ವಿಸಿ ಸಜ್ಜನರ್​, ಹೈದರಾಬಾದ್ ನಗರ ಪೊಲೀಸ್ ಆಯುಕ್ತರು 
ದೇಶ

ಮಾಹಿತಿ ಸಿಕ್ಕಿದ್ರೆ ಮೊದಲು ನಮಗೆ ತಿಳಿಸಿ! ಐಪಿಎಲ್​ ಶುರುವಿನ ಬೆನ್ನಲ್ಲೇ ಜನರಿಗೆ ವಿಸಿ ಸಜ್ಜನರ್​ ಖಡಕ್ ವಾರ್ನಿಂಗ್​

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ (ಮಾ.28) ಐಪಿಎಲ್​ 19ನೇ ಆವೃತ್ತಿ ಆರಂಭ
  • ಐಪಿಎಲ್ ಶುರುವಿನ ಬೆನ್ನಲ್ಲೇ ಜನರಿಗೆ ಹುಬ್ಬಳ್ಳಿ ಹುಲಿ ಸಿಪಿ ಸಜ್ಜನರ್ ಖಡಕ್ ಎಚ್ಚರಿಕೆ
  • ಬೆಟ್ಟಿಂಗ್ ಮಾಹಿತಿ ಸಿಕ್ಕರೆ ಮೊದಲು ನಮಗೆ ತಿಳಿಸಿ ಎಂದು ವಿನಂತಿ
ಹೈದರಾಬಾದ್​: ಇಂದಿನಿಂದ (ಮಾ.28) ಐಪಿಎಲ್​ 19ನೇ ಆವೃತ್ತಿ ಶುರುವಾಗಲಿದ್ದು, ಮೊದಲ ಪಂದ್ಯ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ನಡೆಯಲಿದೆ. ಈ ಪಂದ್ಯ ಶುರುವಿಗೂ ಮೊದಲು ಕ್ರಿಕೆಟ್​ ಅಭಿಮಾನಿಗಳಿಗೆ ಮತ್ತು ಜನರಿಗೆ ದಕ್ಷ ಪೊಲೀಸ್​ ಅಧಿಕಾರಿ ಸಿಪಿ ಸಜ್ಜನರ್​ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಸುಮಾರು ಎರಡು ತಿಂಗಳ ಕಾಲ ನಡೆಯುವ ಈ ಚುಟುಕು ಕ್ರಿಕೆಟ್​ ಲೀಗ್​ ಕ್ರಿಕೆಟ್​ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆ ಎಂಬುದರಲ್ಲಿ ಕಿಂಚಿತ್ತು ಅನುಮಾನವಿಲ್ಲ. ಯಾವ ಟಿ20 ಲೀಗ್​ಗೂ ಇಲ್ಲದ ಕ್ರೇಜ್​, ಅಭಿಮಾನಿ ಬಳಗ ಭಾರತದ ಐಪಿಎಲ್​ಗೆ ಇರುವುದು ನಿಜಕ್ಕೂ ಹುಬ್ಬೇರಿಸುವ ಸಂಗತಿಯೇ. ಇಂಡಿಯನ್ ಪ್ರೀಮಿಯರ್ ಲೀಗ್​ ಬಂತೆಂದರೆ, ಬೆಟ್ಟಿಂಗ್ ಪದ ಬಲು ಜೋರಾಗಿ ಸದ್ದು ಮಾಡಲಾರಂಭಿಸುತ್ತೆ. ಇದನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆ ನೀಡಿರುವ ಸಜ್ಜನರ್​, ಇದರ ಬಗ್ಗೆ ಮಾಹಿತಿ ಇದ್ದರೆ ಅಥವಾ ಸಿಕ್ಕರೆ ಮೊದಲು ನಮಗೆ ತಿಳಿಸಿ ಎಂದಿದ್ದಾರೆ.
ಲಕ್ಷ, ಕೋಟಿ ರೂ.ಗಳಲ್ಲಿ ನಡೆಯುವ ಬೆಟ್ಟಿಂಗ್ ದಂಧೆಯಲ್ಲಿ ಅನೇಕರು ನಷ್ಟ ಅನುಭವಿಸಿ, ಸಾಲ ತೀರಿಸಲಾಗದೆ, ಕುಟುಂಬವನ್ನು ಬೀದಿಗೆ ತಂದು, ಕಡೆಗೆ ಆತ್ಮಹತ್ಯೆಕ್ಕೆ ಶರಣಾದ ಅನೇಕ ಘಟನೆಗಳು ಈ ಹಿಂದೆ ವರದಿಯಾಗಿವೆ. ಅತಿ ಮುಖ್ಯವಾಗಿ ಬೆಟ್ಟಿಂಗ್​ನಿಂದಾಗಿ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದ, ಹೈದರಾಬಾದ್ ಪೊಲೀಸರು ಈ ಬಾರಿ ಐಪಿಎಲ್ ಬೆಟ್ಟಿಂಗ್ ದಂಧೆಗೆ ಬ್ರೇಕ್​ ಹಾಕಲು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್​ (ಪ್ರಸ್ತುತ ಎಕ್ಸ್​) ಖಾತೆಯಲ್ಲಿ ಬರೆದುಕೊಂಡಿರುವ ಸಜ್ಜನರ್​, ಐಪಿಎಲ್ ಸೀಸನ್ ಆರಂಭವಾಗುತ್ತಿದೆ. ಕ್ರಿಕೆಟ್ ಅನ್ನು ಕ್ರೀಡೆಯಾಗಿ ಆನಂದಿಸಿ. ಬೆಟ್ಟಿಂಗ್‌ನಲ್ಲಿ ಸಿಲುಕಿ ನಿಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದರು. ಸರ್ಕಾರವು ಈ ಹಿಂದೆ #SayNoToBettingApps ಅಭಿಯಾನದ ಮೂಲಕ ನೂರಾರು ಬೆಟ್ಟಿಂಗ್ ಆ್ಯಪ್​ಗಳನ್ನು ನಿಷೇಧಿಸಿದ್ದರೂ, ಈಗ ಈ ವಂಚನೆಯು ಟೆಲಿಗ್ರಾಮ್, ವಾಟ್ಸ್​ಆ್ಯಪ್​ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಹೊಸ ರೂಪವನ್ನು ತಾಳಿದೆ. ಕೇವಲ ಹಣಕ್ಕಾಗಿ ಇಂತಹ ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುವ ಪ್ರಭಾವಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಜ್ಜನರ್ ಎಚ್ಚರಿಸಿದ್ದಾರೆ.
ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ಫಾರ್ಮ್‌ಹೌಸ್‌ಗಳು ಮತ್ತು ನಿರ್ಜನ ಹಾಗೂ ರಹಸ್ಯ ಪ್ರದೇಶಗಳಲ್ಲಿ ಆಫ್‌ಲೈನ್ ಬೆಟ್ಟಿಂಗ್‌ ಮೇಲೆಯೂ ನಾವು ವಿಶೇಷ ನಿಗಾ ಇಟ್ಟಿದ್ದೇವೆ. ಬೆಟ್ಟಿಂಗ್​ಗಾಗಿ ಕುಟುಂಬಗಳನ್ನು ಸಾಲಕ್ಕೆ ಸಿಲುಕಿಸಿ, ಅವರನ್ನು ಬೀದಿಗೆ ತರಬೇಡಿ. ನಿಮ್ಮ ಸುತ್ತಮುತ್ತಲು ಯಾರಾದರೂ ಬೆಟ್ಟಿಂಗ್‌ನಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದ್ದರೆ, ತಕ್ಷಣವೇ 100ಗೆ ಡಯಲ್ ಮಾಡಿ ಅಥವಾ ನಮ್ಮ ವಾಟ್ಸ್​ಆ್ಯಪ್​ 94906 16555 ನಂಬರ್​ಗೆ​ ತಿಳಿಸಿ ಎಂದು ಸಜ್ಜನರ್ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).