ವಾರಾಣಸಿಯಲ್ಲಿ ಗಂಗಾ ನದಿ ನೀರಿನ ಮಟ್ಟ ಹೆಚ್ಚಾಗಿ ಘಾಟ್‌ಗಳು ಜಲಾವೃತ
- ವಾರಾಣಸಿಯಲ್ಲಿ ಗಂಗಾ ನದಿ ನೀರಿನ ಮಟ್ಟ ಭಾರೀ ಏರಿಕೆ
- 84 ಗಂಗಾ ಘಾಟ್‌ಗಳು ಜಲಾವೃತ, ದೋಣಿ ಸಂಚಾರ ಬಂದ್
- ನಾಮೋ ಘಾಟ್‌ನ ‘ನಮಸ್ತೆ’ ಪ್ರತಿಮೆ ಬಹುತೇಕ ಮುಳುಗಡೆ
Varanasi flood: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಧಾರಾಕಾರ ಮಳೆಯಿಂದ ಗಂಗಾ ನದಿ ನೀರಿನ ಮಟ್ಟ ಭಾರೀ ಏರಿಕೆ ಕಂಡಿದೆ. ನಗರದ ಎಲ್ಲಾ 84 ಘಾಟ್‌ಗಳು ಜಲಾವೃತವಾಗಿವೆ. ತಗ್ಗು ಪ್ರದೇಶಗಳಲ್ಲೂ ನೀರು ನುಗ್ಗಿದ್ದು, ಪ್ರವಾಹದ ಆತಂಕ ಹೆಚ್ಚಾಗಿದೆ.
ಸದ್ಯ ಗಂಗಾ ನೀರಿನ ಮಟ್ಟ 69.40 ಮೀಟರ್ಗೆ ಏರಿದ್ದು, ಅಪಾಯದ ಮಟ್ಟ 71.26 ಮೀಟರ್ ತಲುಪಿದೆ. ನೀರಿನ ಮಟ್ಟ ಹೆಚ್ಚಾದ್ದರಿಂದ ವಾರಾಣಸಿಯ ಹಲವು ಘಾಟ್‌ಗಳು ಜಲಾವೃತವಾಗಿದ್ದು, ನಾಮೋ ಘಾಟ್‌ನ ‘ನಮಸ್ತೆ’ ಪ್ರತಿಮೆಯೂ ಬಹುತೇಕ ಮುಳುಗಿದೆ. ಧಾರಕಾರ ಮಳೆಯಿಂದ ರಿವರ್ ಪೊಲೀಸ್ ಕಮಿಷನರೇಟ್ ಕಚೇರಿಗೂ ನೀರು ನುಗ್ಗಿದೆ.
ತಗ್ಗು ಪ್ರದೇಶದ ನಿವಾಸಿಗಳ ಸ್ಥಳಾಂತರ
ಗಂಗಾ ನೀರಿನ ಮಟ್ಟ ಏರಿಕೆಯಾಗಿದ್ದು, ನದಿಯಲ್ಲಿ ನೀರು ಹಿಮ್ಮುಖವಾಗಿ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ನದಿಯ ದಡದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಲ್ಲಿನ ನಿವಾಸಿಗಳು ಸುರಕ್ಷಿತ ಜಾಗಗಳತ್ತ
ಸ್ಥಳಾಂತರ ಮಾಡಲಾಗುತ್ತಿದೆ.
ಪ್ರವಾಹದ ಭೀತಿ ಹಿನ್ನೆಲೆ ವಾರಾಣಸಿ ಜಿಲ್ಲಾಡಳಿತ ಸಿದ್ಧತೆ ಚುರುಕುಗೊಳಿಸಿದೆ. ನಗರದಾದ್ಯಂತ 61 ಪರಿಹಾರ ಶಿಬಿರ ಹಾಗೂ 21 ಪ್ರವಾಹ ನಿಗಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 198 ದೋಣಿಗಳನ್ನು ಸಿದ್ಧವಾಗಿಡಲಾಗಿದ್ದು, ಆಹಾರ, ನೀರು, ವೈದ್ಯಕೀಯ ಸೇರಿದಂತೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
ಎನ್‌ಡಿಆರ್‌ಎಫ್, ವಾಟರ್ ಪೊಲೀಸ್ ಅಲರ್ಟ್
ಪ್ರವಾಹ ಪರಿಸ್ಥಿತಿ ಎದುರಾದರೆ ತಕ್ಷಣ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್, ವಾಟರ್ ಪೊಲೀಸ್ ಮತ್ತು ಪಿಎಸಿ ತಂಡಗಳನ್ನು ಸನ್ನದ್ಧವಾಗಿವೆ. ನೆರೆ ಹೆಚ್ಚಾದರೆ ಜಾನುವಾರುಗಳ ಸುರಕ್ಷತೆಗಾಗಿ ಮೇವು, ನೀರು ಹಾಗೂ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಮಾಡಿದೆ.(ಏಜೇನ್ಸೀಸ್).