪಕ್ಷದ ನಾಯಕ ವಿಜಯ್​ 
ದೇಶ

ಅನುಭವವೇ ಇಲ್ಲದ ನಾಯಕರಿಂದ ವಿಜಯ್​ ದಿಕ್ಕು ತಪ್ಪಿಸುವ ಕಿವಿಮಾತು! ಡೆಪ್ಯೂಟಿ ಸಿಎಂ ಸ್ಥಾನಕ್ಕೆ ವಿಸಿಕೆ ಪಟ್ಟು

ಪ್ರಮುಖ ಮುಖ್ಯಾಂಶಗಳು

  • ಮೂರು ದಿನಗಳಾದರೂ ವಿಜಯ್​ಗೆ ಸರ್ಕಾರ ರಚಿಸಲು ಸಿಕ್ತಿಲ್ಲ ಬಹುಮತ
  • ವಿಸಿಕೆ ಬೆಂಬಲ ನೀಡಿದ್ದೇ ಆದರೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ
  • ಮ್ಯಾಜಿಕ್ ನಂಬರ್​ ಆಗಿದ್ದರೂ ವಿಜಯ್​ ಹಕ್ಕು ಮಂಡಿಸಲು ಇನ್ನೂ ಚಿಂತನೆ
ಚೆನ್ನೈ: ವಿದುತಲೈ ಚಿರುತೈಗಲ್ ಕಚ್ಚಿಯ (ವಿಸಿಕೆ) ಇಬ್ಬರು ಶಾಸಕರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವ ಮೂಲಕ ವಿಜಯ್​ಗೆ ಬಹುಮತ ಸಾಧಿಸಲು ಕಾರಣರಾಗಿದ್ದೇ ಆದರೂ ಮುಂದಿಟ್ಟಿರುವ ಡಿಮಾಂಡ್​ ಮಾತ್ರ ಸದ್ಯ ಟಿವಿಕೆ ನಾಯಕನಿಗೆ ಚೆಕ್​ಮೇಟ್​ ಇಟ್ಟಂತಾಗಿದೆ. 
ವರದಿಗಳ ಪ್ರಕಾರ, ವಿಸಿಕೆ ಇನ್ನೂ ತನ್ನ ಬೆಂಬಲವನ್ನು ಘೋಷಿಸಿಲ್ಲವಾದರೂ, ಅವರ ರಾಜ್ಯ ಸಮಿತಿ ಸಭೆಯಲ್ಲಿ ಟಿವಿಕೆ ಪರವಾಗಿ ನಿರ್ಧಾರ ಬರುವ ಸೂಚನೆಗಳಿವೆ ಎನ್ನಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷ ಥೋಲ್ ತಿರುಮಲವನ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, 'ಇಂಡಿಯಾ' ಫ್ರಂಟ್‌ಗೆ ಸೇರಿದ ವಿಸಿಕೆ, ಟಿವಿಕೆಯನ್ನು ಬೆಂಬಲಿಸುವುದಾಗಿ ಮೊದಲೇ ಘೋಷಿಸಿತ್ತು ಎಂದಿದ್ದಾರೆ. 
ಸಭೆಯ ನಂತರ ಇಂದು ಸಂಜೆ 4 ಗಂಟೆಗೆ ವಿಸಿಕೆ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದು ಹೇಳಲಾಗಿದೆ. "ಟಿವಿಕೆಯ ಅಧಿಕೃತ ಬೆಂಬಲದ ಬಳಿಕವೇ ವಿಜಯ್​ ಅವರ ಪ್ರಮಾಣ ವಚನ ಸ್ವೀಕಾರದ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು. ಯಾರು ಆಡಳಿತ ನಡೆಸಬೇಕೆಂದು ನಾವು ನಿರ್ಧರಿಸುತ್ತೇವೆ" ಎಂದು ವಿಸಿಕೆ ನಿಯೋಜಿತ ಶಾಸಕ ವನ್ನಿ ಅರಸು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಸಿಕೆ ಸಿಎಂ ಆಗಿ ವಿಜಯ್ ಅಧಿಕಾರ ಸ್ವೀಕರಿಸಿದರೆ, ತಮಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕೆಂದು ಡಿಮಾಂಡ್​ ಮಾಡಿದೆ. ವಿಜಯ್, ತಿರುಮಾವಲನ್ ಅವರನ್ನು ಗೌರವಿಸುವ ರೀತಿಯಲ್ಲಿ ವರ್ತಿಸಲಿಲ್ಲ ಎಂಬ ಅಹಂಕಾರದ ಸಮಸ್ಯೆಯೂ ಇದೆ. ಟಿವಿಕೆ ನಾಯಕ ತಮಿಳುನಾಡು ಆಳ್ವಿಕೆ ನಡೆಸದಂತೆ ತಡೆಯಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್ ಆರೋಪಿಸಿದ್ದಾರೆ. 
ರಾಹುಲ್ ಗಾಂಧಿ ಪ್ರಮಾಣವಚನ ಸ್ವೀಕಾರಕ್ಕಾಗಿ ಇಂದು ಬೆಳಗ್ಗೆ 8 ಗಂಟೆಗೆ ಬರಲು ನಿರ್ಧರಿಸಿದ್ದರು. ಆದರೆ, ಪರಿಸ್ಥಿತಿಯಲ್ಲಿನ ಬದಲಾವಣೆಯಿಂದಾಗಿ ಪ್ರವಾಸವನ್ನು ರದ್ದುಗೊಳಿಸಿದರು ಎನ್ನಲಾಗಿದೆ. ಈ ಮಧ್ಯೆ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಪುದುಚೇರಿಯ ರೆಸಾರ್ಟ್‌ನಲ್ಲಿರುವ ಶಾಸಕರಿಗೆ ಇಂದು ಮಧ್ಯಾಹ್ನದೊಳಗೆ ಚೆನ್ನೈ ತಲುಪಲು ಸೂಚನೆ ನೀಡಿದರು. ಇದು ಹಕ್ಕು ಸಾಧಿಸುವುದೇ ಎಂಬುದು ಸ್ಪಷ್ಟವಾಗಿಲ್ಲ. ವಿಧಾನಸಭೆ ವಿಸರ್ಜನೆ ಅಥವಾ ಸ್ಥಗಿತಗೊಳ್ಳುವ ಪರಿಸ್ಥಿತಿ ಇರಬಾರದು ಮತ್ತು ಸರ್ಕಾರ ರಚನೆಯಾಗಬೇಕು ಎಂದು ಎಂಕೆ ಸ್ಟಾಲಿನ್ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಈ ನಿಲುವು ತಮಗೆ ಪ್ರಯೋಜನವನ್ನು ನೀಡುತ್ತದೆ ಎಂದು ಎಐಎಡಿಎಂಕೆ ನಂಬಿದೆ. ಮತ್ತೊಂದೆಡೆ, ಅನುಭವ ಇಲ್ಲದ ನಾಯಕರ ತಪ್ಪು ಸಲಹೆಯು ವಿಜಯ್ ಮತ್ತು ಅವರ ಪಕ್ಷವನ್ನು ದೊಡ್ಡ ಗೊಂದಲಕ್ಕೆ ಸಿಲುಕಿಸುತ್ತಿದೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ವಿಜಯ್‌ಗೆ ಸಾಮಾನ್ಯ ಜನರಲ್ಲಿ ಬೆಂಬಲ ಹತ್ತು ಪಟ್ಟು ಹೆಚ್ಚಾಗಿದೆ. ಅದು ಹೇಗೆಂದರೆ, ಟಿವಿಕೆ ಸರ್ಕಾರ ರಚಿಸುವುದನ್ನು ತಡೆಯಲು ರಾಜಕೀಯ ಕುತಂತ್ರಗಳನ್ನು ಕಣ್ಣಿಗೆ ಕಾಣದಂತೆ ನಡೆಯುತ್ತಿರುವುದು ಭವಿಷ್ಯದಲ್ಲಿ ನಟ-ರಾಜಕಾರಣಿಯಾಗಿರುವ ವಿಜಯ್​ ಅಧಿಕಾರಕ್ಕೆ ಪ್ಲಸ್​ ಆಗುವುದು ಖಚಿತ ಎಂಬ ಸಂಗತಿ ತಮಿಳುನಾಡು ಜನತೆ ಮತ್ತು ಡಿಎಂಕೆ, ಎಐಎಡಿಎಂಕೆಗೂ ಚೆನ್ನಾಗಿ ತಿಳಿದಿದೆ ಎಂಬುದರಲ್ಲಿ ಅನುಮಾನ ಬೇಡ,(ಏಜೆನ್ಸೀಸ್).